
ಬೆಂಗಳೂರು (ಸೆ.04): ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ. ನಗರದ ಎಚ್‌ಎಸ್‌ಆರ್ ಲೇಔಟ್ ಸಮೀಪವಿರುವ ಪ್ರಸಿದ್ಧ ಅಗರ ಕೆರೆ (Agara Lake) ಯಲ್ಲಿ ಬೆಳಗ್ಗೆ ಜಾಗಿಂಗ್ ಮತ್ತು ವಾಕಿಂಗ್ ಮಾಡುತ್ತಿದ್ದ ಯುವತಿಯರು ಹಾಗೂ ಮಹಿಳೆಯರ ವಿಡಿಯೋವನ್ನು ಮೊಬೈಲ್‌ನಲ್ಲಿ ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಯುವಕನೊಬ್ಬ ಸ್ಥಳೀಯರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬೆಂಗಳೂರು ನಗರ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದ್ದು, ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಪ್ರತಿದಿನದಂತೆ ನೂರಾರು ಜನರು ಮುಂಜಾನೆ ಆರೋಗ್ಯ ಕಾಪಾಡಿಕೊಳ್ಳಲು ಅಗರ ಕೆರೆಯ ವಾಕಿಂಗ್ ಟ್ರ್ಯಾಕ್‌ನಲ್ಲಿ ಜಾಗಿಂಗ್ ಹಾಗೂ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ಅನುಮಾನಾಸ್ಪದವಾಗಿ ಮಹಿಳೆಯರ ಬೆನ್ನಹಿಂದೆ ಹೋಗಿ ಮೊಬೈಲ್ ಕ್ಯಾಮೆರಾದಲ್ಲಿ ಅವರನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದನು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಮಹಿಳೆಯೊಬ್ಬರು ಧೈರ್ಯ ಮಾಡಿ ಆತನನ್ನು ತಡೆದು ಪ್ರಶ್ನಿಸಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಇತರ ವಾಕರ್ಸ್ ಆತನ ಸುತ್ತ ಜಮಾಯಿಸಿ ಆತನ ಮೊಬೈಲ್ ಫೋನ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಫೋನ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಹಲವು ಮಹಿಳೆಯರ ಅಸಭ್ಯ ವಿಡಿಯೋಗಳು ಪತ್ತೆಯಾಗಿವೆ.
ಸಾರ್ವಜನಿಕರ ಕೈಗೆ ಸಿಕ್ಕಿಬೀಳುತ್ತಿದ್ದಂತೆಯೇ ತಬ್ಬಿಬ್ಬಾದ ಯುವಕ, ತನ್ನ ಮೊಬೈಲ್‌ನಲ್ಲಿದ್ದ ವಿಡಿಯೋಗಳನ್ನು ಅಳಿಸಿಹಾಕಲು (Delete) ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ತಡೆದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತಾನು ಮಾಡಿದ ತಪ್ಪು ಬಯಲಾಗುತ್ತಿದ್ದಂತೆ, ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಲು ಆರಂಭಿಸಿದ್ದಾನೆ. ಈ ಇಡೀ ದೃಶ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, 'ಅಗರ ಕೆರೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಹಾಗೂ ಓಟಗಾರರಿಗೆ ಗೌರವ ನೀಡಿ. ವೈಯಕ್ತಿಕ ಗಡಿಗಳನ್ನು ಗೌರವಿಸಿ' ಎಂದು ಬರೆದುಕೊಂಡಿದ್ದಾರೆ. 'ನೋಡಲು ಸುಶಿಕ್ಷಿತ, ಸಾಮಾನ್ಯ ಯುವಕನಂತೆಯೇ ಕಾಣುತ್ತಾನೆ. ಆದರೆ ಇಂತಹ ವಿಕೃತ ಮನಸ್ಥಿತಿ ನಿಜಕ್ಕೂ ಭಯ ಹುಟ್ಟಿಸುತ್ತದೆ. ಬೆಂಗಳೂರು ಇಷ್ಟೊಂದು ಅಸುರಕ್ಷಿತವಾಗುತ್ತಿದೆಯೇ?' ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬೆಂಗಳೂರು ನಗರ ಪೊಲೀಸರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಕಮೆಂಟ್ ಮಾಡಲಾಗಿದ್ದು, ಘಟನೆ ನಡೆದ ನಿಖರ ಸ್ಥಳ ಮತ್ತು ವಿವರಗಳನ್ನು ನೀಡುವಂತೆ ಕೋರಲಾಗಿದೆ. ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕ ತಾಣಗಳಲ್ಲಿ, ವಿಶೇಷವಾಗಿ ಉದ್ಯಾನವನಗಳು ಮತ್ತು ಕೆರೆಗಳ ಆವರಣದಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು ಹಾಗೂ ಸಿಸಿಟಿವಿ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
🚨 CAUGHT RED-HANDED AT AGARA LAKE.
This man was caught recording women runners at the lake.
When confronted he tried to delete the videos and then apologised. pic.twitter.com/pcJRnw1zWI— Aparajite (@amshilparaghu) September 2, 2026