
ಬೆಂಗೂರು (ಆ.18): ಈ ಬಾರಿಯ ಗಣೇಶ ಚತುರ್ಥಿ ಆಚರಣೆ ಸಾರ್ವಜನಿಕರು ಹಾಗೂ ಗಣೇಶೋತ್ಸವ ಮಂಡಳಿಗಳ ಜೇಬಿಗೆ ಕೊಂಚ ದುಬಾರಿಯಾಗಲಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗೂ ಸಾರಿಗೆ ವೆಚ್ಚದ ಭಾರಿ ಜಿಗಿತದಿಂದಾಗಿ ಈ ವರ್ಷ ಕರ್ನಾಟಕದಲ್ಲಿ ಗೌರಿ-ಗಣೇಶ ಮೂರ್ತಿಗಳ ಬೆಲೆ ಶೇಕಡಾ 15 ರಿಂದ 25 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮೈಸೂರು, ಕಲಬುರಗಿ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಮೂರ್ತಿಗಳ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಮೂರ್ತಿ ತಯಾರಕರು ಮತ್ತು ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯ ಮೂರ್ತಿ ತಯಾರಕ ಪ್ರದೀಪ್ ತೋರ್ಗಲ್ ಈ ಕುರಿತು ಮಾತನಾಡಿ, ಸಾಮಾನ್ಯವಾಗಿ ಪ್ರತಿ ವರ್ಷ ಗಣೇಶ ಮೂರ್ತಿಗಳ ಬೆಲೆಯಲ್ಲಿ ಶೇಕಡಾ 5 ರಷ್ಟು ಏರಿಕೆಯಾಗುವುದು ಸಹಜ. ಆದರೆ ಈ ವರ್ಷ ಬಣ್ಣ, ಬಿದಿರು, ಮಣ್ಣು ಸೇರಿದಂತೆ ಇತರೆ ಕಚ್ಚಾವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರ ಜೊತೆಗೆ ಸಾರಿಗೆ ವೆಚ್ಚ ಹಾಗೂ ಕಾರ್ಮಿಕರ ಕೂಲಿಯೂ ಗಗನಕ್ಕೇರಿದೆ. ಹೀಗಾಗಿ ಬೇರೆ ದಾರಿಯಿಲ್ಲದೆ ಮೂರ್ತಿಗಳ ಬೆಲೆಯನ್ನು ಶೇ. 10 ರಿಂದ 15 ರಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದರೆ.
ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಲ್ಲಿ ಬೃಹದಾಕಾರದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದು ವಿಶಿಷ್ಟ ಸಂಪ್ರದಾಯ. ರಾಜ್ಯದಲ್ಲೇ ಅತ್ಯಂತ ಎತ್ತರದ ಈ ಮೂರ್ತಿಗಳನ್ನು ತಯಾರಿಸಲು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಕುಶಲಕರ್ಮಿಗಳು ಹಬ್ಬಕ್ಕೂ ಕೆಲ ತಿಂಗಳುಗಳ ಮುಂಚಿತವಾಗಿಯೇ ಆಗಮಿಸುತ್ತಾರೆ.
ಪ್ರತಿ ವರ್ಷ ಹುಬ್ಬಳ್ಳಿಗೆ ಆಗಮಿಸುವ ಪಶ್ಚಿಮ ಬಂಗಾಳದ ಕುಶಲಕರ್ಮಿ ಅಪ್ಪು ಪಾಲ್ ಮಾತನಾಡಿ, ಕಚ್ಚಾವಸ್ತುಗಳ ಬೆಲೆ ಶೇ. 10 ರಿಂದ 30 ರಷ್ಟು ಹೆಚ್ಚಾಗಿದೆ. ಕಾರ್ಮಿಕರು ಹೆಚ್ಚಿನ ಕೂಲಿ ಬೇಡಿಕೆ ಇಡುತ್ತಿದ್ದಾರೆ. ನಾವು 21 ಅಡಿ ಎತ್ತರದ ಬೃಹತ್ ಮೂರ್ತಿಗಳ ಜೊತೆಗೆ ಸಣ್ಣ ಮೂರ್ತಿಗಳನ್ನೂ ತಯಾರಿಸುತ್ತೇವೆ. ಬೆಲೆ ಪರಿಷ್ಕರಣೆ ಕುರಿತು ಗಣೇಶೋತ್ಸವ ಮಂಡಳಿಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಮೈಸೂರಿನ ಮೂರನೇ ತಲೆಮಾರಿನ ಮೂರ್ತಿ ತಯಾರಕ ಸುನಿಲ್ ಮಾತನಾಡಿ, ಈ ವರ್ಷ ಕಚ್ಚಾವಸ್ತುಗಳ ವೆಚ್ಚ ಶೇ. 20 ರಷ್ಟು ಹೆಚ್ಚಾಗಿದೆ. ಗೋಲ್ಡ್ ಕಲರ್ ಪೌಡರ್ ಬೆಲೆ ಕೆಜಿಗೆ ₹1,900 ರಿಂದ ₹2,300 ಕ್ಕೆ ಏರಿಕೆಯಾಗಿದೆ. ಈ ಹಿಂದೆ ₹5,500 ಕ್ಕೆ ಸಿಗುತ್ತಿದ್ದ ಒಂದು ಟ್ರ್ಯಾಕ್ಟರ್ ಮಣ್ಣಿನ ಬೆಲೆ ಈಗ ₹6,500 ಆಗಿದೆ. ಪೇಂಟ್ ಬೆಲೆ ಲೀಟರ್‌ಗೆ ₹20 ರಿಂದ ₹30 ಹೆಚ್ಚಾಗಿದೆ. ಗ್ರಾಹಕರಿಗೆ ಇದನ್ನು ವಿವರಿಸುವುದು ಕಷ್ಟವಾದರೂ ಬೆಲೆ ಏರಿಸದೇ ನಮಗೆ ಬೇರೆ ದಾರಿಯಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮೂರ್ತಿಗಳ ಬೆಲೆ ಇತರ ನಗರಗಳಿಗಿಂತ ಮತ್ತಷ್ಟು ದುಬಾರಿಯಾಗಲಿದೆ. ಬೆಂಗಳೂರಿನಲ್ಲಿ ಗಣೇಶ ಮೂರ್ತಿಗಳ ದರ ಬರೋಬ್ಬರಿ ಶೇಕಡಾ 30 ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಗಣೇಶೋತ್ಸವ ಮಂಡಳಿಗಳು ತಮ್ಮ ಸಂಬಂಧಪಟ್ಟ ಸಮಿತಿಗಳಿಗೆ ಈಗಾಗಲೇ ಮಾಹಿತಿ ರವಾನಿಸಿವೆ. ಉಂಟಾಗಿರುವ ಪರಿಸ್ಥಿತಿಯ ಕುರಿತು 'ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ'ಯು ಶೀಘ್ರದಲ್ಲೇ ಸಂಬಂಧಪಟ್ಟ ಎಲ್ಲಾ ಪಾಲುದಾರರೊಂದಿಗೆ ಸಭೆ ನಡೆಸಿ ಚರ್ಚಿಸುವ ಸಾಧ್ಯತೆಯಿದೆ.