ಶೀಘ್ರವೇ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್, 30 ವರ್ಷಗಳ ಕಾಯುವಿಕೆಗೆ ತೆರೆ, 24 ಗಂಟೆ ಪಯಣ ಇನ್ಮುಂದೆ 16 ಗಂಟೆ!

Published : Oct 06, 2026, 01:28 PM IST
Vande Bharat Sleeper

ಸಾರಾಂಶ

ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭವಾಗಲಿದೆ. ಇದರಿಂದ 24 ಗಂಟೆಗಳ ಪ್ರಯಾಣದ ಅವಧಿ 16 ಗಂಟೆಗಳಿಗೆ ಇಳಿಕೆಯಾಗಲಿದ್ದು, 30 ವರ್ಷಗಳ ಕಾಯುವಿಕೆಗೆ ತೆರೆಬೀಳಲಿದೆ. ಈ ರೈಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಮಾನದ ಮಾದರಿಯ ಐಷಾರಾಮಿ ಸೌಕರ್ಯಗಳನ್ನು ಒಳಗೊಂಡಿದೆ.

ಬೆಂಗಳೂರು: ರತದ ತಂತ್ರಜ್ಞಾನ ನಗರಿ ಬೆಂಗಳೂರು ಮತ್ತು ಆರ್ಥಿಕ ರಾಜಧಾನಿ ಮುುಂಬೈ ನಡುವಿನ ಸುದೀರ್ಘ ಪ್ರಯಾಣಕ್ಕೆ ಭಾರತೀಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಗುವಾಹಟಿ ಮತ್ತು ಹೌರಾ ನಡುವೆ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಯಶಸ್ವಿಯಾಗಿ ಪರಿಚಯಿಸಿದ ನಂತರ, ಇದೀಗ ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ಸೇವೆಯನ್ನು ಕೆಎಸ್‌ಆರ್ ಬೆಂಗಳೂರು (KSR Bengaluru) ಮತ್ತು ಮುಂಬೈ ಸಿಎಸ್‌ಎಂಟಿ (CSMT) ನಡುವೆ ಆರಂಭಿಸಲು ರೈಲ್ವೇ ಮಂಡಳಿ ಭರದಿಂದ ಸಿದ್ಧತೆ ನಡೆಸುತ್ತಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಈ ತಿಂಗಳ ಕೊನೆಯಲ್ಲಿ ಚಾಲನೆ ಸಿಗುವ ಸಾಧ್ಯತೆಯಿದೆ.

30 ವರ್ಷಗಳ ಕಾಯುವಿಕೆಗೆ ತೆರೆ, 24 ಗಂಟೆಯ ಪಯಣ ಇನ್ಮುಂದೆ 16 ಗಂಟೆಗೆ!

ಕಳೆದ 30 ವರ್ಷಗಳಿಂದಲೂ ಬೆಂಗಳೂರು ಮತ್ತು ಮುಂಬೈ ನಡುವೆ ವೇಗವಾದ ಹಾಗೂ ಸುಸಜ್ಜಿತ ರೈಲು ಸಂಪರ್ಕಕ್ಕಾಗಿ ಪ್ರಯಾಣಿಕರು ಪಟ್ಟುಹಿಡಿದಿದ್ದರು. ಪ್ರಸ್ತುತ ಈ ಎರಡು ಪ್ರಮುಖ ಮಹಾನಗರಗಳ ನಡುವೆ ಸಂಚರಿಸುವ ಏಕೈಕ ನೇರ ದೈನಂದಿನ ರೈಲಾದ 'ಉದ್ಯಾನ್ ಎಕ್ಸ್‌ಪ್ರೆಸ್' ಪ್ರಯಾಣ ಪೂರ್ಣಗೊಳಿಸಲು ಸರಾಸರಿ 24 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಪ್ರಸ್ತಾವಿತ ವಂದೇ ಭಾರತ್ ಸ್ಲೀಪರ್ ಆರಂಭವಾದರೆ, ಪ್ರಯಾಣದ ಅವಧಿ 16 ಗಂಟೆಗಳಿಗಿಂತಲೂ ಕಡಿಮೆಯಾಗಲಿದೆ.

ಪ್ರಸ್ತಾವಿತ ವೇಳಾಪಟ್ಟಿ ಮತ್ತು ಪ್ರಮುಖ ನಿಲ್ದಾಣಗಳು:

ಈ ಪ್ರೀಮಿಯಂ ರೈಲು ವಾರದಲ್ಲಿ ಆರು ದಿನ ಕಾರ್ಯನಿರ್ವಹಿಸಲಿದೆ. ಪ್ರಸ್ತಾವಿತ ತಾತ್ಕಾಲಿಕ ವೇಳಾಪಟ್ಟಿಯಂತೆ ಹೀಗಿದೆ. ಕೆಎಸ್‌ಆರ್ ಬೆಂಗಳೂರಿನಿಮದ ರಾತ್ರಿ 10 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 1:50ಕ್ಕೆ ಮುಂಬೈ ತಲುಪಲಿದೆ. ಸಿಎಸ್‌ಎಂಟಿ ಮುಂಬೈನಿಂದ ರಾತ್ರಿ 10:30ಕ್ಕೆ ಹೊರಟು ಮರುದಿನ ಮಧ್ಯಾಹ್ನ 1:50 ಕೆಎಸ್‌ಆರ್ ಬೆಂಗಳೂರು ತಲುಪಲಿದೆ. ಈ ರೈಲು ತನ್ನ ಪಯಣದಲ್ಲಿ ಅನಂತಪುರ, ಗುಂಟಕಲ್, ರಾಯಚೂರು, ಕಲಬುರಗಿ, ಸೋಲಾಪುರ ಮತ್ತು ಕಲ್ಯಾಣ್ ಸೇರಿದಂತೆ ಪ್ರಮುಖ ಶಹರಗಳಲ್ಲಿ ನಿಲುಗಡೆ ಹೊಂದಿರಲಿದೆ.

ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಮುಖ ವಿಶೇಷತೆಗಳು

ವಂದೇ ಭಾರತ್ ಸ್ಲೀಪರ್ ಆವೃತ್ತಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಮಾನದ ಮಾದರಿಯ ಸೌಕರ್ಯಗಳನ್ನು ಹೊಂದಿದೆ.

ಬೋಗಿಗಳ ವಿನ್ಯಾಸ: ಈ ರೈಲು ಒಟ್ಟು 16 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 11 'ಎಸಿ 3-ಟೈರ್', 4 'ಎಸಿ 2-ಟೈರ್' ಮತ್ತು 1 'ಎಸಿ ಫಸ್ಟ್ ಕ್ಲಾಸ್' ಕೋಚ್‌ಗಳಿರಲಿವೆ.

ವೇಗ ಮತ್ತು ತಂತ್ರಜ್ಞಾನ: ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, 180 ಕಿ.ಮೀ ವೇಗದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸುರಕ್ಷತೆಗಾಗಿ ಸ್ಥಳೀಯ ಜ್ಞಾನದ 'ಕವಚ್' (KAVACH) ವಿರೋಧಿ ಘರ್ಷಣೆ ವ್ಯವಸ್ಥೆ ಮತ್ತು ಶಕ್ತಿ ಉಳಿತಾಯಕ್ಕಾಗಿ 'ರಿಜನರೇಟಿವ್ ಬ್ರೇಕಿಂಗ್' ತಂತ್ರಜ್ಞಾನ ಬಳಸಲಾಗಿದೆ.

ಐಷಾರಾಮಿ ಸೌಕರ್ಯಗಳು: ಯುರೋಪಿಯನ್ ರೈಲುಗಳ ಮಾದರಿಯಲ್ಲಿ ಮೆತ್ತನೆಯ ಬರ್ತ್‌ಗಳು, ಮೇಲಿನ ಬರ್ತ್ ಏರಲು ಸುಲಭವಾದ ವಿನ್ಯಾಸ, ಪ್ರತ್ಯೇಕ ಓದುವ ದೀಪಗಳು, ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ರಿಫ್ರೆಶ್‌ಮೆಂಟ್ ಟೇಬಲ್‌‌ಗಳಿವೆ.

ಶೌಚಾಲಯ ಮತ್ತು ನೈರ್ಮಲ್ಯ: ವಿಮಾನದ ಮಾದರಿಯ ಮಾಡ್ಯುಲರ್ ಜೈವಿಕ-ವ್ಯಾಕ್ಯೂಮ್ ಶೌಚಾಲಯಗಳಿದ್ದು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ಹಾಗೂ 'ಬೇಬಿ ಕೇರ್ ಸ್ಟೇಷನ್' ವ್ಯವಸ್ಥೆಯಿದೆ. ಎಸಿ ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ ಬಿಸಿನೀರಿನ ಶವರ್ ಸೌಲಭ್ಯವೂ ಲಭ್ಯವಿದೆ.

ಭದ್ರತೆ ಮತ್ತು ಸ್ವಯಂಚಾಲಿತ ವ್ಯವಸ್ಥೆ: ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು, ಸೆಂಟ್ರಲೈಸ್ಡ್ ಕೋಚ್ ಮಾನಿಟರಿಂಗ್ ಸಿಸ್ಟಮ್, ತುರ್ತು ಸಂದರ್ಭದಲ್ಲಿ ಚಾಲಕರೊಂದಿಗೆ ಮಾತನಾಡಲು ಸಂವಹನ ವ್ಯವಸ್ಥೆ ಹಾಗೂ ಸ್ವಯಂಚಾಲಿತವಾಗಿ ತೆರೆಯುವ ಮತ್ತು ಮುಚ್ಚುವ ಗ್ಯಾಂಗ್‌ವೇ ಬಾಗಿಲುಗಳನ್ನು ಅಳವಡಿಸಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಭವಿಷ್ಯ ಬದಲಿಸಲು 13,500 ಎಕರೆಗಳ ಮೆಗಾ ಪ್ಲಾನ್! 9 ಕೈಗಾರಿಕಾ ಟೌನ್‌ಶಿಪ್, 1 ಟ್ರಿಲಿಯನ್ ಆರ್ಥಿಕತೆಯ ಗುರಿ
Bengaluru: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಅತಿಥಿ ಇಲಿ; ವಿಡಿಯೋ