ಭಾರತಕ್ಕೆ ಮತ್ತೆ ಕಾಲಿಟ್ಟ ಗೂಗಲ್‌ ಸ್ಟ್ರೀಟ್‌: ಬೆಂಗಳೂರಿನಲ್ಲಿ ಗೂಗಲ್‌ ಮ್ಯಾಪ್‌ ಬಳಸಿ ಟ್ರಾಫಿಕ್‌ ನಿರ್ವಹಣೆ

By Kannadaprabha NewsFirst Published Jul 28, 2022, 11:23 AM IST
Highlights

ದೇಶದಲ್ಲಿ ಭದ್ರತೆಯ ಕಾರಣಗಳಿಗಾಗಿ ಗೂಗಲ್‌ ಸ್ಟ್ರೀಟ್‌ ವ್ಯೂವನ್ನು 6 ವರ್ಷಗಳ ಹಿಂದೆ ನಿಷೇಧಿಸಲಾಗಿತ್ತು. ಆದರೀಗ, ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇವೆಯನ್ನು ಹೊರತಂದ ಒಂದು ದಶಕಕ್ಕೂ ಹೆಚ್ಚು ನಂತರ ಭಾರತದಲ್ಲಿ ಮರುಪ್ರಾರಂಭಿಸಿದೆ.

ದೇಶದಲ್ಲಿ ಗೂಗಲ್‌ ಮ್ಯಾಪ್‌ ಬಳಸುವವರ ಸಂಖ್ಯೆ ಹೆಚ್ಚೇ ಇದೆ, ಅಂತಹವರಿಗೆ ಇಲ್ಲಿದೆ ಸಿಹಿ ಸುದ್ದಿ. ಗೂಗಲ್‌ ಭಾರತದಲ್ಲಿ ಸ್ಟ್ರೀಟ್‌ ವ್ಯೂ ಅನ್ನು ಮರು ಪ್ರಾರಂಭಿಸಿದೆ. ದೇಶದಲ್ಲಿ ಭದ್ರತೆಯ ಕಾರಣಗಳಿಗಾಗಿ ಈ ವೈಶಿಷ್ಟ್ಯವನ್ನು 6 ವರ್ಷಗಳ ಹಿಂದೆ ಅದನ್ನು ನಿಷೇಧಿಸಲಾಗಿತ್ತು. ಆದರೀಗ, ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೇವೆಯನ್ನು ಹೊರತಂದ ಒಂದು ದಶಕಕ್ಕೂ ಹೆಚ್ಚು ನಂತರ ಭಾರತದಲ್ಲಿ ಸ್ಟ್ರೀಟ್ ವ್ಯೂ ಅನ್ನು ಗೂಗಲ್ ಮರುಪ್ರಾರಂಭಿಸಿದೆ.

ಗೂಗಲ್‌ ಸ್ಟ್ರೀಟ್ ವ್ಯೂ ಅನ್ನು ಮೊದಲು ಭಾರತದಲ್ಲಿ 2011 ರಲ್ಲಿ ಪ್ರಾರಂಭಿಸಲಾಯಿತು. ಈ ಗೂಗಲ್ ನಕ್ಷೆಗಳ ವೈಶಿಷ್ಟ್ಯವು ಬಳಕೆದಾರರಿಗೆ 360-ಡಿಗ್ರಿ ವಿಹಂಗಮ ರಸ್ತೆ-ಮಟ್ಟದ ಚಿತ್ರಗಳ ಮೂಲಕ ಪ್ರದೇಶವನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯನ್ನು ಮರು  ಪ್ರಾರಂಭಿಸಲು ಸ್ಥಳೀಯ ದೈತ್ಯರಾದ ಜೆನೆಸಿಸ್ ಮತ್ತು ಟೆಕ್ ಮಹೀಂದ್ರಾ ಜೊತೆ ಪಾಲುದಾರಿಕೆ ಹೊಂದಿದೆ ಎಂದು ಗೂಗಲ್ ಹೇಳಿದೆ. ಸದ್ಯ ಬೆಂಗಳೂರು ಸೇರಿದಂತೆ 10 ಭಾರತೀಯ ನಗರಗಳಲ್ಲಿ ಗೂಗಲ್‌ ಸ್ಟ್ರೀಟ್‌ ವ್ಯೂ ಲಭ್ಯವಿದ್ದು,  ವರ್ಷದ ಅಂತ್ಯದ ವೇಳೆಗೆ 50 ಭಾರತೀಯ ನಗರಗಳಿಗೆ ಸೇವೆಯನ್ನು ಹೊರತರುವ ನಿರೀಕ್ಷೆಯನ್ನು ಗೂಗಲ್‌ ಕಂಪನಿ ಹೊಂದಿದೆ.

ಸಂಚಾರ ದಟ್ಟಣೆ ತಪ್ಪಿಸಲು ಪಾರ್ಕಿಂಗ್‌ ವ್ಯವಸ್ಥೆ ಜಾರಿ

ಸ್ಟ್ರೀಟ್ ವ್ಯೂಗಾಗಿ ಕಂಪನಿಯು ಮೂರನೇ ವ್ಯಕ್ತಿಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ಇದೇ ಮೊದಲು ಎಂದು ಗೂಗಲ್ ಅಧಿಕಾರಿಗಳು ಬುಧವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 15 ವರ್ಷಗಳ ಹಿಂದೆ ಅನಾವರಣಗೊಂಡ ಸ್ಟ್ರೀಟ್ ವ್ಯೂ ಜಗತ್ತಿನ 100 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿದೆ ಮತ್ತು ಈವರೆಗೆ 220 ಬಿಲಿಯನ್ ಗಲ್ಲಿ ವೀಕ್ಷಣೆ ಚಿತ್ರಗಳನ್ನು ಸಂಗ್ರಹಿಸಿದೆ ಎಂದು ಕಂಪನಿಯು ಈ ವರ್ಷದ ಆರಂಭದಲ್ಲಿ ತಿಳಿಸಿತ್ತು.

ಗೂಗಲ್‌  ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಬೆಂಗಳೂರು ಸಂಚಾರ ಪೊಲೀಸರು
ಗೂಗಲ್‌ ಸ್ಟ್ರೀಟ್‌ ವ್ಯೂ ಜಾರಿಯಾದ ಬೆನ್ನಲ್ಲೇ ತಂತ್ರಜ್ಞಾನದ ಸಹಾಯದಿಂದ ನಗರದಲ್ಲಿ ವಾಹನ ಸಂಚಾರ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು, ಗೂಗಲ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ವಾಹನ ಸವಾರರಿಗೆ ಗೂಗಲ್‌ ಮ್ಯಾಪ್‌ನಲ್ಲಿಯೇ ಇನ್ನು ಮುಂದೆ ಸ್ಪೀಡ್‌ ಲಿಮಿಟ್‌ ಗೊತ್ತಾಗಲಿದೆ. ಅಂತೆಯೇ ವಾಹನ ಸಂಚಾರ ದಟ್ಟಣೆಯಿರುವ ರಸ್ತೆಗಳು, ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧವಿರುವ ರಸ್ತೆಗಳ ಮಾಹಿತಿ ಸಿಗಲಿದೆ. ಉದಾಹರಣೆಗೆ ಗೂಗಲ್‌ ಮ್ಯಾಪ್‌ ವಾಹನ ಸವಾರರಿಗೆ ಮುಂದೆ ವಾಹನ ಸಂಚಾರ ದಟ್ಟಣೆ ಇರುವುದರ ಬಗ್ಗೆ ಮುಂಚಿತವಾಗಿ ತಿಳಿಸಲಿದೆ. ಇದರಿಂದ ವಾಹನ ಸವಾರರು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸಲು ಅನುಕೂಲವಾಗುತ್ತದೆ.

ಇದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವ್ಯಯವಾಗುವ ಸಮಯವೂ ಉಳಿತಾಯವಾಗಲಿದೆ. ನಗರದಲ್ಲಿ ವಾಹನ ಸಂಚಾರದ ದತ್ತಾಂಶವನ್ನು ಗೂಗಲ್‌ ಸಂಚಾರ ಪೊಲೀಸರಿಗೆ ಒದಗಿಸಲಿದೆ. ಗೂಗಲ್‌ ಮಾಹಿತಿ ಆಧರಿಸಿ ಸಂಚಾರ ಪೊಲೀಸರು, ಯಾವ ಸಮಯದಲ್ಲಿ ಯಾವ ರಸ್ತೆಯಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯವಾಗಲಿದೆ. ಅಷ್ಟೇ ಅಲ್ಲದೆ, ಆ ರಸ್ತೆಯಲ್ಲಿ ದಟ್ಟಣೆ ತಗ್ಗಿಸಲು ಹಾಗೂ ಸಂಚಾರ ನಿರ್ವಹಿಸಲು ಅನುಕೂಲವಾಗಲಿದೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿಯೂ ಸವಾರರಿಗೆ ಟ್ರಾಫಿಕ್‌ ಸಿಗ್ನಲ್‌ ಕಿರಿಕಿರಿ!

ಬೆಂಗಳೂರಿನಲ್ಲಿ ವಾಹನ ಸಂಚಾರ ನಿರ್ವಹಣೆ ದೊಡ್ಡ ಸವಾಲಾಗಿದೆ. ನಗರದ ವಾಹನ ಸಂಚಾರ ನಿರ್ವಹಿಸುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಇದೀಗ ಗೂಗಲ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಆಧುನಿಕ ತಂತ್ರಜ್ಞಾನದ ನೆರವಿನಿಂದ ವಾಹನ ಸಂಚಾರ ನಿರ್ವಹಣೆ ಜತೆಗೆ ವಾಹನ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಟ್ರಾಫಿಕ್ ನಿರ್ವಹಣೆಯನ್ನು ಸುಧಾರಿಸಲು Google ನೊಂದಿಗೆ ಬೆಂಗಳೂರು ಟ್ರಾಫಿಕ್ ಪೋಲೀಸ್ ಸಹಯೋಗ.
Bengaluru Traffic Police collaboration with Google to improve traffic management in Bengaluru. https://t.co/GqjvYkA3Ku

— Dr.B.R. Ravikanthe Gowda IPS (@jointcptraffic)
click me!