ಬಿಡದಿ ಟೌನ್‌ಶಿಪ್ ವಿರೋಧಿಸಿ ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದ 'ಬಿಡದಿ ಟೌನ್‌ಶಿಪ್' (Bidadi Township) ಯೋಜನೆಯನ್ನು ವಿರೋಧಿಸಿ ನಾಳೆ (ಬುಧವಾರ) ಜೆಡಿಎಸ್ (JDS) ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಫ್ರೀಡಂ ಪಾರ್ಕ್‌ನಲ್ಲಿ ದಳಪತಿಗಳು ಶಕ್ತಿ ಪ್ರದರ್ಶನ ನಡೆಸಲಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಸಂಚಾರ ದಟ್ಟಣೆ ಹೆಚ್ಚಿರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಕೆಳಕಂಡ ಬದಲಾವಣೆಗಳನ್ನು ಗಮನಿಸಬೇಕಿದೆ.
ಸಂಚಾರ ವ್ಯವಸ್ಥೆಯಲ್ಲಿನ ಬದಲಾವಣೆಗಳು
ಮೈಸೂರು ಬ್ಯಾಂಕ್ ವೃತ್ತದ ಕಡೆಯಿಂದ ಬರುವವರು: ಕೆ.ಜಿ ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲತಿರುವು ಪಡೆದು ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಪ್ಯಾಲೇಸ್ ರಸ್ತೆಯ ಮಹಾರಾಣಿ ಅಂಡರ್ ಪಾಸ್ ರಸ್ತೆಯನ್ನು ಬಳಸಬೇಕು.
ಫ್ರೀಡಂ ಪಾರ್ಕ್ ಜಂಕ್ಷನ್: ಫ್ರೀಡಂ ಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಖೋಡೆ ಜಂಕ್ಷನ್ ಕಡೆಯಿಂದ ಬರುವವರು: ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್ ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಸಂಚಾರ ದಟ್ಟಣೆ ತಪ್ಪಿಸಲು ಹಳೆ ಜೆ.ಡಿ.ಎಸ್ ಕಛೇರಿ ರಸ್ತೆಯನ್ನು ಬಳಸಲು ಸೂಚಿಸಲಾಗಿದೆ.
ಏಕಮುಖ ಸಂಚಾರ ರಸ್ತೆ ಬದಲಾವಣೆ: ಸುಬ್ಬಣ್ಣ ಜಂಕ್ಷನ್‌ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ರಸ್ತೆಯು ಸದ್ಯ ಏಕಮುಖ ಸಂಚಾರವಾಗಿದೆ (One Way). ಆದರೆ ನಾಳೆ ತಾತ್ಕಾಲಿಕವಾಗಿ ಇದನ್ನು ದ್ವಿಮುಖ ಸಂಚಾರ (Two Way) ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಗಾಂಧಿನಗರ ಕಡೆಗೆ ಹೋಗುವವರು ಈ ರಸ್ತೆಯನ್ನು ಬಳಸಬಹುದು.
ಇಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ!
ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ಕೆಳಗಿನ ರಸ್ತೆಗಳಲ್ಲಿ ಯಾವುದೇ ರೀತಿಯ ವಾಹನಗಳ ಪಾರ್ಕಿಂಗ್‌ಗೆ ಅವಕಾಶವಿರುವುದಿಲ್ಲ. ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್ ವರೆಗೆ.
ವೈ ರಾಮಚಂದ್ರ ರಸ್ತೆ
ಕಾಳಿದಾಸ ರಸ್ತೆ
ಪ್ಯಾಲೇಸ್ ರಸ್ತೆ
ಕೆ.ಜಿ ರಸ್ತೆ
ನಗರದ ಹೃದಯಭಾಗದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಮೆಜೆಸ್ಟಿಕ್, ಗಾಂಧಿನಗರ, ಕೆ.ಆರ್ ಮಾರ್ಕೆಟ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಬದಲಿ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.