ಬೆಂಗಳೂರು 1700 ರೂ.ಗೆ ಏರ್‌ಪೋರ್ಟ್ ಫ್ಲೈಯಿಂಗ್ ಟ್ಯಾಕ್ಸಿ : ಇಂದಿರಾನಗರ ಟು ವಿಮಾನ ನಿಲ್ದಾಣಕ್ಕೆ 5 ನಿಮಿಷ ಪ್ರಯಾಣ!

By Sathish Kumar KH  |  First Published Oct 17, 2024, 3:49 PM IST

ಬೆಂಗಳೂರಿನಲ್ಲಿ ಟ್ರಾಫಿಕ್‌ನಿಂದ ಬೇಸತ್ತಿರುವವರಿಗೆ ಸಿಹಿ ಸುದ್ದಿ. ಇಂದಿರಾನಗರದಿಂದ ಕೇವಲ 5 ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿಸುವ ಏರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಕೇವಲ 1,700 ರೂ. ವೆಚ್ಚದಲ್ಲಿ ಈ ಸೇವೆ ಲಭ್ಯವಾಗಲಿದೆ.


ಬೆಂಗಳೂರು (ಅ.17): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೀವ್ರ ಟ್ರಾಫಿಕ್‌ಜಾಮ್‌ನಿಂದ ಬೇಸತ್ತಿರುವ ಜನರಿಗೆ ಇದು ಸಂತಸದ ಸುದ್ದಿಯಾಗಿದೆ. ಬೆಂಗಳೂರಿನ ರಿಚ್ಚೆಸ್ಟ್ ಏರಿಯಾ ಇಂದಿರಾನಗರದಿಂದ ಚೇಪೆಸ್ಟ್ ದರದಲ್ಲಿ ಕೇವಲ 5 ನಿಮಿಷದಲ್ಲಿ ತಲುಪುವಂತಹ ಏರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಕೇವಲ 1,700 ರೂ. ವೆಚ್ಚದಲ್ಲಿ ನೀವು ಬೆಂಗಳೂರು ನಗರ ಮಧ್ಯ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅತಿ ಕಡಿಮೆ ಅವಧಿಯಲ್ಲಿ ತಲುಪಬಹುದು.

ಬೆಂಗಳೂರಿನ ಜನರು ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗೆ ಹೋಗಬಹುದು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಎಲೆಕ್ಟ್ರಾನಿಕ್ಸ್ ಸಿಟಿಗೆ ಸಾಮಾನ್ಯವಾಗಿ ಟ್ಯಾಕ್ಸಿಯಲ್ಲಿ 2.30 ಗಂಟೆ (150 ನಿಮಿಷ) ಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಈ ಏರ್‌ ಟ್ಯಾಕ್ಸಿ ಕೇವಲ 19 ನಿಮಿಷಗಳಲ್ಲಿ ನಿಮ್ಮನ್ನು ಆಕಾಶದಲ್ಲಿ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಲ್ಲಿ ನಿಮ್ಮ ಮನೆಗೆ ತಲುಪಿಸಲಿದೆ. ಇದಕ್ಕೆ ಆಗುವ ವೆಚ್ಚ ಕೇವಲ 1,700 ರೂ. ಇದು ಪ್ರಸ್ತುತ ಟ್ಯಾಕ್ಸಿ ದರ 2,500 ರೂ.ಗಿಂತಲೂ ಅಗ್ಗವಾಗಿದೆ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳ ಸಂಪರ್ಕಿಸುವ ನಮ್ಮ ಮೆಟ್ರೋ 3ಎ ಹಂತಕ್ಕೆ ಕೇಂದ್ರದ ಒಪ್ಪಿಗೆ!

ಈ ಯೋಜನೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಹಯೋಗದಲ್ಲಿ ಸರಳಾ ಏವಿಯೇಷನ್‌ ಶೀಘ್ರ ಜಾರಿಗೆ ತರಲಿದೆ. ಇದಕ್ಕೆ ಅಗತ್ಯವಾಗಿರುವ ಎಲ್ಲ ಒಪ್ಪಂದಗಳು ಕೂಡ ಅಂತಿಮ ಹಂತದಲ್ಲಿವೆ. ಇನ್ನು ಸರಳಾ ಏವಿಯೇಷನ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಆಡ್ರಿಯನ್ ಸ್ಮಿತ್ ಅವರು ಹೇಳುವಂತೆ ಈ ಯೋಜನೆಯನ್ನು ಜಾಗತಿಕ ಮಟ್ಟದ ಹಲವು ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಅದರಲ್ಲಿಯೂ ಭಾರತದಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಇರುವ ಬೆಂಗಳೂರಿನಲ್ಲಿ ಜಾರಿಗೆ ತರಲು ಮುಂದಾಗಿದ್ದೇವೆ. ಬೆಂಗಳೂರಿನಾದ್ಯಂತ ಪ್ರಯಾಣದ ಸಮಯವನ್ನು ತಗ್ಗಿಸಬಹುದಾಗಿದೆ. ಇಂದಿರಾನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (ಕೆಐಎ) ಪ್ರಸ್ತುತ 1.5 ಗಂಟೆಗಳ ಪ್ರಯಾಣ ಮಾಡಬೇಕಾಗುತ್ತದೆ. ಆದರೆ, ನಮ್ಮ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಬಳಸಿಕೊಂಡು ಕೇವಲ 5 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪಬಹುದು ಎಂದು ಹೇಳಿದ್ದಾರೆ.

ಈ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸರಳಾ ಏವಿಯೇಷನ್ ಸಿಇಒ ಅವರು, 'ಪ್ರಸ್ತುತ ಇಂದಿರಾನಗರದಿಂದ ಕೆಐಎಗೆ 1.5 ಗಂಟೆ ಪ್ರಯಾಣ ಸಮಯ ತೆಗೆದುಕೊಳ್ಳಬಹುದು. ಅತಿ ಶೀಘ್ರದಲ್ಲಿ, ಸರಳಾ ಏವಿಯೇಷನ್ಸ್ ಸಂಪೂರ್ಣ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿಗಳೊಂದಿಗೆ ನಾವು ಅದನ್ನು ಕೇವಲ 5 ನಿಮಿಷಗಳಿಗೆ ಇಳಿಸುತ್ತೇವೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕೆಐಎ ಸಂಸ್ಥೆ ಒಡೆತನದ ಬಗ್ಗೆ ನಾನು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇನೆ. ಅವರ ದೃಷ್ಟಿಯು ನಮ್ಮಂತಹ ಯುವ ಕಂಪನಿಗಳಿಗೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ. ಒಟ್ಟಾರೆಯಾಗಿ ಭವಿಷ್ಯದಲ್ಲಿ ಕರ್ನಾಟಕ, ಭಾರತ ಮತ್ತು ಜಗತ್ತಿನ ವಿವಿಧ ನಗರದಲ್ಲಿ ಉತ್ತಮವಾದುದನ್ನು ಸೃಷ್ಟಿಸಲು ಸಮರ್ಪಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್ ಸಿಟಿಯಲ್ಲಿ ಬಿಸಿನೆಸ್ ಪಾರ್ಕ್ ತೆರೆಯಲು ಸಜ್ಜಾದ ಬಿಎಸಿಎಲ್‌: 5 ಲಕ್ಷ ಉದ್ಯೋಗ ಸೃಷ್ಟಿ!

ಇನ್ನು ಈ ಏರ್‌ಟ್ಯಾಕ್ಸಿಯು ಏಳು-ಆಸನಗಳನ್ನು ಹೊಂದಿದ್ದು, eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್) ವ್ಯವಸ್ಥೆ ಹೊಂದಿದೆ. ಇದು ವಿಮಾನ ಮಾದರಿಯಲ್ಲಿಯೇ ನಿರ್ಮಿತವಾದ ಸುಧಾರಿತ ವ್ಯವಸ್ಥೆಯಾಗಿದೆ. ಈ ಹಾರುವ ಟ್ಯಾಕ್ಸಿಗಳು ಸಾಮಾನ್ಯ ಹೆಲಿಕಾಪ್ಟರ್‌ಗಳಿಗಿಂತ ವೇಗವಾಗಿ ಮತ್ತು ನಿಶ್ಯಬ್ದವಾಗಿರ ಚಲಿಸುತ್ತವೆ. ಜೊತೆಗೆ, ಹೆಚ್ಚು ಪರಿಸರ ಸ್ನೇಹಿಯಾಗಿರುತ್ತವೆ ಹೇಳಲಾಗುತ್ತಿದೆ. ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು ಹಾಗೂ ಪ್ರಯಾಣದ ಸಮಯ ಕಡಿತಗೊಳಿಸುವುದು ಈ ಟ್ಯಾಕ್ಸಿಯ ಗುರಿಯಾಗಿದೆ. ಇದು ಟ್ರಾಫಿಕ್ ಜಾಮ್‌ನಿಂದ ಬಳಲುತ್ತಿರುವ ಬೆಂಗಳೂರಿನಂತಹ ನಗರಗಳ ನಿವಾಸಿಗಳು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಆದರೆ, ಈ ಏರ್‌ ಟ್ಯಾಕ್ಸಿ ಬರಲು ಕನಿಷ್ಠ ಇನ್ನೂ 2 ವರ್ಷಗಳಾಗಬಹುದು ಎಂದು ಅಂದಾಜಿಸಲಾಗಿದೆ.

 
 
 
 
 
 
 
 
 
 
 
 
 
 
 

A post shared by @sarla_aviation

click me!