
ನವದೆಹಲಿ: ಬೆಂಗಳೂರಿನ ಐತಿಹಾಸಿಕ ಯಡಿಯೂರು ಕೆರೆ ಸಮೀಪದ ಜಾಗದ ಸರ್ವೆ ಸಂಖ್ಯೆಗಳ ಕುರಿತು ದಶಕಗಳ ಬಳಿಕ ಹೊಸದಾಗಿ ತನಿಖೆ ನಡೆಸಲು ಅಧಿಕಾರಿಗಳಿಗೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಕಂದಾಯ ಅಧಿಕಾರಿಗಳು ಕಾನೂನಿನಲ್ಲಿ ನಿಗದಿಪಡಿಸಿದ ಕಾಲಮಿತಿಯನ್ನು ಮೀರಿ, ದಶಕಗಳಷ್ಟು ಹಳೆಯ ಆದೇಶ ಅಥವಾ ಭೂ ದಾಖಲೆಗಳನ್ನು ಮರುಪರಿಶೀಲಿಸಲು ಸಾಧ್ಯವಿಲ್ಲ ಎಂದು ದೇಶದ ಅತ್ಯುನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, 2014ರಲ್ಲಿ ಭೂ ಮಾಲೀಕರಿಗೆ ಜಾರಿಗೊಳಿಸಲಾಗಿದ್ದ ಮರು-ತನಿಖೆಯ ನೋಟಿಸ್ ಅನ್ನು ಪೂರ್ಣವಾಗಿ ವಜಾಗೊಳಿಸಿದೆ.
ವಿವಾದಿತ 28 ಗುಂಟೆ ಜಮೀನನ್ನು ಮೂಲ ಮಾಲೀಕರು 1929ರಲ್ಲೇ ಎಂಟು ಪ್ರತ್ಯೇಕ ಕ್ರಯಪತ್ರಗಳ ಮೂಲಕ ಖರೀದಿಸಿದ್ದರು. ತದನಂತರ ಮೂಲ ಮಾಲೀಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಅಂದಿನ BBMP) ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆದು ಅಪಾರ್ಟ್‌ಮೆಂಟ್ ಸಮುಚ್ಚಯವನ್ನು ನಿರ್ಮಿಸಿದ್ದರು. 2006ರಲ್ಲಿ ಈ ಕಟ್ಟಡಕ್ಕೆ ಬಿಬಿಎಂಪಿಯಿಂದ ಅಧಿಕೃತ ಸ್ವಾಧೀನ ಪ್ರಮಾಣಪತ್ರವೂ ದೊರೆತಿತ್ತು. ಆದರೆ, 1974ರ ನಗರ ಮಾಲೀಕತ್ವ ಸರ್ವೆ (CTS) ಸಮಯದಲ್ಲಿ ನೀಡಲಾದ ಸಿಟಿಎಸ್ ಸಂಖ್ಯೆಗಳಲ್ಲಿ ಅಕ್ರಮ ನಡೆದಿದೆ ಹಾಗೂ ಕೆರೆ ಒತ್ತುವರಿಯಾಗಿದೆ ಎಂಬ ಆರೋಪದಡಿ, ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕರು 2014ರಲ್ಲಿ ಮರು ತನಿಖೆ ಕೋರಿ ಜಮೀನು ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದರು.
2014ರ ನೋಟಿಸ್ ಪ್ರಶ್ನಿಸಿ ಭೂ ಮಾಲೀಕರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠವು, ನಾಲ್ಕು ದಶಕಗಳ ನಂತರ ಮರುಪರಿಶೀಲನೆ ನಡೆಸಲು ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟು ನೋಟಿಸ್ ರದ್ದುಗೊಳಿಸಿತ್ತು.
2020ರ ಜನವರಿಯಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ಬದಿಗೊತ್ತಿ, ಅಧಿಕಾರಿಗಳು ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂಬ ಕಾರಣ ನೀಡಿ ತನಿಖೆಗೆ ಅನುಮತಿ ನೀಡಿತು. ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿಯನ್ನೂ 2023ರ ಜೂನ್‌ನಲ್ಲಿ ವಜಾಗೊಳಿಸಲಾಗಿತ್ತು. ವಿಭಾಗೀಯ ಪೀಠದ ಆದೇಶವನ್ನು ಸವಾಲು ಮಾಡಿ ಭೂ ಮಾಲೀಕರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.
ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 56ರ ಅಡಿಯಲ್ಲಿ ಯಾವುದೇ ದಾಖಲೆ ಅಥವಾ ಆದೇಶವನ್ನು ಮರುಪರಿಶೀಲಿಸುವ ಅಧಿಕಾರವನ್ನು ಚಲಾಯಿಸಲು ಮೂರು ವರ್ಷಗಳ ಶಾಸನಬದ್ಧ ಕಾಲಮಿತಿ (Statutory Limitation) ಇದೆ.
ದಶಕಗಳ ಕಾಲ ಸುಮ್ಮನಿದ್ದು, ಶಾಸನಬದ್ಧ ಅವಧಿ ಮುಗಿದ ನಂತರ ರಿವಿಷನ್ ಅಧಿಕಾರ ಬಳಸುವುದು ಕಾನೂನುಬಾಹಿರ. ಒತ್ತುವರಿ ನೆಪದಲ್ಲಿ ನಿಯಮ ಉಲ್ಲಂಘನೆ ಸಲ್ಲದು, ಕೆರೆ ಒತ್ತುವರಿಯಾಗಿದೆ ಎಂಬ ದೂರು ಅಥವಾ ತನಿಖೆಯ ಅಗತ್ಯವಿದ್ದರೂ ಸಹ, ಕಾನೂನಿನಲ್ಲಿ ನಿಗದಿಪಡಿಸಲಾದ ಕಾಲಮಿತಿಯ ನಿಯಮಗಳನ್ನು ಕಡೆಗಣಿಸಲು ಸಾಧ್ಯವಿಲ್ಲ.
ಈ ತೀರ್ಪು ಕಂದಾಯ ಇಲಾಖೆಯ ಅಧಿಕಾರಿಗಳ ಅನಿಯಂತ್ರಿತ ಮರುಪರಿಶೀಲನಾ ಅಧಿಕಾರಕ್ಕೆ ಕಡಿವಾಣ ಹಾಕಿದ್ದು, ದಶಕಗಳಿಂದ ಭೂಮಿ ಹಾಗೂ ಆಸ್ತಿ ಹೊಂದಿರುವ ಮಾಲೀಕರಿಗೆ ಪ್ರಮುಖ ಕಾನೂನು ಭದ್ರತೆ ಒದಗಿಸಿದೆ.