
ಬೆಂಗಳೂರು (ಸೆ.4): ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಸಂಘ-ಸಂಸ್ಥೆಗಳು, ಬಡವರು ಹಾಗೂ ನೊಂದವರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ರಾಜಧಾನಿಯ 'ಫ್ರೀಡಂ ಪಾರ್ಕ್'ನಲ್ಲಿ ಈಗ ಪ್ರತಿಭಟನೆ ನಡೆಸುವುದೇ ಭಾರೀ ದುಬಾರಿಯಾಗಿದೆ. ಪಾರ್ಕ್ ಆವರಣದಲ್ಲಿ ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿರುವ ಬೃಹತ್ ಕಟ್ಟಡದ ಮೇಲ್ಭಾಗದ ಜಾಗದಲ್ಲಿ ಸಮಾವೇಶ ನಡೆಸಲು 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ದಿನಕ್ಕೆ ಬರೋಬ್ಬರಿ ₹1 ಲಕ್ಷ ಬಾಡಿಗೆ ನಿಗದಿಪಡಿಸಿದ್ದು, ಹೋರಾಟಗಾರರು ಹಾಗೂ ಪ್ರತಿಭಟನಾಕಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಶೇಷಾದ್ರಿ ರಸ್ತೆಯ ಫ್ರೀಡಂ ಪಾರ್ಕ್ ಆವರಣದಲ್ಲಿರುವ ಪಾರ್ಕಿಂಗ್ ಸಮುಚ್ಛಯದ ಮೇಲ್ಭಾಗದಲ್ಲಿದ್ದ ಜಾಗವನ್ನು ಪ್ರಜಾಸತ್ತಾತ್ಮಕ ಹೋರಾಟಗಳಿಗೆ ನೀಡಲು ಜಿಬಿಎ ₹1 ಲಕ್ಷ ಶುಲ್ಕ ನಿಗದಿಪಡಿಸಿದೆ. ದಿನಕ್ಕೆ ₹1 ಲಕ್ಷ ಪಾವತಿಸಲು ಸಾಮರ್ಥ್ಯವಿರುವ ಪ್ರಭಾವಿಗಳಿಗೆ ಹಾಗೂ ಸಂಸ್ಥೆಗಳಿಗೆ ಮಾತ್ರ ಇಲ್ಲಿ ಸಮಾವೇಶ ಮಾಡಲು ಅವಕಾಶ ನೀಡಲಾಗುತ್ತಿದ್ದು, ಬಡ ಪ್ರತಿಭಟನಾಕಾರರಿಗೆ ಇದು ಸಂಪೂರ್ಣವಾಗಿ ಎಟುಕದಂತಾಗಿದೆ. ದುಬಾರಿ ಶುಲ್ಕ ಭರಿಸಲಾಗದ ವಿವಿಧ ಸಂಘಟನೆಗಳು ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಬಡ ಜನರು ಪಾರ್ಕ್‌ನ ಅರ್ಧ ಎಕರೆಯಷ್ಟು ಕಿರಿದಾದ ಬಯಲು ಜಾಗದಲ್ಲೇ ಮಳೆ ಮತ್ತು ಸುಡುವ ಬಿಸಿಲಿನಲ್ಲೇ ನಿಂತು ಪ್ರತಿಭಟನೆ ನಡೆಸುವಂತಾಗಿದೆ.
ಪ್ರತಿಭಟನೆಗೆ ಬರುವ ಜನಸಾಮಾನ್ಯರು, ರೈತರು, ಕಾರ್ಮಿಕರು ಹಾಗೂ ಮುಖ್ಯವಾಗಿ ಮಹಿಳೆಯರು ಮಳೆ ಮತ್ತು ಬಿಸಿಲಿನಿಂದ ಪಾರಾಗಲಿ ಎನ್ನುವ ಸದುದ್ದೇಶದಿಂದ 2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಟ್ಟಡವನ್ನು ಉದ್ಘಾಟಿಸಿದ್ದರು. ಆದರೆ, ಸಾರ್ವಜನಿಕ ಹಣದಲ್ಲಿ ಕೋಟಿಗಟ್ಟಲೆ ವೆಚ್ಚ ಮಾಡಿ ನಿರ್ಮಿಸಿದ ಈ ಸುಸಜ್ಜಿತ ಮೂಲಸೌಕರ್ಯ ಕಟ್ಟಡ ಇದೀಗ ಪ್ರತಿಭಟನಾಕಾರರ ಉಪಯೋಗಕ್ಕೆ ಬಾರದಂತಾಗಿದೆ. ಇಡೀ ಆವರಣವನ್ನು ಜಿಬಿಎ (GBA) ವಾಣಿಜ್ಯೀಕರಣಗೊಳಿಸಿದ್ದು, ಮೂಲಸೌಕರ್ಯಗಳ ಕೊರತೆಯಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಸೂಕ್ತ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯವೂ ಸಿಗದೆ ತೀವ್ರ ಯಾತನೆ ಅನುಭವಿಸುತ್ತಿದ್ದಾರೆ.
ಸಾಮಾನ್ಯರ ಧ್ವನಿಯನ್ನು ನಿಯಂತ್ರಿಸಲು ಹೊರಟಿರುವ ಜಿಬಿಎ ವಿರುದ್ಧ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಹರಿದಾಯ್ದಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, "ಬಡವರು, ನೊಂದವರು ನ್ಯಾಯ ಕೇಳಲು ಬಂದರೆ ದಿನಕ್ಕೆ ₹1 ಲಕ್ಷ ಬಾಡಿಗೆ ವಸೂಲಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಫ್ರೀಡಂ ಪಾರ್ಕ್ ಅನ್ನು ವ್ಯಾಪಾರಿ ಕೇಂದ್ರವನ್ನಾಗಿ ಮಾಡಿದೆ. ಕೂಡಲೇ ಈ ಅನ್ಯಾಯದ ಶುಲ್ಕವನ್ನು ಹಿಂಪಡೆದು ಪ್ರತಿಭಟನಾಕಾರರಿಗೆ ಉಚಿತವಾಗಿ ಜಾಗ ಬಿಟ್ಟುಕೊಡಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.