
ಬೆಂಗಳೂರು (ಸೆ.24): ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಹಾಡುಹಗಲೇ ಭ್ರಷ್ಟಾಚಾರದ ಘಟನೆಯೊಂದು ರೆಡ್ಡಿಟ್‌ನಲ್ಲಿ ಬಹಿರಂಗಗೊಂಡಿದೆ. ಯೂಸರ್ ಒಬ್ಬರು ಡ್ಯಾಶ್‌ಕ್ಯಾಮ್ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಜನರನ್ನು ಲೂಟಿ ಮಾಡಲು ಮರ್ಯಾದೆಯಿಲ್ಲದೆ ನಿಂತ ಪೊಲೀಸರ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಸೋಮನಹಳ್ಳಿ ಟೋಲ್ ಪ್ಲಾಜಾದ ಮುಂದೆ ಮಾಡಿದ ವಿಡಿಯೋ ಇದಾಗಿದ್ದು, ಪೊಲೀಸ್ ಅಧಿಕಾರಿಗಳು ಭ್ರಷ್ಟ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವೀಡಿಯೊವನ್ನು ಪೋಸ್ಟ್ ಮಾಡಿದ ಯೂಸರ್, ಸೆ.21 ರಂದು ಮಧ್ಯಾಹ್ನ 1.50ಕ್ಕೆ ಆಗಿರುವ ಘಟನೆ ಎಂದಿದ್ದಾರೆ. ಅದರೊಂದಿಗೆ ಈ ಭ್ರಷ್ಟ ಕೃತ್ಯದಲ್ಲಿ ತೊಡಗಿರುವ ಪೊಲೀಸ್ ವಾಹನದ ನಂಬರ್ KA42 G1157 ಎಂದು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಾಗರಿಕರು ತಕ್ಷಣದ ಕ್ರಮ ಮತ್ತು ಈ ವಿಷಯದ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.
“ನಾನು ಈ ರೀತಿಯ ಪೋಸ್ಟ್ ಮಾಡುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ. ಡ್ಯಾಶ್‌ಕ್ಯಾಮ್‌ಗಳು ಅಪರಾಧಿಗಳನ್ನು ಸೆರೆಹಿಡಿಯಲು ನನ್ನ ಸುರಕ್ಷತೆಗೆ ಬಳಕೆ ಆಗುತ್ತದೆ ಎಂದು ನನ್ನ ಅಂದಾಜಾಗಿತ್ತು. ಆದರೆ ಈ ಬಾರಿ ನನ್ನ ಡ್ಯಾಶ್‌ಕ್ಯಾಮ್ ಪೊಲೀಸರ ಲಂಚಾವತಾರವನ್ನೇ ಸೆರೆಹಿಡಿದಿದೆ. ಸೋಮನಳ್ಳಿಯ ಟೋಲ್ ಬಳಿಕ, ಟ್ರಾಫಿಕ್ ಪೊಲೀಸರು ನನ್ನನ್ನು ತಡೆದಿದ್ದರು. ನನ್ನೊಂದಿಗೆ ಇದ್ದ ಎಲ್ಲರೂ ಕೂಡ ಸುಮ್ಮನೆ ಹಣ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ, ಪೊಲೀಸರನ್ನು ಪ್ರಶ್ನೆ ಮಾಡಿದ ಏಕೈಕ ವ್ಯಕ್ತಿ ನಾನಾಗಿದ್ದೆ. ಅವರ ಬಳಿ ಇ-ಚಲನ್ ನೀಡುವಂತೆ ಕೇಳಿದೆ. ಇದಕ್ಕೆ ಅವರು, ಇದು ಸ್ಪಾಟ್‌ಫೈನ್, ಇಲ್ಲಿಯೇ ಹಣವನ್ನು ಪಾವತಿ ಮಾಡಬೇಕು ಎಂದು ಹೇಳಿದರು. ಹಲವು ಸಮಯದವರೆಗೆ ನನ್ನು ಕಾಯಿಸಿದರು. ಇನ್ನೊಂದೆಡೆ, ಇದೇ ಮಾರ್ಗದಲ್ಲಿ ಬರುತ್ತಿದ್ದ ಸಾಕಷ್ಟು ಬೈಕ್ ಸವಾರರನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು. ನಂತರ ಕಾನೂನುಬದ್ಧವಾಗಿ ಪಾವತಿಸಲು ನಾನು ಪದೇ ಪದೇ ಇ-ಚಲನ್ ಕೇಳಿದೆ, ಆದರೆ ಅವರು ಪ್ರತಿ ಬಾರಿಯೂ ನಿರಾಕರಿಸಿದರು.”
"ನನ್ನ ಬಳಿ ಡ್ಯಾಶ್‌ಕ್ಯಾಮ್ ಪ್ರೂಫ್ ಇದೆ ಎಂದು ನಾನು ಅವರಿಗೆ ಹೇಳಿದಾಗ, ಒಬ್ಬ ಅಧಿಕಾರಿ 'ಕನ್ನಡದಲ್ಲಿ ಮಾತನಾಡಿ, ಇದು ಕರ್ನಾಟಕ' ಎಂದು ನನ್ನ ಮೇಲೆ ರೇಗಲು ಪ್ರಾರಂಭ ಮಾಡಿದರು. ಮತ್ತೊಬ್ಬ ಅಧಿಕಾರಿ ನನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡುವುದನ್ನು ತಡೆಯಲು ಪ್ರಯತ್ನಿಸಿದ್ದಲ್ಲದೆ, ಇಲ್ಲಿಂದ ಹೋಗುವಂತೆ ತಿಳಿಸಿದ್ದರು. ಇದಕ್ಕೂ ಮುನ್ನ ಅವರು ಅಕ್ಷರಶಃ ನನ್ನನ್ನು ತಡೆದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದು ನನ್ನ ವಿಚಾರ ಮಾತ್ರವಲ್ಲ. ಸಾಕಷ್ಟು ನಾಗರೀಕರು ಅಲ್ಲಿ ಪೊಲೀಸರನ್ನು ಪ್ರಶ್ನೆ ಮಾಡದೇ ಅವರು ಕೇಳಿದಷ್ಟು ಹಣವನ್ನು ನೀಡಿ ಹೋಗುತ್ತಿದ್ದರು. ಪೊಲೀಸರೇ ಸಮವಸ್ತ್ರ ಧರಿಸಿದ ಸುಲಿಗೆಕೋರರಾಗಿ ಬದಲಾದರೆ, ನಮ್ಮನ್ನು ಯಾರು ರಕ್ಷಿಸುತ್ತಾರೆ?"
ಯೂಸರ್ ಮೂಲ ಡ್ಯಾಶ್‌ಕ್ಯಾಮ್ ದೃಶ್ಯಗಳನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಗೌಪ್ಯತೆಗಾಗಿ ಪಕ್ಕದಲ್ಲಿರುವವರ ಮುಖಗಳನ್ನು ಮಸುಕುಗೊಳಿಸಿದ ಎಡಿಟೆಟ್ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಘಟನೆಯು ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಕಾನೂನನ್ನು ಎತ್ತಿ ಹಿಡಿಯುವ ಕೆಲಸ ಮಾಡುವವರೇ ನಾಗರಿಕರನ್ನು ಸುಲಿಗೆ ಮಾಡಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಹಗಲು ಹೊತ್ತಿನಲ್ಲಿ ಬಹಿರಂಗವಾಗಿ ಲಂಚ ಕೇಳಿದಾಗ, ಅದು ಸಾರ್ವಜನಿಕರಲ್ಲಿ ಅವರ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತದೆ.