
ಬೆಂಗಳೂರು (ನ.19): ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿರುವಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಬೀದಿ ನಾಯಿ ದಾಳಿಯಿಂದ ಹಾನಿಗೆ ಒಳಗಾದವರಿಗೆ ಪರಿಹಾರ ನೀಡಲು ಮುಂದಾಗಿದೆ. ನಗರದಲ್ಲಿ ನಾಯಿ ದಾಳಿ ಪ್ರಕರಣ ಹೆಚ್ಚಳ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇನ್ಮುಂದೆ ನಾಯಿ ಕಡಿದರೆ ಪರಿಹಾರ ಕೂಡ ಸಿಗಲಿದ್ದು, ಈ ಕುರಿತು ಅಧಿಕೃತವಾಗಿ ಆದೇಶ ಹೊರಡಿಸಿದೆ.
ಬೀದಿ ನಾಯಿ ಕಚ್ಚಿ ಗಾಯಗೊಂಡರೆ ಅಂತವರಿಗೆ ಸರ್ಕಾರದಿಂದ 5 ಸಾವಿರ ಪರಿಹಾರ ಸಿಗಲಿದೆ. ಅದರಲ್ಲಿ 3500 ರೂಪಾಯಿಯನ್ನು ಗಾಯಾಳುವಿಗೆ ನೀಡಲಾಗುತ್ತದೆ. ಉಳಿದ 1500 ರೂಪಾಯಿಯನ್ನು ಚಿಕಿತ್ಸಾ ವೆಚ್ಚವಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ನೀಡಲು ಸೂಚಿಸಲಾಗಿದೆ.
ಹಾಗೇನಾದರೂ ನಾಯಿ ದಾಳಿಯಿಂದ ವ್ಯಕ್ತಿ ಮೃತಪಟ್ಟಲ್ಲಿ ಅಥವಾ ರೇಬಿಸ್ ಕಾಯಿಲೆಗೆ ತುತ್ತಾದಲ್ಲಿ ಅಂಥವರಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಆದರೆ, ಇದು ಇಡೀ ಕರ್ನಾಟಕಕ್ಕೆ ಅನ್ವಯವಾಗೋದಿಲ್ಲ. ಗ್ರೇಟರ್ ಬೆಂಗಳೂರಿನ ಎಲ್ಲ ಪಾಲಿಕೆಗಳಿಗೆ ಅನ್ವಯವಾಗುವಂತೆ ಮಾತ್ರವೇ ಈ ಆದೇಶ ಹೊರಡಿಸಲಾಗಿದೆ. ಜೊತೆಗೆ ನಾಯಿ ಕಡಿತಕ್ಕೆ ಒಳಗಾಗುವ ನಾಗರಿಕರಿಗೆ ಸಂಬಂಧಿಸಿದಂತೆ ಪರಿಶೀಲನಾ ಮತ್ತು ಪರಿಹಾರಧನ ವಿತರಿಸುವ ಸಮಿತಿ ರಚನೆಗೆ ಸೂಚನೆ ನೀಡಲಾಗಿದೆ.