ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ಹಸುಗಳ ಕೆಚ್ಚಲು ಕೊಯ್ದ ಅತೀ ಭೀಕರ ಘಟನೆ ವಿರುದ್ದ ಭಾರಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು(ಜ.12) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಅತೀ ಭೀಕರ ಘಟನೆಯೊಂದು ವರದಿಯಾಗಿದೆ. ತಡ ರಾತ್ರಿ ಕಿಡಿಗೇಡಿಗಳು ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದೆ. ಚಾಮರಾಜ ಪೇಟೆ ವಿನಾಯಕನಗರದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ದು ಕಿರಾತಕರು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಮರಾಜಪೇಚೆಯ ಕರ್ಣ ಎಂಬುವವರಿಗೆ ಸೇರಿದ ಹಸುಗಳ ಮೇಲೆ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಒಟ್ಟು 8 ಹಸುಗಳನ್ನು ಸಾಕಿರುವ ಕರ್ಣ ಪ್ರತಿ ದಿನ ಆರೈಕೆ ಮಾಡುತ್ತಾರೆ. ಈ ಪೈಕಿ ಮೂರ ರಿಂದ ನಾಲ್ಕು ಹಸುಗಳು ಮನೆಯಿಂದ ಕೆಲವೇ ದೂರದಲ್ಲಿರುವ ರಸ್ತೆಯಲ್ಲಿ ಮಲಗುತ್ತದೆ. ಹೀಗೆ ನಿನ್ನೆ ಮಲಗಿದ್ದ ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದಿದ್ದಾರೆ. ಮೋಕ ಪ್ರಾಣಿಗಳ ನರಳಾಟ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಪಡೆದಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಘಟನಾ ಸ್ಥಳಕ್ಕೆ ಸಂಸದ ಪಿಸಿ ಮೋಹನ್ ಭೇಟಿ ನೀಡಿದ್ದಾರೆ.
ಗೋ ಶಾಲೆಗೆ ನಯಾಪೈಸೆ ಕೊಡದ ಕಾಂಗ್ರೆಸ್ ಸರ್ಕಾರ, ಮೇವಿಲ್ಲದೆ ಬಡಕಲು ಬಿದ್ದು ನರಳುತ್ತಿವೆ ಗೋವುಗಳು!
ಮೂಕ ಪ್ರಾಣಿಗಳ ಕೆಚ್ಚಲು ಕೊಯ್ದ ಘಟನೆ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಸ್ಥಳೀಯರು ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಆಕ್ರೋಶಗಳು ಹೆಚ್ಚಾಗುತ್ತಿದ್ದಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಘಟನೆಯ ವರದಿ ತರಿಸಿಕೊಳ್ಳುತ್ತೇನೆ. ಸ್ಥಳೀಯ ಪೊಲೀಸರ ಜೊತೆ ಚರ್ಚಿಸುತ್ತೇನೆ. ಯಾರು ತಪ್ಪು ಮಾಡಿದ್ದಾರೆ, ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಮೂಕ ಪ್ರಾಣಿಗಳ ಮೇಲೆ ನಡೆಯುತ್ತಿರುವ ದಾಳಿಗಳು ಹೆಚ್ಚಾಗುತ್ತಿದೆ. ಮಲಗಿದ್ದ ನಾಯಿಗಳ ಮೇಲೆ ವಾಹನ ಚಲಾಯಿಸಿದ ಘಟನೆ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳ ಮೇಲೆ ದಾಳಿ ಪೈಕಿ ನಡೆದ ಅತೀ ಭೀಕರ ಘಟನೆ ಇದಾಗಿದೆ. ಹಸುಗಳ ಮಾಲೀಕ ಕರ್ಣ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಮೂಕ ಪ್ರಾಣಿಗಳ ಮೇಲೆ ಯಾಕೆ ಇಷ್ಟು ದ್ವೇಷ? ಅವುಗಳ ನೋವು ನೋಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯಿಂದ ಹಸುಗಳು ನರಳಾಡುತ್ತಿದೆ. ನಮಗೆ ಬೆಳಗ್ಗೆ ತಿಳಿದಿದೆ. ಈ ಕೃತ್ಯ ಎಸಗಿದವರನ್ನು ಕಾನೂನಿನ ಅಡಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.