200 ಯೂನಿಟ್‌ ಫ್ರೀ ವಿದ್ಯುತ್‌ಗೆ ಬೇಕು 9000 ಕೋಟಿ ಸಾಲ..!

By Kannadaprabha NewsFirst Published Jan 16, 2023, 11:15 AM IST
Highlights

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಹಕರಿಗೆ ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿರುವ ಭರವಸೆ ಈಡೇರಿಸಲು ವಾರ್ಷಿಕ 9000 ಕೋಟಿ ರು. ಸಾಲ ಮಾಡಬೇಕಾಗುತ್ತದೆ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರು:  ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಹಕರಿಗೆ ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿರುವ ಭರವಸೆ ಈಡೇರಿಸಲು ವಾರ್ಷಿಕ 9000 ಕೋಟಿ ರು. ಸಾಲ ಮಾಡಬೇಕಾಗುತ್ತದೆ. ಸಿದ್ದರಾಮಯ್ಯನವರ ಆಡಳಿತ ಎಂದರೆ ಭರವಸೆ ಉಚಿತ, ಸಾಲ ಖಚಿತ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಎಲ್ಲ ಆಯಾಮ ಪರಿಶೀಲಿಸಿದಾಗ ನಿಮ್ಮ ಉಚಿತ ವಿದ್ಯುತ್‌ ಭರವಸೆ ಈಡೇರಿಸುವುದಕ್ಕೆ ವಾರ್ಷಿಕ 9000 ಕೋಟಿ ರು. ಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಮತ್ತೆ 9000 ಕೋಟಿ ರು. ಸಾಲದ ಹೂಡಿಕೆ ಮಾಡುವ ಯೋಚನೆ ನಿಮ್ಮದಾಗಿದೆ. ಭರವಸೆ ಉಚಿತ, ಸಾಲ ಖಚಿತ ಎಂಬ ಅರ್ಥನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ.

200 ಯುನಿಟ್‌ ಫ್ರೀ ವಿದ್ಯುತ್‌ ಕೊಡಲು ನಾವು ಬದ್ಧ: ಡಿ.ಕೆ.ಶಿವಕುಮಾರ್‌

‘ಎಸ್ಕಾಂಗಳ ಸಾಲದ ಹೊರೆಯನ್ನು ತಮ್ಮ ಸರ್ಕಾರದ ಅವಧಿಯಲ್ಲಿ ಇಳಿಸಿದ್ದಾಗಿ’ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವರು, ಕುತ್ತಿಗೆವರೆಗೆ ಮುಳುಗಿದ್ದ ಎಸ್ಕಾಂಗಳನ್ನು ಸಾಲದ ಹೊರೆಯಿಂದ ಮೇಲೆತ್ತಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಂಡಿದ್ದೀರಿ ಸಿದ್ದರಾಮಯ್ಯನವರೆ. ನೀವು ಎಸ್ಕಾಂಗಳ ಮೇಲೆ ಹೊರಿಸಿ ಹೋದ ಸಾಲದ ಗಂಟನ್ನು ಇಳಿಸಿದ್ದು ನಾವು ಎಂಬುದನ್ನು ಮರೆಯಬೇಡಿ. ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್‌ ಮೇಲಿನ 10,203 ಕೋಟಿ ರು. ಸಾಲವೂ ಸೇರಿದಂತೆ 2013ರಿಂದ 2018ರ ಅವಧಿಯಲ್ಲಿ 33,414.20 ಕೋಟಿ ರು. ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದಿರಿ. ನೀವೇ ಸ್ಟೇರಿಂಗ್‌ ಹಿಡಿದು ಸಮನ್ವಯ ಸಾಧಿಸಿದ ಮೈತ್ರಿ ಸರ್ಕಾರದ ಕಾಲದಲ್ಲಿ 27,178 ಕೋಟಿ ರು. ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು ಎಂದು ಸಿದ್ದರಾಮಯ್ಯ ಕಾಲದಲ್ಲಿ ಇಂಧನ ಇಲಾಖೆ ಮೇಲೆ ಬಿದ್ದ ಸಾಲದ ಹೊರೆಯನ್ನು ಸುನಿಲ್‌ ಕುಮಾರ್‌ ನೆನಪಿಸಿದ್ದಾರೆ.

ಉಚಿತ ವಿದ್ಯುತ್‌ ನೀಡಿಕೆ ಸಾಧ್ಯ: ಜನಪರ ಕೆಲಸ ಬಿಜೆಪಿಗೆ ಅಸಾಧ್ಯವಿರಬಹುದು, ಕಾಂಗ್ರೆಸ್ಸಿಗಲ್ಲ

‘ನುಡಿದಂತೆ ನಡೆಯುವವರು ನಾವು ಎಂದು ಅತಿಯಾಗಿ ಬೆನ್ನುತಟ್ಟಿಕೊಳ್ಳಬೇಡಿ. ನಿಮ್ಮ ನಡೆ-ನುಡಿಯೊಳಗಿನ ಕಾಪಟ್ಯ ಎಲ್ಲರಿಗೂ ಗೊತ್ತು. ಇದೇ ನನ್ನ ಕೊನೆಯ ಚುನಾವಣೆ ಎಂದು ಎಷ್ಟುಬಾರಿ ನುಡಿದಿರಿ, ಎಷ್ಟುಬಾರಿ ತಪ್ಪಿದಿರಿ? ರಾಜಕೀಯವಾಗಿ ಮರು ಜನ್ಮ ನೀಡಿದ ಬಾದಾಮಿಯನ್ನು ತ್ಯಜಿಸಿ ಕೋಲಾರಕ್ಕೆ ವಲಸೆ ಹೊರಟಿದ್ದೀರಿ. ಇದು ನುಡಿದಂತೆ ನಡೆಯುವ ಪರಿಯಾ?’, ‘ನಿಮ್ಮ ಮಾತು, ಕೃತಿ ಒಂದು ರೀತಿಯಲ್ಲಿ ಹಸ್ತಿ ದಂತ ಇದ್ದಂತೆ. ಆನೆಗೆ ಇರುವುದು ಎರಡೇ ದಂತ ಎಂದು ಭಾವಿಸುವುದು ಎಷ್ಟುಮೂರ್ಖತನವೋ, ಸಿದ್ದರಾಮಯ್ಯನವರ ನುಡಿಯಂತೆ ನಡೆ ಎಂಬುದು ಅಷ್ಟೇ ಅಪಾಯಕಾರಿ. ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಿದ್ದ ವಿದ್ಯುತ್‌ ಸಬ್ಸಿಡಿಯನ್ನೇ ಬಾಕಿ ಇಟ್ಟು ಹೋದ ಘನ ಸರ್ಕಾರ ತಮ್ಮದ್ದಾಗಿತ್ತು ಎಂಬುದನ್ನು ಮರೆಯದಿರಿ’ ಎಂದು ಸಚಿವರು ಕುಟುಕಿದ್ದಾರೆ.

click me!