ಬೆಂಗಳೂರು ಮಳೆ: ಅಂಡರ್‌ಪಾಸ್‌ ಫುಟ್‌ಪಾತ್ ಮೇಲೆ ಬಂತು ಕೊಳಕುಮಂಡಲ ಹಾವು! ವಿಡಿಯೋ ವೈರಲ್

Published : Oct 06, 2026, 01:37 PM IST
Bengaluru Russell Viper snake

ಸಾರಾಂಶ

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಕ್ಕೂರು ಬಳಿಯ ಅಂಡರ್‌ಪಾಸ್ ಜಲಾವೃತಗೊಂಡಿದ್ದು, ಪಾದಾಚಾರಿ ಮಾರ್ಗದಲ್ಲಿ ಅತ್ಯಂತ ವಿಷಕಾರಿ ಕೊಳಕುಮಂಡಲ ಹಾವು ಪ್ರತ್ಯಕ್ಷವಾಗಿದೆ. ಇದರ ಜೊತೆಗೆ ಹಳೇ ಮದ್ರಾಸ್ ರಸ್ತೆ ಮತ್ತು ಬಸವೇಶ್ವರ ನಗರದಲ್ಲಿ ಮರಗಳು ಧರೆಗುರುಳಿ ಅವಾಂತರ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗಿನ ಜಾವ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಬಹುತೇಕವಾಗಿ ಹೊಳೆಗಳಂತಾಗಿದ್ದವು. ಇನ್ನು ಅಂಡರ್‌ಪಾಸ್‌ಗಳು ಅಕ್ಷರಶಃ ಕೆರೆಗಳಾಗಿ ಮಾರ್ಪಟ್ಟಿದ್ದವು. ಬೆಳಗ್ಗೆ ಕೆಲಸ, ಕಚೇರಿಗಳಿಗೆ ಹೊರಟಿದ್ದ ಜನರು ಮಳೆ ನೀರಿನಿಂದಾಗಿ ಭಾರೀ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಅಂಡರ್‌ಪಾಸ್ ಚಂಡಿಯಲ್ಲಿದ್ದ ಅತ್ಯಂತ ವಿಷಕಾರಿ ಕೊಳಕುಮಂಡಲ ಹಾವೊಂದು ಮಳೆ ನೀರು ಚರಂಡಿಯಲ್ಲಿ ತುಂಬಿಕೊಂಡಿದ್ದರಿಂದ ಅಲ್ಲಿಂದ ಮೇಲೆ ಬಂದು ಪಾದಾಚಾರಿ ಮಾರ್ಗದಲ್ಲಿ ಹಾಯಾಗಿ ಮಲಗಿದೆ. ಒಂದು ವೇಳೆ ಪಾದಾಚಾರಿಗಳು ಓಡಾಡುವಾಗ ಈ ಹಾವು ಏನಾದರೂ ಕಚ್ಚಿದರೆ ಶಾಶ್ವತವಾಗಿ ಕಚ್ಚಿಸಿಕೊಂಡವರು ಮಲಗುತ್ತಾರೆ.

ಹೌದು, ಜಕ್ಕೂರು ಬಳಿಯಿರುವ ಮಿಲಿಟರಿ ಸಹಕಾರಿ ಎಸ್ಟೇಟ್ ಮತ್ತು ವಸತಿ ಸಂಘ-ಎಂಸಿಇಹೆಚ್‌ಎಸ್ (Military Cooperative Estate and Housing Society-MCECHS) ಲೇಔಟ್‌ನ ಬಳಿಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತುಕೊಂಡಿತ್ತು. ಅಂಡರ್ ಪಾಸ್ ರಸ್ತೆಯ ಪಕ್ಕದಲ್ಲಿ ನೀರು ಹರಿದು ಹೋಗಲು ಚಂರಂಡಿ ನಿರ್ಮಿಸಲಾಗಿದ್ದು, ಅದರ ಮೇಲೆ ಜನರು ಓಡಾಡುವುದಕ್ಕೆ ಪಾದಾಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಆದರೆ, ಚರಂಡಿಯಲ್ಲಿ ಮಳೆನೀರು ಹರಿದುಹೋಗದೇ ಹೂಳು ತುಂಬಿಕೊಂಡು ಅಲ್ಲಿಯೇ ಬ್ಲಾಕ್ ಆಗಿತ್ತು. ಹಾಗಾಗಿ, ನೀರಿನಲ್ಲಿದ್ದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಕೊಳಕುಮಂಡಲ ಹಾವು ಪಾದಾಚಾರಿ ಮಾರ್ಗದ ಮೇಲೆ ಬಂದು ಹಾಯಾಗಿ ಮಲಗಿದೆ. ಅದನ್ನು ದಾರಿಹೋಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 4.5 ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋ ವೀಕ್ಷಣೆ ಮಾಡಿದ್ದು, 12 ಸಾವಿರಕ್ಕೂ ಅಧಿಕ ಜನರು ಶೇರ್ ಮಾಡಿಕೊಂಡಿದ್ದಾರೆ.

ಬಸ್ ಮೇಲೆ ಬಿದ್ದ ಮರ

ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ವೇಳೆ ಸುರಿದ ಭಾರೀ ಮಳೆಗೆ ಬಹುತೇಕ ಕಡೆ ಅವಾಂತರಗಳು ಸೃಷ್ಟಿಯಾಗಿವೆ. ಅದರಲ್ಲಿ ಹಳೇ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿಯ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ. ಬಸ್ ಮೇಲೆ ಮರ ಬಿದ್ದು ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಹಾಗೂ ನಗರ ಪಾಲಿಕೆ ಸಿಬ್ಬಂದಿ ರಾತ್ರಿಯೇ ಮರ ತೆರವು ಮಾಡಿ ಬಸ್ ಹೊರ ತೆಗೆದಿದ್ದಾರೆ.

ಮತ್ತೊಂದೆಡೆ ಬಸವೇಶ್ವರ ನಗರದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ರಸ್ತೆಯ ಪಕ್ಕದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿದ್ದ ಪಾದಾಚಾರಿ ಮಾರ್ಗದ ಮೇಲಿದ್ದ ಬೃಹತ್ ಮರ ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ರಾತ್ರಿ ವೇಳೆಯೇ ಮರ ಬಿದ್ದಿದ್ದು, ಯಾವುದೇ ಪ್ರಾಣಾಪಾಯ ಅಥವಾ ವಾಹನಗಳಿಗೆ ಹಾನಿಯಾಗಿಲ್ಲ. ಆದರೆ, ಇಲ್ಲಿ ಮರಕ್ಕೆ ಬೇರುಗಳ ಸಂಪರ್ಕವೇ ಇಲ್ಲದಂತೆ ಸುತ್ತಲೂ ಕಾಂಕ್ರೀಟ್ ಹಾಕಲಾಗಿದ್ದು, ಬುಡ ಗಟ್ಟಿಯಿಲ್ಲದೇ ಬಿದ್ದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

PREV
Read more Articles on
click me!

Recommended Stories

ಶೀಘ್ರವೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್, 30 ವರ್ಷಗಳ ಕಾಯುವಿಕೆಗೆ ತೆರೆ, 24 ಗಂಟೆ ಪಯಣ ಇನ್ಮುಂದೆ 16 ಗಂಟೆ!
ಬೆಂಗಳೂರಿನ ಭವಿಷ್ಯ ಬದಲಿಸಲು 13,500 ಎಕರೆಗಳ ಮೆಗಾ ಪ್ಲಾನ್! 9 ಕೈಗಾರಿಕಾ ಟೌನ್‌ಶಿಪ್, 1 ಟ್ರಿಲಿಯನ್ ಆರ್ಥಿಕತೆಯ ಗುರಿ