ಗೋವಾದ ನಿರಾಶ್ರಿತ ಕನ್ನಡಿಗರಿಗೆ ಜಾಗ ಖರೀದಿ: ಸೋಮಶೇಖರ್‌

By Kannadaprabha NewsFirst Published Jan 17, 2023, 9:08 AM IST
Highlights

ಗೋವಾದಲ್ಲಿ ಕನ್ನಡಿಗರನ್ನು ಒಕ್ಕಲೆಬ್ಬಿಸುವುದು ಹಾಗೂ ಅವರಿಗೆ ತೊಂದರೆಯಾಗುವಂಥ ಅನೇಕ ಕಾರ್ಯಗಳನ್ನು ಆಗಾಗ ನಡೆಯುತ್ತಲೇ ಇರುತ್ತದೆ. ಇದಕ್ಕೊಂದು ಪೂರ್ಣ ವಿರಾಣ ಹಾಕಲು ಕರ್ನಾಟಕ ಗಡಿ ಅಭಿವೃದ್ಧ ನಿಗಮ ಕೆಲವು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 

ಬೆಂಗಳೂರು; ಗೋವಾದ ವಾಸ್ಕೋ ಬೈನಾದಲ್ಲಿ ನಿರಾಶ್ರಿತರಾಗಿರುವ ಕನ್ನಡಿಗರಿಗಾಗಿ ಜಮೀನು ಖರೀದಿಸುವ ಕುರಿತು ಕರ್ನಾಟಕ ಗಡಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಬಿ.ಕೆ.ಆರ್‌. ರಾವ್‌ ಬೈಂದೂರು ಅವರು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಗೋವಾದಲ್ಲಿ ಕನ್ನಡಿಗರ ವಿರುದ್ಧ ಗೋವಾ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಳೆದ 25 ವರ್ಷಗಳಿಂದ ನಿರಂತರವಾಗಿ ದೌರ್ಜನ್ಯವೆಸಗಿ ಕನ್ನಡಿಗರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಸರ್ಕಾರಿ ಸ್ಥಳಗಳಲ್ಲೂ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡಲು ಬಿಡುತ್ತಿಲ್ಲ. ನ್ಯಾಯ ಕೇಳಿದರೆ ಪೊಲೀಸರನ್ನು ಬಿಟ್ಟು ದೌರ್ಜನ್ಯ ನಡೆಸುತ್ತಿದೆ.

ಕಳೆದ ನಾಲ್ಕು ತಲೆಮಾರುಗಳಿಂದ ಮನೆ ಕಟ್ಟಿದಾಖಲೆ ಮಾಡಿಕೊಂಡರೂ ಈಗ ಅದಕ್ಕೆ ಬೆಲೆಯೇ ನೀಡದೇ 1179 ಮನೆಗಳನ್ನು ಪೊಲೀಸ್‌ ದರ್ಪದೊಂದಿಗೆ ಮಧ್ಯರಾತ್ರಿ ವೇಳೆ ಬುಲ್ಡೋಜರ್‌ನಿಂದ ಧ್ವಂಸಗೊಳಿಸಿ ಕನ್ನಡಿಗರ ಕುಟುಂಬವನ್ನು ಬೀದಿಪಾಲು ಮಾಡಲಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರದಿಂದ ಅನುದಾನ ಪಡೆದು ಜಮೀನು ಖರೀದಿಸಿ ಕನ್ನಡಿಗರಿಗೆ ಮನೆಗಳನ್ನು ಕಟ್ಟಿಕೊಡಲು ಚಿಂತನೆ ನಡೆಸಲಾಗಿದೆ. ಅದಕ್ಕೆ ತಗಲುವ ವೆಚ್ಚದ ಅಂದಾಜನ್ನು ಸಿದ್ದಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಸುವ ಕುರಿತು ಇಬ್ಬರು ನಾಯಕರು ಚರ್ಚಿಸಿದರು.

ವಿವಾದಕ್ಕೀಡಾದ ಹೇಳಿಕೆ:
ಗೋವಾ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೋವಾ ಕನ್ನಡಿಗರನ್ನು(Goa Kannadigas) ಬೆಂಬಲಿಸುತ್ತಿದ್ದು, ಅಗತ್ಯಬಿದ್ದರೆ ಗೋವಾದಲ್ಲಿ ಕನ್ನಡಿಗ ಅಭ್ಯರ್ಥಿಗಳ ಪೆನಲ್ ರಚಿಸುವುದಾಗಿ ಗೋವಾ ಕನ್ನಡ ಮಹಾಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಘೋಷಿಸಿದ್ದರು. ಸಿದ್ದಣ್ಣ ಮೇಟಿ ಹೇಳಿಕೆ ಬೆನ್ನಲ್ಲೇ ಗೋವಾದ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ನಡುಕ ಶುರುವಾಗಿತ್ತು. ಗೋವಾ ಕನ್ನಡಿಗರ ಟೀಕಿಸುವ ಭರದಲ್ಲಿ ರೆವೂಲೇಷ್‌ನರಿ ಗೋವನ್ಸ್ ಪಕ್ಷದ(Revolutionary Goans) ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆಯೊಂದನ್ನು ನೀಡಿ, ಸುದ್ದಿಯಾಗಿದ್ದರು. 

ಗೋವಾ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, 'ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಮಧ್ಯಪ್ರವೇಶಿಸುತ್ತೀರಿ? ಅವರು ದುರ್ಗಾ ಪೂಜೆ(Durga Pooje) ಮಾಡುತ್ತಿದ್ದೀರಿ ನಾಳೆ ಗಣೇಶ ಉತ್ಸವದಲ್ಲಿಯೂ (Ganesh Utsav) ಭಾಗವಹಿಸುತ್ತೀರಿ. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು ನಮ್ಮ ಹಬ್ಬಗಳಲ್ಲಿ ಭಾಗಿಯಾಗುತ್ತಿದ್ದೀರಿ. ಕನ್ನಡಿಗರು ಗೋವಾವನ್ನು ‌ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ. ಗೋವಾದ ಎಲ್ಲೆಡೆ ಕನ್ನಡಿಗರು (Kannadigas) ದಾದಾಗಿರಿ ಪ್ರದರ್ಶಿಸುತ್ತಿದ್ದಾರೆ. ಇದು ನಿಮ್ಮ ಪಿತ್ರಾರ್ಜಿತ ಆಸ್ತಿ ಅಲ್ಲ, ನಮ್ಮ ತಂದೆಯ ಆಸ್ತಿ. ನೀವು ನಮ್ಮ ಹಬ್ಬಗಳ ಆಚರಣೆಯಲ್ಲೂ ಮಧ್ಯಪ್ರವೇಶಿಸುತ್ತಿದ್ದೀರಿ' ಎನ್ನುವ ಮೂಲಕ ಪರೋಕ್ಷವಾಗಿ ಹಿಂದೂ ಉತ್ಸವ, ಸಮಾರಂಭಗಳಲ್ಲಿ ಭಾಗವಹಿಸುವುದಕ್ಕೂ ರೆವಲ್ಯೂಷನರಿ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 

click me!