ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ವಿವಾಹವಾಗಿರುವುದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿ ಆದೇಶಿಸಿದೆ.
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ವಿವಾಹವಾಗಿರುವುದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿ ಆದೇಶಿಸಿದೆ. ಪ್ರಕರಣದಲ್ಲಿ ಸಂತ್ರಸ್ತೆಯನ್ನು ವಿವಾಹವಾದ ನಂತರವೂ ತನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಪೊಲೀಸರ ಕ್ರಮ ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ಪ್ರಕರಣ ರದ್ದತಿ ಕೋರಿದ್ದ. ಇದೇ ವೇಳೆ ವಿಚಾರಣೆಗೆ ಸಂತ್ರಸ್ತೆ ಕೂಡಾ ಹಾಜರಾಗಿ ದೂರು ಹಿಂಪಡೆಯುವುದಾಗಿ ತಿಳಿಸಿದ್ದರು, ಸಂತ್ರಸ್ತೆಯನ್ನು ವಿವಾಹವಾಗಿದ್ದು, ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವಾಗ್ದಾನ ನೀಡಿ ಆರೋಪಿ ಪ್ರಮಾಣ ಪತ್ರ ಸಲ್ಲಿಸಿದ್ದ. ಅದನ್ನು ಪರಿಗಣಿಸಿದ ಹೈಕೋರ್ಟ್ ಆರೋಪಿ ವಿರುದ್ಧದ ಅತ್ಯಾಚಾರ, ಹಣ ವಸೂಲಿ, ಜೀವ ಬೆದರಿಕೆ ಪ್ರಕರಣ ರದ್ದುಪಡಿಸಿತು. ಹಾಗೆಯೇ, ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೀತಿ ತೊಂದರೆ ನೀಡಬಾರದು ಎಂದು ಆರೋಪಿಗೆ ಸೂಚಿಸಿತು.
ಪ್ರಕರಣ ಹಿನ್ನೆಲೆ:
ಬೆಂಗಳೂರಿನ ನಿತ್ಯಾ ಎಂಬಾಕೆ 2022ರ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿ, ರವಿ ಎಂಬಾತ (ಸಂತ್ರಸ್ತೆ ಮತ್ತು ಆರೋಪಿ ಹೆಸರು ಬದಲಿಸಲಾಗಿದೆ) ತನ್ನ ಹುಟ್ಟುಹಬ್ಬದ ಆಚರಣೆ ನಿಮಿತ್ತ ಮನೆಗೆ ಆಹ್ವಾನಿಸಿದ್ದರು. ಅಂದು ಮದ್ಯ ಸೇವಿಸಿ ಬಂದಿದ್ದ ರವಿ, ನನ್ನ ಮೇಲೆ ಅತ್ಯಾಚಾರ ನಡೆಸಿದರು. ಈ ವಿಷಯ ಬಹಿರಂಗಪಡಿಸಿದರೆ ಹತ್ಯೆ ಬೆದರಿಕೆ ಹಾಕಿದ್ದರು. ಜೊತೆಗೆ ಮದುವೆಯಾಗಬೇಕಿದ್ದರೆ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ನಿತ್ಯಾ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ (Rape), ಜೀವ ಬೆದರಿಕೆ (Life threat) ಮತ್ತು ಹಣ ವಸೂಲಿ ಸೇರಿದಂತೆ ಇನ್ನಿತರ ಆರೋಪಗಳಡಿ ಎಫ್‌ಐಆರ್ (FIR) ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅತ್ಯಾಚಾರ ಸಂತ್ರಸ್ತೆಯ ಭ್ರೂಣ ತೆಗೆಸಲು ರಾಜ್ಯ ಹೈಕೋರ್ಟ್ ಒಪ್ಪಿಗೆ
ಮಹಿಳೆ ಉಲ್ಟಾ:
ಅರ್ಜಿದಾರನ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿ, ಸಂತ್ರಸ್ತೆ ಮತ್ತು ಅರ್ಜಿದಾರ ಪರಸ್ಪರ ಪ್ರೀತಿಸುತ್ತಿದ್ದರು. ಭಿನ್ನಾಭಿಪ್ರಾಯದಿಂದ ಸಂತ್ರಸ್ತೆ (Rape victim) ದೂರು ದಾಖಲಿಸಿದ್ದಾರೆ. ಆಕೆಗೆ 32 ವರ್ಷವಾಗಿದ್ದು, ದೂರು ದಾಖಲಿಸಿದ ನಂತರ ಪೊಲೀಸರ ಮುಂದೆ ಹಾಜರಾಗಿ ದೂರು ಹಿಂಪಡೆಯಲಾಗುವುದು ಎಂದು ತಿಳಿಸಿದ್ದರು. ಅದಕ್ಕೆ ಪೊಲೀಸರು ಒಪ್ಪಿರಲಿಲ್ಲ ಎಂದು ತಿಳಿಸಿದರು. ನಂತರ ಸಂತ್ರಸ್ತೆ ಮತ್ತು ಆರೋಪಿ ಮದುವೆಯಾಗಿದ್ದು, ಪೊಲೀಸ್ ಠಾಣೆಗೆ ತೆರಳಿ ದೂರು ಹಿಂಪಡೆಯುವಾಗಿ ತಿಳಿಸಿದ್ದರು. ಹೀಗಿದ್ದರೂ ಪೊಲೀಸರು ಮಾತ್ರ ದೂರುದಾರಳ ಹೇಳಿಕೆ ದಾಖಲಿಸದೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮದುವೆಯಾಗಿ ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಇಬ್ಬರೂ ಜಂಟಿ ಪ್ರಮಾಣ ಪತ್ರ ಸಲ್ಲಿಸಿದ್ದು, ಅದನ್ನು ಪುರಸ್ಕರಿಸಿ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಆ ಜಂಟಿ ಪ್ರಮಾಣ ಪತ್ರ ಪರಿಗಣಿಸಿದ ಹೈಕೋರ್ಟ್, ಅರ್ಜಿ ಪುರಸ್ಕರಿಸಿ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಿದೆ.