ಅಂತೂ ಇಂತೂ ಕಾಯುವಿಕೆ ಅಂತ್ಯ, ಬರೋಬ್ಬರಿ 15 ವರ್ಷಗಳ ಬಳಿಕ ಜಕ್ಕೂರು ರೈಲ್ವೆ ಮೇಲ್ಸೇತುವೆ ನ.18ರಂದು ಲೋಕಾರ್ಪಣೆ!

Gowthami K   | ANI
Published : Nov 18, 2026, 10:47 AM IST
Jakkur Railway Overbridge

ಸಾರಾಂಶ

ಉತ್ತರ ಬೆಂಗಳೂರಿನ ಜಕ್ಕೂರಿನಲ್ಲಿ ಕಳೆದ 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ 600 ಮೀಟರ್ ಉದ್ದದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಬುಧವಾರ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಜಕ್ಕೂರು, ಯಲಹಂಕ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ವಾಹನ ಸವಾರರಿಗೆ ಅನುಕೂಲವಾಗಲಿದೆ.

ಬೆಂಗಳೂರು: ಉತ್ತರ ಬೆಂಗಳೂರಿನ ಜಕ್ಕೂರು, ಯಲಹಂಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾಹನ ಸವಾರರಿಗೆ ಬಹುದೊಡ್ಡ ನೆಮ್ಮದಿಯ ಸುದ್ದಿ ಸಿಕ್ಕಿದೆ. ಕಾಮಗಾರಿ ಆರಂಭವಾಗಿ ಬರೋಬ್ಬರಿ 15 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ, ಜಕ್ಕೂರು ರೈಲ್ವೆ ಮೇಲ್ಸೇತುವೆ ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ. ನವೆಂಬರ್ 18ರ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮೇಲ್ಸೇತುವೆಯನ್ನು ಉದ್ಘಾಟಿಸಲಿದ್ದಾರೆ.

ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಮೇಲ್ಸೇತುವೆ

ಸುಮಾರು 443 ಮೀಟರ್ ಮುಖ್ಯ ಮೇಲ್ಸೇತುವೆ ಹಾಗೂ ಕೂಡು ರಸ್ತೆಗಳು ಸೇರಿ ಒಟ್ಟು 600 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲವಿರುವ ಈ ಚತುಷ್ಪಥ ಫ್ಲೈಓವರ್ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದರೂ, ಔಪಚಾರಿಕ ಉದ್ಘಾಟನೆ ಬಾಕಿ ಉಳಿದಿತ್ತು. ಜಕ್ಕೂರು ಮುಖ್ಯ ರಸ್ತೆಯಲ್ಲಿರುವ ಈ ಮೇಲ್ಸೇತುವೆಯು ರೈಲ್ವೆ ಲೆವೆಲ್ ಕ್ರಾಸಿಂಗ್ ಕಿರಿಕಿರಿಯನ್ನು ತಪ್ಪಿಸಲಿದ್ದು, ಯಲಹಂಕ ರೈತ ಸಂತೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಕಡೆಗಿನ ಸಂಚಾರವನ್ನು ಅತ್ಯಂತ ಸುಗಮಗೊಳಿಸಿದೆ.

ಬೆಂಗಳೂರು ಉತ್ತರ ನಗರ ನಿಗಮದ (BNCC) ಮಾಹಿತಿಯಂತೆ, ಈ ಮೇಲ್ಸೇತುವೆಯ ಬಳಕೆಯಿಂದ ವಾಹನ ಸವಾರರಿಗೆ ಪ್ರಯಾಣದ ದೂರವು ಸುಮಾರು 3 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಲಿದೆ. ಅಲ್ಲದೆ, ಯಲಹಂಕ, ಹೆಬ್ಬಾಳ, ಥಣಿಸಂದ್ರ, ಕೋಗಿಲು ಮತ್ತು ಬಳ್ಳಾರಿ ರಸ್ತೆ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಅಂದಾಜು 15 ನಿಮಿಷಗಳ ಅಮೂಲ್ಯ ಸಮಯ ಉಳಿತಾಯವಾಗಲಿದೆ.

ಯೋಜನೆಯ ವೆಚ್ಚ ಎಷ್ಟು?

ಈ ಮಹತ್ವಾಕಾಂಕ್ಷಿ ಯೋಜನೆಗೆ ಭೂಸ್ವಾಧೀನ ಮತ್ತು ನಿರ್ಮಾಣ ವೆಚ್ಚ ಸೇರಿದಂತೆ ಒಟ್ಟು 69.6 ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ನಿರ್ಮಾಣ ಕಾಮಗಾರಿಗಾಗಿಯೇ ಸುಮಾರು 26.16 ಕೋಟಿ ರೂ. , ನೈಋತ್ಯ ರೈಲ್ವೆ 6.4 ಕೋಟಿ ರೂ. ಹಾಗೂ ಹಿಂದಿನ ಬಿಬಿಎಂಪಿ 19.8 ಕೋಟಿ ರೂ. ಅನುದಾನ ನೀಡಿವೆ. ಉಳಿದಂತೆ 43.5 ಕೋಟಿ ರೂ.ಗಳ ಸಂಪೂರ್ಣ ಭೂಸ್ವಾಧೀನ ವೆಚ್ಚವನ್ನು ಪಾಲಿಕೆಯೇ ಭರಿಸಿದೆ.

ನೈಋತ್ಯ ರೈಲ್ವೆ ಇಲಾಖೆಯು 2011ರಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿತ್ತಾದರೂ, ಭೂಸ್ವಾಧೀನ ಪ್ರಕ್ರಿಯೆಯ ತೊಡಕುಗಳಿಂದಾಗಿ 2014ರಲ್ಲಿ ಕೆಲಸ ಸ್ಥಗಿತಗೊಂಡಿತ್ತು. 2017ರಲ್ಲಿ ಅಂದಿನ ಬಿಬಿಎಂಪಿ ನೇರ ಖರೀದಿ ಯೋಜನೆಯಡಿ ಭೂಸ್ವಾಧೀನಕ್ಕೆ ಮರುಚಾಲನೆ ನೀಡಿ, ಅಗತ್ಯವಿದ್ದ 48 ಆಸ್ತಿಗಳ ಪೈಕಿ 33 ಆಸ್ತಿಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಸ್ವಾಧೀನಪಡಿಸಿಕೊಂಡಿತು. ಆದರೆ, 2018ರಲ್ಲಿ ರೈಲ್ವೆ ಇಲಾಖೆ ಮತ್ತೆ ಕಾಮಗಾರಿ ನಿಲ್ಲಿಸಿದ್ದರಿಂದ ಐದು ಗರ್ಡರ್‌ಗಳ ಅಳವಡಿಕೆ ಪೂರ್ಣಗೊಂಡಿದ್ದರೂ, ಪ್ರಮುಖ ಆರ್‌ಸಿಸಿ ಸ್ಪ್ಯಾನ್ ಕೆಲಸ ಅರ್ಧಕ್ಕೆ ನಿಂತಿತ್ತು.

2024ರಲ್ಲಿ ಬಿಬಿಎಂಪಿ ಬಾಕಿ ಕಾಮಗಾರಿಗೆ 10 ತಿಂಗಳ ಗಡುವಿನೊಂದಿಗೆ ಹೊಸ ಕಾರ್ಯಾದೇಶ ನೀಡಿತು. ಬಾಕಿ ಭೂಸ್ವಾಧೀನದಿಂದಾಗಿ ತುಸು ವಿಳಂಬವಾದರೂ, ಬಳಿಕ ಹೆಚ್ಚುವರಿ 6 ಆಸ್ತಿಗಳಿಗೆ 18.5 ಕೋಟಿ ರೂ. ಪರಿಹಾರ ನೀಡಿ ಸ್ವಾಧೀನ ಪೂರ್ಣಗೊಳಿಸಲಾಯಿತು. ಉಳಿದ ಕಾಮಗಾರಿಗೆ ಹೆಚ್ಚುವರಿಯಾಗಿ 15 ಕೋಟಿ ರೂ. ಮಂಜೂರು ಮಾಡಲಾಗಿದ್ದು, ಅಂತಿಮವಾಗಿ ಬೆಂಗಳೂರು ಉತ್ತರ ನಗರ ನಿಗಮವು ಯೋಜನೆಯನ್ನು ಪೂರ್ಣಗೊಳಿಸಿದೆ.

ಬೈಯಪ್ಪನಹಳ್ಳಿ ರೋಟರಿ ಫ್ಲೈಓವರ್ ಕಾಮಗಾರಿಗೆ ಶಂಕುಸ್ಥಾಪನೆ

ಇದೇ ಸಂದರ್ಭದಲ್ಲಿ ಪೂರ್ವ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲೂ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಐಒಸಿ ಜಂಕ್ಷನ್‌ನಲ್ಲಿ 436.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಎಲಿವೇಟೆಡ್ ರೋಟರಿ ಫ್ಲೈಓವರ್ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿಯ ಹೆಚ್ಚುವರಿ ದ್ವಿಪಥ ರೈಲ್ವೆ ಓವರ್‌ಬ್ರಿಡ್ಜ್ ಕಾಮಗಾರಿಗೆ ಮುಖ್ಯಮಂತ್ರಿಗಳು ಬುಧವಾರ ಶಂಕು ನೆರವೇರಿಸಲಿದ್ದಾರೆ.

ರಾಜ್ಯ ಸರ್ಕಾರದ ವಿಶೇಷ ಮೂಲಸೌಕರ್ಯ ಬಂಡವಾಳ ಯೋಜನೆಯಡಿ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಾಲ್ಕು ಪಥದ ಕ್ಯಾರೇಜ್‌ವೇ ಹೊಂದಿರುವ ಈ ಮೇಲ್ಸೇತುವೆಯು ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಹಾಗೂ ಮಾರುತಿ ಸೇವಾನಗರ ರಸ್ತೆ ಮೂಲಕ ಹಳೆ ಮದ್ರಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಇಳಿಜಾರುಗಳನ್ನು ಒಳಗೊಂಡಿರಲಿದೆ. ಇದರಿಂದ ಐಒಸಿ ಜಂಕ್ಷನ್ ಮತ್ತು ರೈಲ್ವೆ ಗೇಟ್ ಬಳಿಯ ವಾಹನ ದಟ್ಟಣೆ ತಗ್ಗುವುದರ ಜೊತೆಗೆ, ರೈಲು ನಿಲ್ದಾಣಕ್ಕೆ ಸುಗಮ ಸಂಪರ್ಕ ಹಾಗೂ ವಾಹನ ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಮಟ್ಟದ ನೆರವಾಗಲಿದೆ.

PREV
Read more Articles on
click me!

Recommended Stories

Bengaluru: ಮುಸ್ಲಿಂ ಎಂಬ ಕಾರಣಕ್ಕೆ ಫ್ಲ್ಯಾಟ್ ಬಾಡಿಗೆ ನಿರಾಕರಣೆ: ಟೆಕ್ಕಿ ಪೋಸ್ಟ್
₹16000 ಕೋಟಿ ರು. ವೆಚ್ಚದ 2 ಗ್ರಾಮೀಣ ರಸ್ತೆ ಸ್ಕೀಂಗೆ ನಾಡಿದ್ದು ಸಿಎಂ ಡಿಕೆ ಚಾಲನೆ!