ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸ್ತ್ರೀ ಶಕ್ತಿ ಪ್ರದರ್ಶನ: ಪ್ರಿಯಾಂಕಾ ಆಗಮನ

By Kannadaprabha NewsFirst Published Jan 16, 2023, 9:40 AM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್‌,  ಇಂದು ತನ್ನ ಭರವಸೆ ನಂ.2 ಘೋಷಣೆಗೆ ಸಜ್ಜಾಗಿದೆ.

ಬೆಂಗಳೂರು:  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಮಾಸಿಕ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್‌,  ಇಂದು ತನ್ನ ಭರವಸೆ ನಂ.2 ಘೋಷಣೆಗೆ ಸಜ್ಜಾಗಿದೆ. ಜೊತೆಗೆ ಇಂಥದ್ದೊಂದು ಮಹತ್ವದ ಘೋಷಣೆಯನ್ನು 'ನಾ ನಾಯಕಿ' ಸಮಾವೇಶದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಂದಲೇ ಮಾಡಿಸಲು ಪಕ್ಷದ ನಾಯಕರು ಸಜ್ಜಾಗಿದ್ದಾರೆ.

ಕಾಂಗ್ರೆಸ್‌ನ ಭರವಸೆ ನಂ.2 ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ನಿರುದ್ಯೋಗಿ (unemployed) ಯುವತಿಯರಿಗೆ ಮಾಸಿಕ 2 ಸಾವಿರ ರು. ಭತ್ಯೆ ನೀಡುವ ಭರವಸೆಯನ್ನು ಒಳಗೊಂಡಿರಲಿದ್ದು, ಇದನ್ನು ಮಹಿಳಾ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದರ ಹೊರತಾಗಿ ಪಕ್ಷವು ಮುಂದಿನ ವಿಧಾನಸಭೆ ಚುನಾವಣೆಗೆ ಮಹಿಳೆಯರಿಗೆ ನೀಡುವ ಭರವಸೆಗಳ ಕುರಿತ ಪ್ರತ್ಯೇಕ ಪ್ರಣಾಳಿಕೆಯನ್ನೂ ಪ್ರಿಯಾಂಕಾ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಸರ್ಕಾರಕ್ಕೆ ಟಕ್ಕರ್‌:

ಫೆ.17 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ, ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಮನೆ ನಿರ್ವಹಣೆ ನೋಡಿಕೊಳ್ಳಲು ಸಾಧ್ಯವಾಗುವಂತೆ ಒಂದು ಸಾವಿರ ರೂ.ಗಳಿಂದ 2 ಸಾವಿರ ರು.ಗಳವರೆಗೆ ವೆಚ್ಚ ಭರಿಸುವಂತಹ 'ಸ್ತ್ರೀ ಸಾಮರ್ಥ್ಯ' ಯೋಜನೆ ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿಕೆ ನೀಡಿದ್ದರು.  ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಘೋಷಿಸುವ ಮೊದಲೇ ರಾಜ್ಯ ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯ ಮುಖ್ಯ ಅಂಶವಾಗಿ ಸೋಮವಾರ ನಿರುದ್ಯೋಗಿ ಯುವತಿಯರಿಗೆ ಮಹತ್ವದ ಯೋಜನೆ ಘೋಷಿಸಲು ಸಿದ್ಧತೆ ನಡೆಸಿರುವುದಾಗಿ ತಿಳಿದು ಬಂದಿದೆ.

ಮೊದಲ ಭೇಟಿ:

ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು,  ಮಧ್ಯಾಹ್ನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ‘ನಾ ನಾಯಕಿ’ ಮಹಿಳಾ ಕಾಂಗ್ರೆಸ್‌ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ.  ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಬರುವ ನಿರೀಕ್ಷೆ ಇತ್ತಾದರೂ ಬಂದಿರಲಿಲ್ಲ. 2019ರ ಜನವರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದ ಮಹಿಳಾ ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ.

ವೇದಿಕೆ ಸ್ತ್ರೀಯರಿಗೆ ಸೀಮಿತ:

ಸೋಮವಾರ ಮಧ್ಯಾಹ್ನ 1.30 ಗಂಟೆಗೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಕೇವಲ ಮಹಿಳಾ ಕಾರ್ಯಕರ್ತರು ಮಾತ್ರವೇ ಭಾಗವಹಿಸಬೇಕು ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸ್ಪಷ್ಟಸೂಚನೆ ನೀಡಿದ್ದಾರೆ. ವೇದಿಕೆಯ ಮೇಲೆಯೂ ಪ್ರಿಯಾಂಕಾ ಗಾಂಧಿ ಅವರ ಜತೆಗೆ ರಾಜ್ಯ ಮಹಿಳಾ ಕಾಂಗ್ರೆಸ್‌ ನಾಯಕರು ಮಾತ್ರ ವೇದಿಕೆ ಹಂಚಿಕೊಳ್ಳಬಹುದು. ನನ್ನನ್ನೂ ಸೇರಿದಂತೆ ಹಿರಿಯ ನಾಯಕರು ವೇದಿಕೆ ಮುಂಭಾಗದಲ್ಲಿ ಕೂರಲು ನಿರ್ಧರಿಸಿದ್ದೇವೆ ಎಂದು ಶಿವಕುಮಾರ್‌ ಹೇಳಿದ್ದಾರೆ.

ಹೆಚ್ಚು ಟಿಕೆಟ್‌ಗೆ ಬೇಡಿಕೆ ಸಾಧ್ಯತೆ:

ಸಾವಿರಾರು ಮಂದಿ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪ್ರಸ್ತುತ ರಾಜ್ಯದಲ್ಲಿ 74 ಕ್ಷೇತ್ರಗಳಿಂದ 109 ಮಂದಿ ಮಹಿಳೆಯರು ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸಮಾವೇಶದಲ್ಲಿ ಈ ಬಾರಿಯಾದರೂ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ರಾಜ್ಯ ಮಹಿಳಾ ಕಾಂಗ್ರೆಸ್‌ ನಾಯಕರು ಮನವಿ ಸಲ್ಲಿಸುವ ಸಾಧ್ಯತೆಯಿದೆ.
 

click me!