
ಸಾಕಷ್ಟುಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದ ಸಚಿವ ಸಂಪುಟದ (Cabinet of Ministers) ಕಸರತ್ತಿನ ಚೆಂಡು ಮತ್ತೆ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು ಕೇಂದ್ರದ ಗೃಹ ಸಚಿವ (Union Home Minister) ಅಮಿತ್ ಶಾ (Amit Shah) ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮಗೊಳ್ಳಲಿದೆ.
ಬಹುತೇಕ ಮುಂದಿನ ವಾರ ಅಥವಾ ತಿಂಗಳಾಂತ್ಯದಲ್ಲಿ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕಾಮರಾಜ್ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಬಳಿಕ ಹೊಸದಾಗಿ ಸಂಪುಟ ರಚಿಸಲಾಗುತ್ತದೆಯೇ ಅಥವಾ ಈಗಿರುವ ಐದು ಸ್ಥಾನಗಳ ಜತೆಗೆ ಒಂದಿಬ್ಬರನ್ನು ಕೈಬಿಟ್ಟು ಸಣ್ಣ ಪ್ರಮಾಣದ ಪುನಾರಚನೆ ಕೈಗೊಳ್ಳಲಾಗುವುದೇ ಎಂಬುದು ಕುತೂಹಲಕರವಾಗಿದೆ.
ನಡ್ಡಾ ಅವರು ಸೋಮವಾರ ರಾತ್ರಿ ದೆಹಲಿಗೆ (Delhi) ವಾಪಸಾಗಲಿದ್ದಾರೆ. ಬಳಿಕ ಅಮಿತ್ ಶಾ ಅವರ ಸಮಯ ನೋಡಿಕೊಂಡು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಇದೇ ವೇಳೆ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಮತ್ತೊಮ್ಮೆ ದೆಹಲಿಗೆ ಕರೆಸಿಕೊಳ್ಳುವ ಸಂಭವವೂ ಇದೆ ಎನ್ನಲಾಗಿದೆ.
Karnataka Politics: 'ಬೊಮ್ಮಾಯಿ ಸಂಪುಟ ವಿಸ್ತರಣೆಯೋ, ಪುನಾರಚನೆಯೋ?'
ಎಲ್ಲರನ್ನೂ ಹೊರಗಿಟ್ಟು ಪ್ರತ್ಯೇಕ ಚರ್ಚೆ:
ಭಾನುವಾರ ವಿಜಯನಗರ ಜಿಲ್ಲೆಯ (Vijayanagra) ಹೊಸಪೇಟೆಯಲ್ಲಿ (Hospete) ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ನಡ್ಡಾ ಅವರು ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿದರು. ಈ ವೇಳೆ ಬೇರೆ ಯಾವುದೇ ನಾಯಕರನ್ನೂ ನಡ್ಡಾ ಕರೆದಿರಲಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ (Arun singh) ಸೇರಿದಂತೆ ಎಲ್ಲರೂ ಈ ಮಾತುಕತೆ ವೇಳೆ ಹೊರಗಿದ್ದರು.
ಸಂಪುಟ ವಿಸ್ತರಣೆ: ವಿಜಯೇಂದ್ರಗೆ ಸ್ಥಾನ ಸಿಗುತ್ತಾ.? ರೇಸ್‌ನಲ್ಲಿರುವವರ ಪಟ್ಟಿ ಇಲ್ಲಿದೆ
ಈಗಾಗಲೇ ಹಾಲಿ ಇರುವ ಎಲ್ಲ ಸಚಿವರ ಇಲಾಖೆಯಲ್ಲಿ ಆಗಿರುವ ಪ್ರಗತಿ ಮತ್ತು ಸಾಧನೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿರುವ ನಡ್ಡಾ ಅವರು ಸಂಪುಟ ಕಸರತ್ತಿನ ಬಗ್ಗೆ ಬೊಮ್ಮಾಯಿ ಅವರ ಅಭಿಪ್ರಾಯವನ್ನು ಕೇಳಿದಾಗ ‘ಸಣ್ಣ ಪ್ರಮಾಣದ ಪುನಾರಚನೆ ಮಾಡುವುದು ಸೂಕ್ತ’ ಎಂಬ ಮಾತನ್ನು ಹೇಳಿದ್ದಾರೆ. ‘ಹಾಗಾದರೆ ಯಾರನ್ನು ಸಂಪುಟದಿಂದ ಕೈಬಿಡಬಹುದು?’ ಎಂದು ನಡ್ಡಾ ಅವರು ಪ್ರಶ್ನಿಸಿದ್ದಕ್ಕೆ ಬೊಮ್ಮಾಯಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ, ‘ನೀವೇ ತೀರ್ಮಾನ ಕೈಗೊಳ್ಳಿ’ ಎಂದು ಹೈಕಮಾಂಡ್ ಮೇಲೆ ಹೊಣೆ ಹೊರಿಸಿದರು ಎಂದು ತಿಳಿದು ಬಂದಿದೆ.
‘ಕಳೆದ ಬಾರಿ ದೆಹಲಿಗೆ ತೆರಳಿದಾಗಲೂ ಬೊಮ್ಮಾಯಿ ಅವರು ತಮ್ಮ ಸಂಪುಟದಿಂದ ಯಾರನ್ನು ಕೈಬಿಡಬೇಕು ಎಂದು ನಡ್ಡಾ ಅವರು ಕೇಳಿದಕ್ಕೆ ಹೆಸರುಗಳನ್ನು ನೀಡಿರಲಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಎಂದಿದ್ದರು. ಸಂಪುಟ ಪುನಾರಚನೆಯಿಂದ ಅಸಮಾಧಾನ ಭುಗಿಲೆದ್ದಲ್ಲಿ ಹೈಕಮಾಂಡ್‌ನತ್ತ ಬೆರಳು ತೋರಬಹುದು ಎಂಬುದು ಮುಖ್ಯಮಂತ್ರಿಗಳ ಲೆಕ್ಕಾಚಾರ’ ಎಂದು ಮೂಲಗಳು ತಿಳಿಸಿವೆ.
ಆಕ್ರಮಣಕಾರಿಯಾಗಿ: ಸಿಎಂಗೆ ನಡ್ಡಾ ಸೂಚನೆ
ಇದೇ ವೇಳೆ, ನೀವು ಆಕ್ರಮಣಕಾರಿ ಸ್ವಭಾವ ರೂಢಿಸಿಕೊಳ್ಳಬೇಕು. ಇದು ಚುನಾವಣಾ ವರ್ಷವಾಗಿದ್ದರಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಪ್ರಿಯತೆ ಗಳಿಸಿಕೊಳ್ಳಬೇಕು ಎಂದು ನಡ್ಡಾ ಅವರು ಬೊಮ್ಮಾಯಿ ಅವರಿಗೆ ಸೂಚನೆ ನೀಡಿದರು. ಆ ಕಾರಣಕ್ಕಾಗಿಯೋ ಎಂಬಂತೆ ಬೊಮ್ಮಾಯಿ ಅವರು ಬಳಿಕ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಉತ್ಸಾಹದಿಂದ ಭಾಷಣ ಮಾಡಿದರು.