ಬೆಂಗಳೂರು ಕ್ಲಬ್‌ನಲ್ಲಿ 13 ರೂಪಾಯಿ ಬಾರ್‌ ಬಿಲ್‌ ಉಳಿಸಿಕೊಂಡಿರುವ ಇಂಗ್ಲೆಂಡ್‌ ಮಾಜಿ ಪ್ರಧಾನಿ!

Published : Jul 08, 2026, 04:05 PM IST
Bengaluru Club History

ಸಾರಾಂಶ

158 ವರ್ಷಗಳ ಇತಿಹಾಸವಿರುವ ಬೆಂಗಳೂರು ಕ್ಲಬ್, ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಇಲ್ಲಿ 13 ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದ ರೋಚಕ ಕಥೆಗೆ ಹೆಸರುವಾಸಿಯಾಗಿದೆ. ಇಂದು ಕೋಟ್ಯಂತರ ಆದಾಯ ಗಳಿಸುತ್ತಿರುವ ಈ ಕ್ಲಬ್ -ಪ್ರೊಫೈಲ್ ವ್ಯಕ್ತಿಗಳ ನೆಚ್ಚಿನ ತಾಣವಾಗಿದೆ.

ಬೆಂಗಳೂರು (ಜು.8): ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ರೆಸಿಡೆನ್ಸಿ ರಸ್ತೆಯ 15 ಎಕರೆ ಪ್ರದೇಶದಲ್ಲಿ ಹಚ್ಚಹಸಿರಿನ ನಡುವೆ ರಾಜಗಾಂಭೀರ್ಯದಿಂದ ಕಂಗೊಳಿಸುವ ‘ಬೆಂಗಳೂರು ಕ್ಲಬ್’ಗೆ ಬರೋಬ್ಬರಿ 158 ವರ್ಷಗಳ ಭವ್ಯ ಇತಿಹಾಸವಿದೆ. ಹೈ-ಪ್ರೊಫೈಲ್ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ನೆಚ್ಚಿನ ತಾಣವಾಗಿರುವ ಈ ಕ್ಲಬ್‌ನ ಹಿನ್ನೆಲೆಯನ್ನು ಕೆದಕಿದರೆ, ಅಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಕೇವಲ 13 ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದ ರೋಚಕ ಕಥೆಯಿಂದ ಹಿಡಿದು, ಇತ್ತೀಚಿನ ಭೂ ವಿವಾದಗಳವರೆಗಿನ ಹಲವು ಆಸಕ್ತಿದಾಯಕ ಸಂಗತಿಗಳು ಹೊರಬರುತ್ತವೆ.

ಬೆಂಗಳೂರು ಕ್ಲಬ್‌ನ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಚರ್ಚೆಯಾಗುವ ಮತ್ತು ಹೈಲೈಟ್ ಆಗುವ ವಿಚಾರ ಎಂದರೆ ಅದು ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ (Winston Churchill) ಅವರದ್ದು. 1868 ರಲ್ಲಿ ಸ್ಥಾಪನೆಯಾಗಿದ್ದ ಈ ಕ್ಲಬ್ ಮೊದಲು 'ಬೆಂಗಳೂರು ಯುನೈಟೆಡ್ ಸರ್ವೀಸಸ್ ಕ್ಲಬ್' (Bangalore United Services Club) ಎಂಬ ಹೆಸರಿನಲ್ಲಿ ಪ್ರಚಾರ ಕಂಡಿತ್ತು. 1890ರ ದಶಕದ ಕೊನೆಯಲ್ಲಿ ವಿನ್‌ಸ್ಟನ್ ಚರ್ಚಿಲ್ ಅವರು ಬೆಂಗಳೂರಿನಲ್ಲಿ ಮಿಲಿಟರಿ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದಾಗ ಈ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದರು.

ವಿನ್‌ಸ್ಟನ್ ಚರ್ಚಿಲ್ ಅವರು ಅಕ್ಟೋಬರ್ 1896 ರಿಂದ 1899 ರವರೆಗೆ ಬೆಂಗಳೂರಿನಲ್ಲಿ '4ನೇ ಕ್ವೀನ್ಸ್ ಓನ್ ಹಸ್ಸಾರ್ಸ್' ರೆಜಿಮೆಂಟ್‌ನಲ್ಲಿ ಯುವ ಕ್ಯಾವಲ್ರಿ (ಕುದುರೆ ಸವಾರಿ ಪಡೆ) ಸಬಾಲ್ಟರ್ನ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಆದರೆ, ಬೆಂಗಳೂರು ಮೊದಲಿನಿಂದಲೂ ಶಾಂತ ಸ್ವಭಾವದ ಸ್ಥಳ. ಮಿಲಿಟರಿ ಕಾರ್ಯಾಚರಣೆ ಇಲ್ಲದೆ ಬೆಂಗಳೂರಿನಲ್ಲಿ ಬೋರ್‌ ಆಗಿದ್ದ ಅವರು ಆ ಸಮಯದಲ್ಲಿ ಇತಿಹಾಸ ಮತ್ತು ತತ್ವಶಾಸ್ತ್ರವನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದರು. ಅದರೊಂದಿಗೆ ಬೆಂಗಳೂರಿನಲ್ಲಿದ್ದೇ ಪತ್ರಿಕಾ ವರದಿಗಳನ್ನು ಬರೆಯುತ್ತಿದ್ದರು. ಇದೇ ಸಮಯದಲ್ಲಿ ಬೆಂಗಳೂರು ಕ್ಲಬ್‌ನಲ್ಲಿ ಸದಸ್ಯತ್ವ ಪಡೆದಿದ್ದ ಅವರು ಒಮ್ಮೆ 13 ರೂಪಾಯಿ ಬಾರ್‌ ಬಿಲ್‌ ಮಾಡಿದ್ದರು.

ಆದರೆ, 1899 ರಲ್ಲಿ ಚರ್ಚಿಲ್ ಅವರು ಬೆಂಗಳೂರು ಬಿಟ್ಟು ಹೋಗುವಾಗ ಕ್ಲಬ್‌ಗೆ ಪಾವತಿಸಬೇಕಿದ್ದ 13 ರೂಪಾಯಿ ಬಿಲ್ ಅನ್ನು ಪಾವತಿಸಿರಲಿಲ್ಲ. ಕೊನೆಗೆ ಕ್ಲಬ್ ಆಡಳಿತ ಮಂಡಳಿಯು ಈ ಮೊತ್ತವನ್ನು ವಸೂಲಿ ಮಾಡಲು ಸಾಧ್ಯವಿಲ್ಲದ "ವಸೂಲಾಗದ ಹಣ" (Irrecoverable Sum) ಎಂದು ಪರಿಗಣಿಸಿ, ತನ್ನ ಅಕೌಂಟ್‌ ಬುಕ್‌ನಿಂದ ಈ ಅಂಶವನ್ನು ರೈಟ್‌ಆಫ್‌ ಮಾಡಿತ್ತು.ಈ ಹಳೆಯ ಬಿಲ್‌ನ ದಾಖಲೆ ಇಂದಿಗೂ ಕ್ಲಬ್ ಇತಿಹಾಸದ ರಸವತ್ತಾದ ಪುಟಗಳಲ್ಲಿ ಒಂದಾಗಿದೆ.

ಕ್ಲಬ್‌ನ 1899ರ ಜೂನ್‌ 1 ರಂದು ದಾಖಲಾಗಿರುವ ಅಕೌಂಟ್‌ ಬುಕ್‌ ಪ್ರಕಾರ, 'Lt WLS Churchill' ಸೇರಿದಂತೆ 17 ಮಂದಿ ಬಾರ್‌ ಬಿಲ್‌ನ ಡಿಫಾಲ್ಟರ್‌ ಆಗಿದ್ದಾರೆ ಎಂದು ತಿಳಿಸಲಾಗಿದೆ. 17 ಮಂದಿಯ ಡಿಫಾಲ್ಟರ್‌ಗಳ ಪಟ್ಟಿಯಲ್ಲಿ ಚರ್ಚಿಲ್‌ 12ನೇಯವರಾಗಿದ್ದರು. ಅವರ ಸಾವಿನ ಬಳಿಕ ಬಾಕಿ ಬಿಲ್‌ ಬಗ್ಗೆ ಸಾರ್ವಜನಿಕವಾಗಿ ಗೊತ್ತಾಗಿತ್ತು. ಆ ನಂತರ ಸಾಕಷ್ಟು ಬ್ರಿಟನ್‌ ಪ್ರಜೆಗಳು ಬಂದು ಈ ಬಾಕಿ ಬಿಲ್‌ ಪಾವತಿ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಇತಿಹಾಸದಲ್ಲಿ ದಾಖಲಾಗಿರುವ ವಿಚಾರ. ಇತಿಹಾಸದಲ್ಲೇ ಉಳಿದು ಬಿಡಲಿ ಎಂದು ಯಾರಿಂದಲೂ ಈ ಬಾಕಿ ಕಟ್ಟಿಸಿಕೊಂಡಿಲ್ಲ ಎಂದು ಕ್ಲಬ್‌ನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್‌ ಮಾಜಿ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ಬೆಂಗಳೂರು ಕ್ಲಬ್‌ನಲ್ಲಿ ಬಾಕಿ ಉಳಿಸಿಕೊಂಡಿರುವ 13 ರೂಪಾಯಿ ಬಾರ್‌ ಬಿಲ್‌

ಕೋಟಿ ಕೋಟಿ ಆದಾಯ, ಕಠಿಣ ಸದಸ್ಯತ್ವದ ನಿಯಮಗಳು!

ವ್ಯಾಪಾರ ಮತ್ತು ಕಾರ್ಪೊರೇಟ್ ವಲಯದ ಮಾಹಿತಿ ನೀಡುವ 'ಜೂಮ್‌ಇನ್ಫೋ' (Zoominfo) ಪ್ರಕಾರ, ಬೆಂಗಳೂರು ಕ್ಲಬ್‌ನ ವಾರ್ಷಿಕ ಆದಾಯ ಬರೋಬ್ಬರಿ ₹48 ಕೋಟಿ ದಾಟಿದೆ. ಇಲ್ಲಿ ಸದಸ್ಯತ್ವ ಪಡೆಯುವುದು ಅಷ್ಟು ಸುಲಭವಲ್ಲ. ಇಲ್ಲಿ ಒಟ್ಟು ನಾಲ್ಕು ರೀತಿಯ ಸದಸ್ಯತ್ವವಿದೆ. ಕ್ಲಬ್‌ನಲ್ಲಿ ಪರ್ಮನೆಂಟ್ (ಖಾಯಂ), ಟೆಂಪರರಿ (ತಾತ್ಕಾಲಿಕ), ಸರ್ವೀಸ್ ಮತ್ತು ಕಾರ್ಪೊರೇಟ್ ಸದಸ್ಯತ್ವಗಳನ್ನು ನೀಡಲಾಗುತ್ತದೆ.

ಖಾಯಂ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಅಲ್ಲದೆ, ಕ್ಲಬ್‌ನ ಒಬ್ಬ ಖಾಯಂ ಸದಸ್ಯ ಅವರ ಹೆಸರನ್ನು ನಾಮನಿರ್ದೇಶನ ಮಾಡಬೇಕು ಮತ್ತು ಇತರ ಐದು ಜನ ಖಾಯಂ ಸದಸ್ಯರು ಅದನ್ನು ಬೆಂಬಲಿಸಬೇಕು. ನಂತರ ಕ್ಲಬ್ ಕಮಿಟಿಗಳು ಅರ್ಜಿಯನ್ನು ತೀವ್ರವಾಗಿ ಪರಿಶೀಲಿಸುತ್ತವೆ. ಸದ್ಯ ಕೆಲವು ನಿರ್ದಿಷ್ಟ ವಿಭಾಗಗಳನ್ನು ಹೊರತುಪಡಿಸಿ ಖಾಯಂ ಸದಸ್ಯತ್ವದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಫೈವ್ ಸ್ಟಾರ್ ಸೌಲಭ್ಯಗಳ ಸ್ವರ್ಗ!

ಕೇವಲ ಇತಿಹಾಸ ಮಾತ್ರವಲ್ಲದೆ ಕ್ರೀಡೆ ಮತ್ತು ಐಷಾರಾಮಿ ಸೌಲಭ್ಯಗಳಿಗೂ ಈ ಕ್ಲಬ್ ಹೆಸರುವಾಸಿ. ಕ್ಲಬ್ ಒಳಗೆ 6 ಟೆನ್ನಿಸ್ ಕೋರ್ಟ್‌ಗಳು, 3 ಸ್ಕ್ವಾಷ್ ಕೋರ್ಟ್‌ಗಳು, 2 ಬ್ಯಾಡ್ಮಿಂಟನ್ ಕೋರ್ಟ್‌ಗಳು ಮತ್ತು ಟೇಬಲ್ ಟೆನ್ನಿಸ್ ವ್ಯವಸ್ಥೆ ಇದೆ. ಇದರೊಂದಿಗೆ 5-ಎ ಸೈಡ್ ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಅಂಕಣಗಳು, ಸುಸಜ್ಜಿತ ಈಜುಕೊಳ, ಮಕ್ಕಳ ಆಟದ ಮೈದಾನ, ಹೆಲ್ತ್ ಕ್ಲಬ್, ಸ್ಟೀಮ್-ಸೌನಾ ರೂಮ್, ಮಸಾಜ್ ಸೆಂಟರ್, ಹೈ-ಕ್ಲಾಸ್ ಪೋಲೋ ಬಾರ್, ಸ್ಪಾ ಮತ್ತು ಸಲೂನ್‌ಗಳಂತಹ ಪಂಚತಾರಾ ಸೌಲಭ್ಯಗಳು ಇಲ್ಲಿವೆ.

 

PREV
Read more Articles on
click me!

Recommended Stories

ಕೈ ತುಂಬಾ ಸ್ಯಾಲರಿ ಉದ್ಯೋಗ, ಪ್ರಮೋಶನ್ ಬೇಕಾ? ದರ್ಶನ ಮಾಡಿದವರ ಕೈಬಿಟ್ಟಿಲ್ಲ ಬೆಂಗಳೂರಿನ ಟೆಕ್ಕಿ ಗಣೇಶ ಮಂದಿರ
ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ: ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!