ಆಂಬ್ಯುಲೆನ್ಸ್‌ನಲ್ಲಿ ಜೀವಕ್ಕಾಗಿ ಹೋರಾಟ.. ದಾರಿಬಿಡದೇ ಪುಂಡರ ಚೆಲ್ಲಾಟ.. ಆ ಮಧ್ಯರಾತ್ರಿ ನಡೆದಿದ್ದೇನು?

Published : Jul 06, 2026, 09:56 AM IST
bengaluru ambulance

ಸಾರಾಂಶ

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯ ಜೀವದ ಜೊತೆ ಪುಂಡರು ಚೆಲ್ಲಾಟವಾಡಿದ್ದಾರೆ. ಯಶವಂತಪುರ-ಗೊರಗುಂಟೆಪಾಳ್ಯ ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸಿ ವೀಲಿಂಗ್ ಮಾಡುತ್ತಾ ವಿಕೃತಿ ಮೆರೆದಿದ್ದು, ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹುಚ್ಚಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ಇತ್ತೀಚೆಗೆ ರಸ್ತೆಗಳಲ್ಲಿ ವೀಲಿಂಗ್ ಮಾಡುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇಲ್ಲೊಂದು ಘಟನೆ ನಡೆದಿದೆ ಅದನ್ನು ನೋಡಿದರೆ ಇವರಿಗೆ ಕನಿಷ್ಠ ಮಾನವೀಯತೆ ಎಂಬುದು ಇದೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಆಂಬ್ಯುಲೆನ್ಸ್‌ನಲ್ಲಿ ರೋಗಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ ಆ ವಾಹನದ ಮುಂದೆಯೇ ಬೈಕ್ ವೀಲಿಂಗ್ ಮಾಡುತ್ತಾ ಪುಂಡರು ರೋಗಿಯ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ.

ಜೀವಕ್ಕಾಗಿ ಹೋರಾಟ.. ಪುಂಡರಿಗೆ ಚೆಲ್ಲಾಟ!

ಈ ಅಮಾನವೀಯ ಘಟನೆ ಜೂನ್ 4ರ ಮಧ್ಯರಾತ್ರಿ ಸುಮಾರು 2 ಗಂಟೆಗೆ ನಡೆದಿದೆ. ಯಶವಂತಪುರ ಮತ್ತು ಗೊರಗುಂಟೆಪಾಳ್ಯವನ್ನು ಸಂಪರ್ಕಿಸುವ ರಸ್ತೆಯಲ್ಲಿ ಆಂಬ್ಯುಲೆನ್ಸ್ ಸೈರನ್ ಹಾಕಿಕೊಂಡು ಅತೀ ವೇಗವಾಗಿ ಆಸ್ಪತ್ರೆಗೆ ಧಾವಿಸುತ್ತಿತ್ತು. ಒಳಗಿದ್ದ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಆದರೆ ಆ ಆಂಬ್ಯುಲೆನ್ಸ್‌ಗೆ ದಾರಿ ಬಿಡಬೇಕಾದ ಪುಂಡರು ಅದರ ಮುಂದೆಯೇ ಬೈಕ್ ಏರಿಸಿ ವೀಲಿಂಗ್ ಮಾಡುತ್ತಾ ಅಡ್ಡಿಪಡಿಸಿದ್ದಾರೆ.

ಪೊಲೀಸರ ಭಯವಿಲ್ಲ.. ಪ್ರಜ್ಞೆಯೂ ಇಲ್ಲ!

ಈ ಕಿಡಿಗೇಡಿಗಳಿಗೆ ಪೊಲೀಸರ ಭಯವಂತೂ ಮೊದಲೇ ಇಲ್ಲ. ಇನ್ನು ಆಂಬ್ಯುಲೆನ್ಸ್ ಸೈರನ್ ಕೇಳಿದರೆ ದಾರಿ ಬಿಡಬೇಕು ಎನ್ನುವ ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ವರ್ತಿಸಿದ್ದಾರೆ. ಬೈಕ್‌ಗೆ ನಂಬರ್ ಪ್ಲೇಟ್ ಇಲ್ಲ, ಸವಾರರ ತಲೆಗೆ ಹೆಲ್ಮೆಟ್ ಕೂಡ ಇಲ್ಲ. ಆಂಬ್ಯುಲೆನ್ಸ್ ವೇಗಕ್ಕೆ ಅಡ್ಡಿಪಡಿಸುತ್ತಾ, ಸ್ಟಂಟ್ ಮಾಡುತ್ತಾ ವಿಕೃತ ಆನಂದ ಅನುಭವಿಸಿದ್ದಾರೆ.

ವಿಡಿಯೋ ಮಾಡಿ ಆಕ್ರೋಶ

ಆಂಬ್ಯುಲೆನ್ಸ್ ಒಳಗಿದ್ದ ರೋಗಿಯ ಕುಟುಂಬಸ್ಥರು ಈ ಪುಂಡರ ಕೃತ್ಯವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಆತಂಕದ ನಡುವೆಯೇ ಮೊಬೈಲ್‌ನಲ್ಲಿ ಇವರ ಪುಂಡಾಟದ ವಿಡಿಯೋ ಚಿತ್ರೀಕರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಈ ಕಿಡಿಗೇಡಿಗಳ ವಿರುದ್ಧ ಉಗಿಯುತ್ತಿದ್ದಾರೆ. ಇಂಥವರಿಗೆ ಸರಿಯಾದ ಶಿಕ್ಷೆಯಾಗಬೇಕು, ಇವರು ಮನುಷ್ಯರೇ ಅಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆಂಬ್ಯುಲೆನ್ಸ್‌ಗೆ ದಾರಿ ಬಿಡದಿದ್ದರೆ ದಂಡ ವಿಧಿಸುವ ನಿಯಮವಿದೆ. ಆದರೆ ಇಲ್ಲಿ ದಂಡಕ್ಕಿಂತ ಹೆಚ್ಚಾಗಿ, ಜೀವದ ಜೊತೆ ಆಟವಾಡುವ ಇಂತಹ ಮನಸ್ಥಿತಿಯವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು. ಇಂತಹ ಪುಂಡರಿಗೆ ಜೈಲು ಶಿಕ್ಷೆಯಂತಹ ಕಠಿಣ ನಿಯಮಗಳನ್ನು ಜಾರಿಗೆ ತಂದರೆ ಮಾತ್ರ ಇಂತಹ ಅಟ್ಟಹಾಸಗಳಿಗೆ ಬ್ರೇಕ್ ಬೀಳಲು ಸಾಧ್ಯ. ಪೊಲೀಸರು ಈ ಕೂಡಲೇ ವಿಡಿಯೋ ಆಧರಿಸಿ ಆ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಜೈಲಿಗಟ್ಟಬೇಕಿದೆ.

PREV
Read more Articles on
click me!

Recommended Stories

BMTC ಬೆಂಗಳೂರು ಇವಿ ಬಸ್ ಅಪಘಾತ: 5 ಆಘಾತಕಾರಿ ಕಾರಣಗಳು ಬಯಲು! ಜನಸಾಮಾನ್ಯರಿಗೆ ಆಘಾತ
ದೇಶದಲ್ಲೇ ಅತ್ಯಂತ ದೀರ್ಘಕಾಲ ಜೈಲು ವಾಸ ಅನುಭವಿಸಿ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಕಲಬುರಗಿಯ ಸಾಯಿಬಣ್ಣ ಕಥೆ!