ದಸರಾ ಹಬ್ಬದಲ್ಲಿ 17,733 ಮೆ.ಟನ್ ತ್ಯಾಜ್ಯ ಉತ್ಪಾದನೆ: ಸಂಸ್ಕರಣೆ ಮಾಡಲಾಗದೇ ಭೂಭರ್ತಿ ಮಾಡಿದ ಬಿಬಿಎಂಪಿ!

By Sathish Kumar KHFirst Published Oct 14, 2024, 8:02 PM IST
Highlights

ದಸರಾ ಹಬ್ಬದ ಮೂರು ದಿನಗಳಲ್ಲಿ ಬೆಂಗಳೂರಿನಲ್ಲಿ 17,733 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಬಿಬಿಎಂಪಿ ಈ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳು ಮತ್ತು ಭೂಭರ್ತಿ ಕೇಂದ್ರಗಳಿಗೆ ಸಾಗಿಸುತ್ತಿದೆ. ಕೆ.ಆರ್ ಮಾರುಕಟ್ಟೆ, ಗಾಂಧಿಬಜಾರ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ 414 ಮೆ.ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.

ಬೆಂಗಳೂರು (ಅ.14): ದಸರಾ ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ಬದಿ, ಮಾರುಕಟ್ಟೆಗಳಲ್ಲಿ ಹೆಚ್ಚು ಉತ್ಪತ್ತಿಯಾಗಿದ್ದ ತ್ಯಾಜ್ಯವನ್ನು ಕಳೆದೆರಡು ದಿನಗಳಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ವತಿಯಿಂದ ತೆರವುಗೊಳಿಸಲಾಗುತ್ತಿದೆ. ಆದರೆ, ದಸರಾ ಹಬ್ಬದ ಮೂರು ದಿನಗಳಲ್ಲಿ ಬರೋಬ್ಬರಿ 17,733 ಮೆಟ್ರಿಕ್ ತ್ಯಾಜ್ಯ ಉತ್ಪಾದನೆ ಆಗಿದ್ದು, ಇದನ್ನು ಸಂಗ್ರಹಿಸಿ ಸಂಸ್ಕರಣಾ ಘಟಕಕ್ಕೆ ಸರಬರಾಜು ಮಾಡಿ ಉಳಿದ ಮಿಶ್ರ ತ್ಯಾಜ್ಯವನ್ನು ಭೂಭರ್ತಿ ಕೇಂದ್ರಕ್ಕೆ ತ್ಯಾಜ್ಯವನ್ನು ಸುರಿಯಲಾಗಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಿಸುಮಾರು 4900 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ 12ನೇ ಅಕ್ಟೋಬರ್ ರಂದು 6306 ಮೆ.ಟನ್, 13ರಂದು 5561 ಮೆ.ಟನ್ ಹಾಗೂ ಇಂದು ಸುಮಾರು 5866 ಮೆ.ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಅಂದರೆ ಮೂರು ದಿನದಲ್ಲಿ ಬರೋಬ್ಬರಿ 17,733 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಬಿಬಿಎಂಪಿ, ದಸರಾ ಹಬ್ಬದ ಹಿನ್ನೆಲೆ ಆಯುಧ ಪೂಜೆಗಾಗಿ ನಗರದ ಎಲ್ಲಾ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಬಾಳೆ ಕಂದು, ಬೂದು ಕುಂಬಳಕಾಯಿ, ಎಲೆಗಳು ಹಾಗೂ ಹೂವು ಮಾರಾಟ ಮಾಡಲಾಗಿದೆ. ಇದರಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಸ್ಥಳದಲ್ಲೇ ಬಿಟ್ಟಿದ್ದು, ಅದನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಸಂಸ್ಥೆಯಿಂದ ತೆರವು ಮಾಲಾಗುತ್ತಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳು ಹಾಗೂ ಮಿಶ್ರ ತ್ಯಾಜ್ಯವನ್ನು ಲ್ಯಾಂಡ್ ಫಿಲ್‌ನಲ್ಲಿ ವಿಲೇವಾರಿ ಮಾಡಲಾಗಿದೆ.

Latest Videos

ಇದನ್ನೂ ಓದಿ: ನಟ ದರ್ಶನ್ , ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ರವಿಶಂಕರ್ ದೀಪಕ್‌ಗೆ ರಿಲೀಫ್!

ಮಾರುಕಟ್ಟೆಗಳಲ್ಲಿ ತ್ಯಾಜ್ಯ ವಿಲೇವಾರಿ: ನಗರದಲ್ಲಿ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್ ಮಾರುಕಟ್ಟೆ, ಗಾಂಧಿಬಜಾರ್, ದೇವಸಂದ್ರ ಮಾರುಕಟ್ಟೆ, ಕೆ.ಆರ್ ಪುರ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ರಸಲ್ ಮಾರುಕಟ್ಟೆ, ಪಾಲಿಕೆ ಬಜಾರ್ ಸೇರಿದಂತೆ 12 ಮಾರುಕಟ್ಟೆಗಳಲ್ಲಿ ಕಳೆದ 2 ದಿನಗಳಲ್ಲಿ 414 ಮೆ.ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಇಂದು 150ಕ್ಕೂ ಹೆಚ್ಚು ಮೆಟ್ರಿಕ್ ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ನಗರದ ಮಾರುಕಟ್ಟೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚುವರಿಯಾಗಿ ತ್ಯಾಜ್ಯ ಉತ್ಪಾದನೆಯಾಗಿದ್ದ ಕಾರಣ ಆಯಾ ವಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳ ನೇತೃತ್ವದಲ್ಲಿ ಹೆಚ್ಚುವರಿಯಾಗಿ ಜೆಸಿಬಿಗಳನ್ನು ಬಳಸಿಕೊಂಡು ಆಟೋ ಟಿಪ್ಪರ್ ಹಾಗೂ ಕಾಂಪ್ಯಾಕ್ಟರ್‌ಗಳಲ್ಲಿ 3/4 ಟ್ರಿಪ್‌ಗಳು ತುಂಬಿಕೊಂಡು ವಿಲೇವಾರಿ ಮಾಡುವ ಕೆಲಸ ಮಾಡಲಾಗಿದೆ. 

ಕಾಲಮಿತಿಯೊಳಗಾಗಿ ತ್ಯಾಜ್ಯ ತೆರವು:
ಪಾಲಿಕೆ ವ್ಯಾಪ್ತಿಯಲ್ಲಿ ದಸರಾ ಹಬ್ಬದಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸುವ ಕೆಲಸ ಹಾಗೂ ರಸ್ತೆ ಬದಿ ಉತ್ಪತ್ತಿಯಾಗುವ ಕಸ ಸುರಿಯುವ ಸ್ಥಳಗಳನ್ನು ಕೂಡಾ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿವೆ 2320 ಅನಧಿಕೃತ ಪಿಜಿಗಳು: ಒಂದೇ ದಿನ 21 ಪಿಜಿ ಮುಚ್ಚಿದ ಬಿಬಿಎಂಪಿ!

3 ದಿನಗಳಲ್ಲಿ ತ್ಯಾಜ್ಯ ವಿಲೇವಾರಿಯಾದ ವಿವರ:

  • ದಿನಾಂಕ - ಉತ್ಪತ್ತಿಯಾದ ತ್ಯಾಜ್ಯ(ಮೆ.ಟನ್ ಗಳಲ್ಲಿ)
  • 12-10-2024 : 6306 ಮೆ.ಟನ್
  • 13-10-2024 : 5561 ಮೆ.ಟನ್
  • 14-10-2024 : 5866 ಮೆ.ಟನ್
click me!