ಬೆಂಗಳೂರಿನ ಬನಶಂಕರಿಯಲ್ಲಿ 280 ಮೀ. ಉದ್ದ, 6 ಮೀ. ಅಗಲದ ಸ್ಕೈವಾಕ್; ಹೊಸ ಫ್ಲೈಓವರ್

Published : Jul 09, 2026, 12:16 PM IST
Bengaluru Banashankari

ಸಾರಾಂಶ

ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದ ಬಳಿ ಸ್ಕೈವಾಕ್ ಮತ್ತು ಫ್ಲೈಓವರ್ ನಿರ್ಮಾಣದ ಕುರಿತು ಸಭೆ ನಡೆದಿದೆ. ಮೆಟ್ರೋ ಮತ್ತು ಬಸ್ ನಿಲ್ದಾಣವನ್ನು ಸಂಪರ್ಕಿಸುವ ಈ ಯೋಜನೆಯು ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಅಂತಿಮ ನಿರ್ಧಾರಕ್ಕಾಗಿ ವಿಸ್ತೃತ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ.

ಬೆಂಗಳೂರು: ನಗರದ ಬಹುಕಾಲದ ಪ್ರಸ್ತಾಪಿತ ಬನಶಂಕರಿ ಬಸ್ ನಿಲ್ದಾಣ ಬಳಿಯಲ್ಲಿ ಸ್ಕೈವಾಕ್ ಮತ್ತು ಯೋಜಿತ ಫ್ಲೈವರ್ ನಿರ್ಮಾಣದ ಕುರಿತು ಬೆಂಗಳೂರು ದಕ್ಷಿಣ ನಗರ ನಿಗಮದ ಸಭೆಯಲ್ಲಿ ಸುದೀರ್ಘವಾದ ಚರ್ಚೆಗಳು ನಡೆದವು. ಬೆಂಗಳೂರು ದಕ್ಷಿಣ ನಗರ ನಿಗಮ ಆಯುಕ್ತ ಕೆ.ಎನ್. ರಮೇಶ್ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿತ್ತು. ಬೆಂಗಳೂರಿನ ಬನಶಂಕರಿ ಬಸ್ ಮತ್ತು ಮೆಟ್ರೋ ನಿಲ್ದಾಣ ಒಂದೇ ಭಾಗದಲ್ಲಿದ್ದು, ಈ ಸ್ಥಳ ವಾಹನದಟ್ಟಣೆಯಿಂದಿರುತ್ತದೆ. ಬಿಎಂಟಿಸಿ ಬಸ್‌ಗಳು ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತವೆ. ಹಾಗಾಗಿ ಜನರು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ತೆರಳಲು ಹರಸಾಹಸ ಪಡುವಂತಾಗಿದೆ. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಇದೇ ಮಾರ್ಗದಲ್ಲಿಯೇ ಸಂಚರಿಸೋದರಿಂದ ವಾಹನದಟ್ಟಣೆ ಅಧಿಕವಾಗಿರುತ್ತದೆ.

ಈ ಹಿನ್ನೆಲೆ ಮೆಟ್ರೋ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ರಸ್ತೆಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ಬನಶಂಕರಿಯಲ್ಲಿ ಸುಧಾರಿತ ಮತ್ತು ಹಲವು ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಸುಧಾರಿತ ಸ್ಕೈವಾಕ್‌ನ (Integrated Multimodal Hub) ಅಗತ್ಯವಿದೆ. ಈ ಕುರಿತು ಸಭೆಯಲ್ಲಿ ಸಂಚಾರಿ ಪೊಲೀಸರು, ಬಿಎಂಆರ್‌ಸಿಎಲ್, ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B.SMILE), ಸಿವಿಲ್ ಅಫಿಸರ್ಸ್ ಜೊತೆಯಾಗಿ ಚರ್ಚೆ ನಡೆಸಿದ್ದಾರೆ.

ಅಂದಾಜು 55 ಕೋಟಿ ವೆಚ್ಚದ ಯೋಜನೆ

2023ರಲ್ಲಿ ಯೋಜನಾವೆಚ್ಚವನ್ನು 50 ಕೋಟಿಗಳಿಂದ 55 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ಯೋಜನೆಗೆ ಬಿಎಂಆರ್‌ಸಿಎಲ್ 25 ಕೋಟಿ ರೂಪಾಯಿ ನೀಡಲು ಒಪ್ಪಿಕೊಂಡಿತ್ತು. ಸರ್ಕಾರದ ಬದಲಾವಣೆಗಳಿಂದ ಈ ಯೋಜನೆ ವಿಳಂಬವಾಗಿದೆ. ವರದಿಗಳ ಪ್ರಕಾರ, ಬನಶಂಕರಿಯ ಈ ಜಂಕ್ಷನ್‌ನಲ್ಲಿ ಪ್ರತಿದಿನ 50 ಸಾವಿರಕ್ಕೂ ಜನರು ಸಂಚರಿಸುತ್ತಾರೆ. ಹಾಗಾಗಿ ಈ ಭಾಗದಲ್ಲಿ 280 ಮೀಟರ್ ಉದ್ದ ಮತ್ತು 6 ಮೀಟರ್ ಅಗಲದ ಸ್ಕೈವಾಕ್ ಮತ್ತು ರೆಸ್ಟ್ ಪ್ಲೇಸ್ ನಿರ್ಮಾಣದ ಉದ್ದೇಶವನ್ನು ಈ ಯೋಜನೆ ಹೊಂದಿದೆ.

ಪಕ್ಕದಲ್ಲಿಯೇ ಇದೆ ಬನಶಂಕರಿ ದೇವಸ್ಥಾನ

ಇನ್ನು ಇದೇ ಸಭೆಯಲ್ಲಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ, ಪ್ರತ್ಯೇಕ ಬಸ್ ಲೇನ್, ಪಾದಚಾರಿ ಮಾರ್ಗ ನಿರ್ಮಾಣದ ಕುರಿತು ಚರ್ಚೆ ನಡೆಸಲಾಗಿದೆ. ಬಸ್ ಮತ್ತು ಮೆಟ್ರೋ ನಿಲ್ದಾಣದ ಪಕ್ಕದಲ್ಲಿಯೇ ಬನಶಂಕರಿ ದೇವಸ್ಥಾನವಿದ್ದು, ಬೆಳಗ್ಗೆ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಳವಾಗಿರುತ್ತದೆ. ಭವಿಷ್ಯದ ದೃಷ್ಟಿಯಿಂದ ಸ್ಕೈವಾಕ್ ಜೊತೆ ಅಂಡರ್‌ಪಾಸ್ ನಿರ್ಮಾಣದ ಕುರಿತು ಚರ್ಚೆಗಳು ನಡೆದಿವೆ.

ಇದನ್ನೂ ಓದಿ: ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ

ಆಯುಕ್ತ ಕೆ.ಎನ್. ರಮೇಶ್ ಅವರು, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಎರಡು ಯೋಜನೆಗಳಿಗೆ ಅವಕಾಶ ನೀಡಬಹುದೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ವಿವರವಾದ ವರದಿಗಳನ್ನು ಸಲ್ಲಿಕೆ ಮಾಡುವಂತೆ B.SMILEಗೆ ಸೂಚನೆ ನಿಡಿದರು. ಸ್ಕೈವಾಕ್ ಮತ್ತು ಯೋಜಿತ ಫ್ಲೈವರ್ ನಿರ್ಮಾಣದ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಕಾರಣಾಂತರಗಳಿಂದ ಮುಂದೂಡಿಕೆಯಾಗುತ್ತಿದೆ. ಅಂತಿಮ ವರದಿ ಬಳಿಕ ಎರಡು ಕಾಮಗಾರಿಗಳು ಖರ್ಚು ವೆಚ್ಚ ಮತ್ತು ಸಾಧಕ ಬಾಧಕಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.

ಇದನ್ನೂ ಓದಿ: ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ

PREV
Read more Articles on
click me!

Recommended Stories

ಹಾರೋಹಳ್ಳಿಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ? ಹೊಸ ಸ್ಥಳದತ್ತ ಸರ್ಕಾರದ ಚಿಂತನೆ
ಬೆಂಗಳೂರು ನಿವಾಸಿಗಳೇ ಗಮನಿಸಿ, ಬಿಡಾಡಿ ವಾಹನಗಳ ತೆರವಿಗೆ ಜಿಬಿಎ ಮಹಾ ಕಾರ್ಯಾಚರಣೆ, ಈ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ