ಒಂದು ತಿಂಗಳಲ್ಲಿ 1 ಕೋಟಿ ಲೀಟರ್‌ ಕಾವೇರಿ ನೀರು ಮಾರಾಟ: ಹರಿದು ಬಂದ ಆದಾಯವೆಷ್ಟು?

Kannadaprabha News   | Kannada Prabha
Published : Jun 13, 2025, 06:00 AM IST
Sanchari Kaveri Tanker

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕುವ ಉದ್ದೇಶದಿಂದ ಆರಂಭಿಸಿದ ‘ಸಂಚಾರಿ ಕಾವೇರಿ’ ಟ್ಯಾಂಕರ್‌ ನೀರು ಯೋಜನೆಯೂ ಉದ್ಘಾಟನೆಯಾದ ಮೊದಲ ತಿಂಗಳಿನಲ್ಲಿ ಬರೋಬ್ಬರಿ 1.03 ಕೋಟಿ ಲೀಟರ್‌ ಕಾವೇರಿ ನೀರು ಮಾರಾಟವಾಗಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಜೂ.13): ರಾಜಧಾನಿ ಬೆಂಗಳೂರಿನಲ್ಲಿ ಟ್ಯಾಂಕರ್‌ ಮಾಫಿಯಾಗೆ ಕಡಿವಾಣ ಹಾಕುವ ಉದ್ದೇಶದಿಂದ ಆರಂಭಿಸಿದ ‘ಸಂಚಾರಿ ಕಾವೇರಿ’ ಟ್ಯಾಂಕರ್‌ ನೀರು ಯೋಜನೆಯೂ ಉದ್ಘಾಟನೆಯಾದ ಮೊದಲ ತಿಂಗಳಿನಲ್ಲಿ ಬರೋಬ್ಬರಿ 1.03 ಕೋಟಿ ಲೀಟರ್‌ ಕಾವೇರಿ ನೀರು ಮಾರಾಟವಾಗಿದೆ. ಬೇಸಿಗೆ ಆರಂಭಗೊಳ್ಳುತ್ತಿದಂತೆ ನಗರದಲ್ಲಿ ಎದುರಾಗುವ ನೀರಿನ ಕೊರತೆಯನ್ನೇ ಬಂಡಾವಳ ಮಾಡಿಕೊಳ್ಳುವ ನೀರಿನ ಟ್ಯಾಂಕರ್‌ ಮಾಲೀಕರು ಬೇಕಾ ಬಿಟ್ಟಿ ದರ ನಿಗದಿ ಪಡಿಸಿ ಸಾರ್ವಜನಿಕರನ್ನು ಸೂಲಿಗೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿಯಿಂದ ಸಂಚಾರಿ ಕಾವೇರಿ ಎಂಬ ಯೋಜನೆಗೆ ಕಳೆದ ಮೇ 9 ರಂದು ಚಾಲನೆ ನೀಡಲಾಗಿತ್ತು.

ಕಳೆದ ಮೇ ತಿಂಗಳಿನಲ್ಲಿ ನಗರದಲ್ಲಿ ಉತ್ತಮ ಮಳೆಯಾಗಿ ನೀರಿನ ಕೊರತೆ ಅಷ್ಟಾಗಿ ಎದುರಾಗದಿದ್ದರೂ ಮೇ 9 ರಿಂದ ಜೂನ್‌ 11ರ ಅವಧಿಯಲ್ಲಿ 1,03,86,000 ಲೀಟರ್‌ ಕಾವೇರಿ ನೀರನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗಿದೆ. ಒಟ್ಟು 1,532 ಟ್ಯಾಂಕರ್‌ ಮೂಲಕ ನೀರನ್ನು ಗ್ರಾಹಕರ ಮನೆ ಬಾಗಿಲಿಗೆ ಪೂರೈಸಲಾಗಿದೆ. ಇದರಿಂದ ಬೆಂಗಳೂರು ಜಲಮಂಡಳಿಗೆ ₹13,89,700 ಆದಾಯ ಹರಿದು ಬಂದಿದೆ.

1,370 ರು.ಗೆ 12 ಸಾವಿರ ಲೀಟರ್‌ ನೀರು: ಸಂಚಾರಿ ಕಾವೇರಿ ಯೋಜನೆಯಡಿ ಟ್ಯಾಂಕರ್‌ ನೀರು ಪೂರೈಕೆಗೆ ಜಲಮಂಡಳಿಯು ಐಎಎಸ್‌ ಪ್ರಮಾಣಿತ 250ಕ್ಕೂ ಅಧಿಕ ಖಾಸಗಿ ಟ್ಯಾಂಕರ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. 6 ಸಾವಿರ ಲೀಟರ್‌ ಕಾವೇರಿ ನೀರಿಗೆ 740 ರು. ಹಾಗೂ 12 ಸಾವಿರ ಲೀಟರ್ ನೀರಿಗೆ 1,370 ರು. ದರ ನಿಗದಿ ಪಡಿಸಲಾಗಿದೆ. ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ಟ್ಯಾಂಕರ್‌ ನೀರು ಬುಕಿಂಗ್‌ ಮಾಡುವುದಕ್ಕೂ ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ರಚಿಸಲಾಗಿದೆ. ಗ್ರಾಹಕರು ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಿದ ತಕ್ಷಣ ಟ್ಯಾಂಕರ್‌ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಟ್ಯಾಂಕರ್‌ಗೆ ನೀರು ತುಂಬಿಸಿಕೊಳ್ಳುವುದಕ್ಕೆ ನಗರದ 55 ಸ್ಥಳದಲ್ಲಿ ಕಾವೇರಿ ಕನೆಕ್ಟ್‌ ಸೆಂಟರ್‌ ಸಹ ಆರಂಭಿಸಲಾಗಿದೆ.

ಐಟಿ ಬಿಟಿ ಕಾರಿಡಾರ್‌ನಲ್ಲಿ ಭಾರೀ ಬೇಡಿಕೆ: ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿನ ಪೂರ್ವ ಭಾಗದ ಕೆ.ಆರ್‌.ಪುರ, ಮಹದೇವಪುರ ವ್ಯಾಪ್ತಿಯಲ್ಲಿ ಸಂಚಾರಿ ಕಾವೇರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಮಾರಾಟವಾಗಿರುವ ನೀರಿನ ಪೈಕಿ ಶೇ.50 ರಷ್ಟು ನೀರು ಈ ಐಟಿ ಬಿಟಿ ಕಾರಿಡಾರ್‌ ಪಾಲಾಗಿದೆ. ಉಳಿದಂತೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ 3.48 ಲಕ್ಷ ಲೀಟರ್‌, ಉತ್ತರದಲ್ಲಿ 10 ಲಕ್ಷ ಲೀಟರ್‌ ಹಾಗೂ ಪಶ್ಚಿಮದಲ್ಲಿ 5 ಲಕ್ಷ ಲೀಟರ್‌ ಮಾರಾಟವಾಗಿರುವುದು ಕಂಡು ಬಂದಿದೆ.

ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಳ: ದಿನದಿಂದ ದಿನಕ್ಕೆ ಬೇಡಿಕೆ ಪ್ರಮಾಣ ಅಧಿಕವಾಗಿದೆ. ಜತೆಗೆ, ಎಷ್ಟೇ ಹಣಕೊಟ್ಟರೂ ಶುದ್ಧ ನೀರು ದೊರೆಯುತ್ತಿರಲಿಲ್ಲ. ಸಂಚಾರಿ ಕಾವೇರಿ ಮೂಲಕ ಗುಣಮಟ್ಟದ ನೀರು ದೊರೆಯುತ್ತಿದೆ ಎಂದು ಗ್ರಾಹಕರು ಹೇಳುತ್ತಿದ್ದಾರೆ. ಇನ್ನೂ ಸಾಕಷ್ಟು ಅಪಾರ್ಟ್‌ಮೆಂಟ್‌ ಸೇರಿದಂತೆ ಮೊದಲಾದವರು ಈಗಾಗಲೇ ಖಾಸಗಿ ಟ್ಯಾಂಕರ್‌ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದ ಅವಧಿ ಬಾಕಿ ಇದೆ. ಆ ಅವಧಿ ಮುಕ್ತಾಯಗೊಂಡಂತೆ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಲಮಂಡಳಿಯ ಅಧ್ಯಕ್ಷ ರಾಮಪ್ರಸಾತ್ ಮನೋಹರ್‌ ಮಾಹಿತಿ ನೀಡಿದ್ದಾರೆ.

ತಾಂತ್ರಿಕ ಸಮಸ್ಯೆ, ಮಾಹಿತಿ ಕೊರತೆ: ಸಂಚಾರಿ ಕಾವೇರಿ ನೀರು ಬುಕ್ಕಿಂಗ್‌ ಮಾಡುವ ಮೊಬೈಲ್‌ ಆ್ಯಪ್‌ ಹಾಗೂ ವೆಬ್‌ಸೈಟ್‌ ನಲ್ಲಿ ಹಲವು ತಾಂತ್ರಿಕ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ನಿಗದಿತ ಸಮಯಕ್ಕೆ ಗ್ರಾಹಕರಿಗೆ ಟ್ಯಾಂಕರ್ ನೀರು ಪೂರೈಕೆ ಆಗುತ್ತಿಲ್ಲ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಜತೆಗೆ ಜನ ಸಾಮಾನ್ಯರಿಗೆ ಟ್ಯಾಂಕರ್‌ ಮೂಲಕ ಕಾವೇರಿ ನೀರನ್ನು ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಬಹುತೇಕರಿಗೆ ಈವರೆಗೂ ಮಾಹಿತಿ ಇಲ್ಲವಾಗಿದೆ. ಹೀಗಾಗಿ, ಇಂದಿಗೂ ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ದುಬಾರಿ ಹಣಕೊಟ್ಟು ನೀರು ಪಡೆಯುವ ಸ್ಥಿತಿ ಇದೆ ಎಂಬ ಆರೋಪಗಳು ಕೇಳಿ ಬಂದಿವೆ.

PREV
Read more Articles on
click me!

Recommended Stories

₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ
ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ವಂಚಕರ ಪತ್ತೆಗೆ ಬೇಟೆ ಶುರು