Work From Home ಮನೆಯಿಂದಲೇ ಕೆಲಸ ಮಾಡಿ 4.46 ಲಕ್ಷ ರೂ ಕಳೆದುಕೊಂಡ ಬೆಂಗಳೂರಿನ ಮಹಿಳಾ ಟೆಕ್ಕಿ!

Published : Oct 10, 2026, 12:31 PM IST
Work From Home

ಸಾರಾಂಶ

ಬೆಂಗಳೂರಿನ ಮಹಿಳಾ ಎಂಜಿನಿಯರ್ ಆನ್‌ಲೈನ್‌ನಲ್ಲಿ ಮನೆಯಿಂದಲೇ ಕೆಲಸ ಮಾಡುವ ಆಮಿಷಕ್ಕೆ ಒಳಗಾಗಿ 4.46 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚಕರು ಮೊದಲು ಸಣ್ಣ ಮೊತ್ತದ ಲಾಭ ನೀಡಿ, ನಂತರ ಟೆಲಿಗ್ರಾಂ ಮೂಲಕ ಹೆಚ್ಚಿನ ಹಣ ಹೂಡಿಕೆ ಮಾಡಿಸಿ ವಂಚಿಸಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಆನ್‌ಲೈನ್‌ನಲ್ಲಿ ಮನೆಯಿಂದಲೇ ಕೆಲಸ ಮಾಡಿ ಸುಲಭವಾಗಿ ಹಣ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಪೂರ್ವ ಬೆಂಗಳೂರಿನ ಮಹಿಳಾ ಎಂಜಿನಿಯರೊಬ್ಬರು ಬರೋಬ್ಬರಿ 4.46 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ವಂಚಕರ ಜಾಲಕ್ಕೆ ಬಲಿಯಾದ ಸಂತ್ರಸ್ತೆ ನೀಡಿರುವ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

ರಾಮಮೂರ್ತಿನಗರ ನಿವಾಸಿಯಾಗಿರುವ ಸಂತ್ರಸ್ತೆ ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಅಥವಾ ವರ್ಕ್ ಫ್ರಮ್ ಹೋಮ್ ಉದ್ಯೋಗಾವಕಾಶಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಉದ್ಯೋಗ ನೀಡುವ ಭರವಸೆ ನೀಡಿದ ಅಪರಿಚಿತರು, ಸೆಪ್ಟೆಂಬರ್ 21 ರಂದು ಆಕೆಯನ್ನು ವಾಟ್ಸಾಪ್ ಗ್ರೂಪ್ ಒಂದಕ್ಕೆ ಸೇರ್ಪಡೆಗೊಳಿಸಿದರು.

ಆರಂಭದಲ್ಲಿ ಆಕೆಗೆ ಆನ್‌ಲೈನ್ ಗೂಗಲ್ ರಿವ್ಯೂಗಳನ್ನು ಪೋಸ್ಟ್ ಮಾಡುವಂತಹ ಸರಳ ಕೆಲಸಗಳನ್ನು ನೀಡಲಾಗಿತ್ತು. ಪೂರ್ಣಗೊಂಡ ಪ್ರತಿ ಟಾಸ್ಕ್‌ಗೆ 180 ರೂಪಾಯಿಗಳಂತೆ ಆಕೆಯ ಖಾತೆಗೆ ಹಣ ಜಮಾ ಮಾಡಿ ವಂಚಕರು ನಂಬಿಕೆ ಹುಟ್ಟಿಸಿದ್ದರು.

ಟೆಲಿಗ್ರಾಂ 'ಪೇ-ಟು-ಅರ್ನ್' ಜಾಲ ಮತ್ತು ವಂಚನೆ:

ಸಂತ್ರಸ್ತೆಯ ನಂಬಿಕೆ ಗಳಿಸಿದ ನಂತರ, ವಂಚಕರು ಆಕೆಗೆ "ಹೆಚ್ಚು ಹಣ ಗಳಿಸುವ ಯೋಜನೆ" ಜಾರಿಯಲ್ಲಿದೆ ಎಂದು ನಂಬಿಸಿ, ಟೆಲಿಗ್ರಾಂ ಗ್ರೂಪ್‌ಗೆ ಸ್ಥಳಾಂತರಿಸಿದರು. ಅಲ್ಲಿ ಹೆಚ್ಚಿನ ಲಾಭ ಪಡೆಯಲು ಮುಂಗಡ ಹಣ ಹೂಡಿಕೆ ಮಾಡುವಂತೆ ಸೂಚಿಸಿದರು. ಇದನ್ನು ನಿಜವೆಂದು ನಂಬಿದ ಮಹಿಳೆಯು ಹಂತ-ಹಂತವಾಗಿ ಒಟ್ಟು 4.46 ಲಕ್ಷ ರೂಪಾಯಿಗಳನ್ನು ವಂಚಕರ ಖಾತೆಗಳಿಗೆ ವರ್ಗಾಯಿಸಿದರು.

ಕ್ರಮೇಣ ತಾವು ಗಳಿಸಿದ ಲಾಭ ಮತ್ತು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ಸೈಬರ್ ಅಪರಾಧಿಗಳು ಹಣ ನೀಡಲು ನಿರಾಕರಿಸಿ, ಇನ್ನು ಹೆಚ್ಚಿನ ಹಣ ಪಾವತಿಸುವಂತೆ ಒತ್ತಾಯಿಸಲು ಪ್ರಾರಂಭಿಸಿದರು. ಇದರಿಂದ ತಾನು ವಂಚನೆಗೆೊಳಗಾಗಿರುವುದು ಸ್ಪಷ್ಟವಾಗುತ್ತಿದ್ದಂತೆ, ಮಹಿಳೆ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

ದೂರು ಸ್ವೀಕರಿಸಿದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 66C (ಗುರುತಿನ ಕಳ್ಳತನ), 66D (ಕಂಪ್ಯೂಟರ್ ಸಂಪನ್ಮೂಲ ಬಳಸಿ ವಂಚನೆ) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(4) (ವಂಚನೆ) ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ವಂಚಕರು ಬಳಸಿದ ಬ್ಯಾಂಕ್ ಖಾತೆಗಳು ಹಾಗೂ ಫೋನ್ ಸಂಖ್ಯೆಗಳ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

PREV
Read more Articles on
click me!

Recommended Stories

ಸುಸಜ್ಜಿತ ಕೇಂದ್ರ ಕಚೇರಿ ಧ್ವಂಸ ಮಾಡಿ ಹೊಸ ಕಟ್ಟಡ ನಿರ್ಮಾಣದ ದುಂದುವೆಚ್ಚ, ಬಿಡಿಎಗೆ ಹೈಕೋರ್ಟ್‌ ನೋಟಿಸ್‌!
ವರ್ಷಕ್ಕೆ ₹12 ಲಕ್ಷ ಸಂಬಳ, ಆದ್ರೆ ಟ್ರಾಫಿಕ್‌ನಲ್ಲೇ ₹1 ಲಕ್ಷ ನಷ್ಟ! ಬೆಂಗಳೂರಿನ ಶಾಕಿಂಗ್ ಲೆಕ್ಕಾಚಾರ