Deepavali ಹಬ್ಬಕ್ಕೆ ಊರಿಗೆ ಓಡುವವರ ವ್ಯಥೆ; ಜನ್ಮಭೂಮಿ-ಕರ್ಮಭೂಮಿ ನಡುವೆ ಸಿಲುಕಿದ ಬೆಂಗಳೂರಿಗರ ರಿಯಲ್ ಸ್ಟೋರಿ!

Published : Nov 07, 2026, 05:13 PM IST
Deepavali

ಸಾರಾಂಶ

ಬೆಂಗಳೂರಿನ ಯಾಂತ್ರಿಕ ಬದುಕಿನಿಂದ ಹಬ್ಬದ ಸಮಯದಲ್ಲಿ ಸ್ವಂತ ಊರಿನತ್ತ ಸಾಗುವವರ ಕಷ್ಟ ಹಾಗೂ ಊರಿನ ನೆನಪುಗಳ ಸೆಳೆತವನ್ನು ಈ ಲೇಖನ ವಿವರಿಸುತ್ತದೆ. ಟ್ರಾಫಿಕ್ ಕಷ್ಟವನ್ನು ಮೀರಿ ಹುಟ್ಟೂರಿನಲ್ಲಿ ದೀಪಾವಳಿ ಆಚರಿಸುವ ಭಾವನಾತ್ಮಕ ಪಯಣ ಇದಾಗಿದೆ.

ಬೆಂಗಳೂರು ಎಂದರೆ ಹೊಗಳುವವರು ಎಷ್ಟೋ, ತೆಗಳುವವರು ಅಷ್ಟೇ. ಆದರೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಈ ನಗರ ನಮಗೆ ಏನೋ ಒಂದು ಹೊಸತನವನ್ನು ನೀಡುತ್ತದೆ, ಬದುಕನ್ನು ಕಲಿಸುತ್ತದೆ. ಇನ್ನೊಂದೆಡೆ, ಇಲ್ಲಿನ ಟ್ರಾಫಿಕ್ ಹಾಗೂ ದುಬಾರಿ ಜೀವನ ಶೈಲಿಗಳು ನಮ್ಮ ಬದುಕನ್ನು ಅರಿಯದಂತೆ ಹಿಸುಕಿ ಹಾಕುತ್ತವೆ. ಹಾಗಾಗಿಯೇ, ಬೆಂಗಳೂರನ್ನು ಬಿಟ್ಟು ಹೋಗಲೂ ಆಗದೆ, ಇಲ್ಲೇ ಉಳಿದುಕೊಳ್ಳಲೂ ಕಷ್ಟಪಡುವ ಅಸಂಖ್ಯಾತ ಜನರ ಸ್ಟೋರಿ ಇದು. ಕಥೆ ಮಾತ್ರವಲ್ಲ, ಕಹಿ ವ್ಯತೆಯೂ ಇಲ್ಲಿದೆ.

ಬದುಕು ಕೊಟ್ಟ ಜನ್ಮಭೂಮಿ ಬೆಂಗಳೂರು!

ಲಕ್ಷಾಂತರ ಯುವಜನಯ ಕನಸುಗಳಿಗೆ ರೆಕ್ಕೆ ನೀಡಿದ ಕರ್ಮಭೂಮಿ. ಉದ್ಯೋಗ, ವೃತ್ತಿಜೀವನ, ಉತ್ತಮ ಸಂಬಳ ಮತ್ತು ಆಧುನಿಕ ಜೀವನಶೈಲಿ ನೀಡಿದ ಈ ಮಹಾನಗರದಲ್ಲಿ ದಿನನಿತ್ಯ ಬಾಳುವುದು ಒಂದು ಸವಾಲಾದರೆ, ಹಬ್ಬ-ಹರಿದಿನಗಳು ಬಂದಾಗ ಈ ನಗರವನ್ನು ತೊರೆದು ಸ್ವಂತ ಊರಿನತ್ತ ಪಯಣಿಸುವುದು ಮತ್ತೊಂದು ದೊಡ್ಡ ಸಾಹಸ. ಬೆಂಗಳೂರಿನಲ್ಲಿ ಇರುವುದೂ ಕಷ್ಟ, ಬೆಂಗಳೂರನ್ನು ಬಿಟ್ಟು ಹೊರಡುವುದೂ ಕಷ್ಟ ಎಂಬ ಮಾತು ದೀಪಾವಳಿ ಹಬ್ಬದ ಸಮಯದಲ್ಲಿ ನೂರಕ್ಕೆ ನೂರರಷ್ಟು ಸತ್ಯವಾಗಿ ಕಣ್ಣಮುಂದೆ ನಿಲ್ಲುತ್ತದೆ.

ಹಬ್ಬದ ಸೀಸನ್‌ನಲ್ಲಿ ಎಕ್ಸಿಟ್ ಟ್ರಾಫಿಕ್ ನರಕ!

ದೀಪಾವಳಿ ಸಾಲು ಸಾಲು ರಜೆಗಳು ಘೋಷಣೆಯಾಗುತ್ತಿದ್ದಂತೆಯೇ ನಗರದ ಪ್ರಮುಖ ನಿರ್ಗಮನ ರಸ್ತೆಗಳಾದ ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ, ಕೆ.ಆರ್. ಪುರಂ ಹಾಗೂ ನೈಸ್ ರಸ್ತೆಗಳಲ್ಲಿ ವಾಹನಗಳ ಸಾಲೇ ಸಾಲು ಕಂಡುಬರುತ್ತದೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವುದು, ಖಾಸಗಿ ಬಸ್‌ಗಳಲ್ಲಿ ದುಪ್ಪಟ್ಟು ಭಾಡಿಗೆ ನೀಡಬೇಕಾದ ಪರಿಸ್ಥಿತಿ ಮತ್ತು ಬಸ್‌ಗಳಿಗಾಗಿ ನಡುರಸ್ತೆಯಲ್ಲಿ ಗಂಟೆಗಟ್ಟಲೆ ಕಾಯುವ ಕಷ್ಟ ಪ್ರತಿಯೊಬ್ಬ ಪ್ರಯಾಣಿಕನಿಗೂ ನರಕಯಾತನೆ ತರುತ್ತದೆ.

ಟ್ರಾಫಿಕ್ ಕಷ್ಟವನ್ನು ಮೆಟ್ಟಿ ನಿಲ್ಲುವ ಊರಿನ ಮಣ್ಣಿನ ವಾಸನೆ!

ಎಷ್ಟೇ ತೀವ್ರವಾದ ಟ್ರಾಫಿಕ್ ಇರಲಿ, ಬಸ್‌ ಸಿಗದೇ ಕಾಯುವ ಕಿರಿಕಿರಿ ಇರಲಿ, ಈ ಯಾವುದೇ ಕಷ್ಟಗಳೂ ಊರಿಗೆ ತಲುಪಬೇಕೆನ್ನುವ ತುಡಿತವನ್ನು ತಡೆಯಲು ಸಾಧ್ಯವಿಲ್ಲ. ವಾರ ಪೂರ್ತಿ ಲ್ಯಾಪ್ಟಾಪ್, ಡೆಡ್‌ಲೈನ್ ಮತ್ತು ಯಾಂತ್ರಿಕ ಬದುಕಲ್ಲಿ ಮುಳುಗಿದ್ದ ಟೆಕ್ಕಿಗಳು ಹಾಗೂ ಉದ್ಯೋಗಿಗಳಿಗೆ, ಕಣ್ಣಮುಂದೆ ತೇಲುವ ಒಂದೇ ಒಂದು ದೃಶ್ಯವೆಂದರೆ ಅದು ಹುಟ್ಟೂರಿನ ಮನೆ. ಅಂಗಳದಲ್ಲಿ ಅಮ್ಮ ಹಚ್ಚಿಡುವ ಸಾಲು ಸಾಲು ಹಣತೆ ದೀಪಗಳು, ಮನೆ ತುಂಬಾ ಹರಡುವ ಸಾಂಪ್ರದಾಯಿಕ ಅಡುಗೆಯ ಕಂಪು ಹಾಗೂ ಬಾಲ್ಯದ ಗೆಳೆಯರೊಂದಿಗೆ ಹಂಚಿಕೊಳ್ಳುವ ಆ ನಗು ಪ್ರತಿಯೊಂದು ಕಷ್ಟವನ್ನೂ ಮರೆಸಿಬಿಡುತ್ತದೆ.

ಜನ್ಮಭೂಮಿ, ಕರ್ಮಭೂಮಿಯ ನಡುವಿನ ಅನನ್ಯ ಬಂಧ!

ಬೆಂಗಳೂರು ಪ್ರತಿಯೊಬ್ಬರಿಗೂ ಆಶ್ರಯ ನೀಡಿದ ನಗರ. ಇಲ್ಲಿನ ಹವಾಮಾನ ಮತ್ತು ಉದ್ಯೋಗ ಅವಕಾಶಗಳು ನಮ್ಮನ್ನು ಈ ನಗರದ ಪ್ರೇಮಕ್ಕೆ ಬೀಳಿಸುವುದರಲ್ಲಿ ಎರಡೂ ಮಾತಿಲ್ಲ. ಆದರೆ, ಹಬ್ಬ ಬಂದಾಗ ಮಾತ್ರ ಹುಟ್ಟೂರಿನ ಮಣ್ಣಿನ ವಾಸನೆ ಹಾಗೂ ತಾಯಿಯ ಮಡಿಲ ಸೆಳೆತ ಗೆದ್ದು ನಿಲ್ಲುತ್ತದೆ. ನಗರದ ಗದ್ದಲದಿಂದ ದೂರವಾಗಿ ಊರಿನ ಶಾಂತ ವಾತಾವರಣದಲ್ಲಿ ಕಳೆಯುವ ಆ ಕೆಲವು ದಿನಗಳು ಮನಸ್ಸಿಗೆ ಮತ್ತು ಜೀವಕ್ಕೆ ಮರುಜೀವ ನೀಡುತ್ತವೆ.

ಎಲ್ಲರಿಗೂ ದೀಪಾವಳಿ ಶುಭಾಷಯ!

ದೀಪಾವಳಿಯ ಪಯಣ ಕೇವಲ ಒಂದು ಪ್ರಯಾಣವಲ್ಲ, ಅದು ಪ್ರತಿಯೊಬ್ಬ ಕನ್ನಡಿಗನ ಭಾವನಾತ್ಮಕ ಮರುಸಂಪರ್ಕ. ಎಷ್ಟೇ ಸರ್ಕಸ್ ಮಾಡಿ, ಟ್ರಾಫಿಕ್ ದಾಟಿ ಊರಿನ ಹೊಸ್ತಿಲು ಮೆಟ್ಟಿದಾಗ ಸಿಗುವ ಆಂತರಿಕ ನೆಮ್ಮದಿಗೆ ಪ್ರಪಂಚದ ಯಾವ ಐಷಾರಾಮಿ ಸೌಲಭ್ಯವೂ ಸಾಟಿಯಾಗಲಾರದು.

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡರ ಆತಂಕ ಹೆಚ್ಚಿಸಿದ ರಾಹುಲ್ ಗಾಂಧಿ ರ‍್ಯಾಲಿ, ಸಚಿವ ಲಮಾಣಿ ಪುತ್ರ ಸೇರಿ ನಾಲ್ವರು ಸಸ್ಪೆಂಡ್
ವೈದ್ಯರ ಯಡವಟ್ಟಿಗೆ ಕೋಮಾಗೆ ಜಾರಿದ ಮಗು, 103 ದಿನಗಳಿಂದ ಚಿಕಿತ್ಸೆ; ಈ ಸ್ಥಿತಿಗೆ ಆಸ್ಪತ್ರೆ ಮುಖ್ಯಸ್ಥರೇ ಹೊಣೆ ಎಂದ ಖಾದರ್