BPL Cardholders in Trouble: ಅನರ್ಹ ಬಿಪಿಎಲ್‌ ಕಾರ್ಡ್‌ದಾರರಿಗೆ ನೋಟಿಸ್‌ ಬಿಸಿ, ಸಮಜಾಯಿಷಿ ನೀಡಲು 3 ದಿನಗಳ ಗಡುವು!

Kannadaprabha News, Ravi Janekal |   | Kannada Prabha
Published : Sep 24, 2025, 09:26 AM IST
BPL Card

ಸಾರಾಂಶ

ರಾಜ್ಯ ಆಹಾರ ಇಲಾಖೆಯು ಮಾನದಂಡ ಉಲ್ಲಂಘಿಸಿದ 12 ಲಕ್ಷ ಶಂಕಾಸ್ಪದ ಬಿಪಿಎಲ್‌ ಕಾರ್ಡ್‌ಗಳನ್ನು ಗುರುತಿಸಿ, ಅನರ್ಹರಿಗೆ ನೋಟಿಸ್ ಜಾರಿ ಮಾಡಿದೆ. ಮೂರು ದಿನದೊಳಗೆ ಸಮರ್ಪಕ ದಾಖಲೆಗಳೊಂದಿಗೆ ಸಮಜಾಯಿಷಿ ನೀಡದಿದ್ದರೆ, ಪಡಿತರ ಕಡಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಬೆಂಗಳೂರು  (ಸೆ.24): ಶಂಕಾಸ್ಪದ ಎನ್ನುವ ಕಾರಣಕ್ಕೆ ಈಗಾಗಲೇ 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ಶಂಕಾಸ್ಪದ ಎಂದು ಗುರುತಿಸಿದ್ದ ರಾಜ್ಯದ ಆಹಾರ ಇಲಾಖೆ, ಇದೀಗ ಮಾನದಂಡ ಉಲ್ಲಂಘಿಸಿದ ಪಡೆದಿರುವ ಅನರ್ಹ ಬಿಪಿಎಲ್ ಕಾರ್ಡ್‌ಗಳಿಗೆ ಆಹಾರ ಇಲಾಖೆ, ಕಾರಣ ಕೇಳಿ ನೋಟಿಸ್ ಕೊಟ್ಟಿದೆ. ನೋಟಿಸ್ ತಲುಪಿದ ಮೂರು ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ಸಮಜಾಯಿಷಿ ನೀಡಬೇಕೆಂದು ಸೂಚಿಸಿದೆ.

ಸಮರ್ಪಕ ಸಮಜಾಯಿಷಿ ನೀಡದಿದ್ದರೆ ಕಾನೂನು ಕ್ರಮದ ಜತೆಗೆ ದುರುಪಯೋಗ ಪಡಿಸಿಕೊಂಡಿದ್ದ ಪಡಿತರ ಬಾಬ್ತಿನ ಪ್ರಮಾಣವನ್ನು ಮುಕ್ತ ಮಾರುಕಟ್ಟೆ ದರದಲ್ಲಿ ಲೆಕ್ಕಹಾಕಿ ವಸೂಲಿ ಮಾಡುವುದಾಗಿ ಇಲಾಖೆಯು ಅನರ್ಹ ಫಲಾನುಭವಿಗಳಿಗೆ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಬಿಪಿಎಲ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸಲು ಸರ್ಕಾರ ಮಾನದಂಡ ನಿಗದಿಪಡಿಸಿದೆ. ಅದರಂತೆ, ವಿವಿಧ ಇಲಾಖೆಗಳ ದತ್ತಾಂಶಗಳನ್ನು ಪರಿಶೀಲಿಸಿದ್ದು, ಮಾನದಂಡಗಳಿಗೆ ವಿರುದ್ಧವಾಗಿರುವ ಶಂಕಿತ ಪಡಿತರ ಚೀಟಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ನೋಟಿಸ್‌ನಲ್ಲಿ ಇಲಾಖೆ ಉಲ್ಲೇಖಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾಗಲ್ಲ, ಅನರ್ಹರನ್ನು ಸುಮ್ಮನೆ ಬಿಡೊಲ್ಲ; ಸಚಿವ ಮುನಿಯಪ್ಪ!

ಯಾರಿಗೆ ನೋಟಿಸ್‌?:

ವಾರ್ಷಿಕ ಆದಾಯದ ಮಿಟಿ ದಾಟಿದವರು, ನಾಲ್ಕು ಚಕ್ರದ ವಾಹನ ಹೊಂದಿದವರು, ತೆರಿಗೆ ಪಾವತಿದಾರರು, ಏಳೂವರೆ ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವವರು, ಸ್ವಂತ ಮನೆ ಹೊಂದಿರುವವರು, ಇತ್ಯಾದಿ ಕಾರಣಗಳಿಗಾಗಿ ಸಾವಿರಾರು ಜನರಿಗೆ ಆಹಾರ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ಪಡಿತರ ಕಟ್‌:

ಶಂಕಾಸ್ಪದ ಕಾರ್ಡ್‌ಗಳಿಗೆ ಪಡಿತರ ವಿತರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಇಲಾಖೆ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ತಿಂಗಳಿಂದ ಶಂಕಾಸ್ಪದ ಕಾರ್ಡ್‌ಗಳ ಫಲಾನುಭವಿಗಳಿಗೆ ಅಕ್ಕಿ ಹಂಚಿಕೆಯಾಗುವುದಿಲ್ಲ. ‘ಶಂಕಾಸ್ಪದ ವರ್ಗ’ಕ್ಕೆ ಸೇರಿಸಿದ್ದ ಪಡಿತರ ಚೀಟಿ ಪಟ್ಟಿಯನ್ನು ಅಂಗಡಿಗಳಿಗೆ ರವಾನಿಸಿದೆ. ಈ ಪಟ್ಟಿಯನ್ನು ಮಾಲೀಕರು, ತಮ್ಮ ಅಂಗಡಿ ಮುಂಭಾಗ ಅಂಟಿಸಿದ್ದಾರೆ. ಪಟ್ಟಿಯಲ್ಲಿ ಹೆಸರು, ಯಾವ ಅಂಗಡಿಯಲ್ಲಿ ಪಡಿತರ ಪಡೆಯುತ್ತಿರುವುದು, ಕಾರ್ಡ್ ಸಂಖ್ಯೆ ಮತ್ತು ಯಾವ ಕಾರಣಕ್ಕೆ ಕಾರ್ಡ್ ರದ್ದುಪಡಿಸಲಾಗಿದೆ ಸೇರಿ ಇತರೆ ವಿವರಗಳಿವೆ.

-ಬಾಕ್ಸ್‌-

ತೆರಿಗೆ ಪಾವತಿಸುವವರ ಹೆಸರು ರದ್ದು ಮಾಡಿ: ಆಗ್ರಹ

ಕುಟುಂಬ ಸದಸ್ಯರ ಪೈಕಿ ಯಾರಾದರೂ ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಅಂಥವರ ಕಾರ್ಡ್ ರದ್ದುಪಡಿಸುವ ಬದಲು ತೆರಿಗೆ ಪಾವತಿಸಿದರ ಹೆಸರನ್ನು ಡಿಲೀಟ್ ಮಾಡಬೇಕು. ಒಬ್ಬರ ತಪ್ಪಿಂದ ಕಾರ್ಡ್ ರದ್ದುಪಡಿಸಿದರೆ ಕುಟುಂಬದ ಇತರೆ ಸದಸ್ಯರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಇಲಾಖೆ ನಮಗೆ ಒಂದು ಅವಕಾಶ ನೀಡಬೇಕು. ಏಕಾಏಕಿ ಕಾರ್ಡ್ ರದ್ದುಪಡಿಸಬಾರದು ಎಂದು ಹಲವರು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ