ಬೆಂಗಳೂರು ನಗರದಲ್ಲಿ ಈಗ ಒಟ್ಟು 92 ಲಕ್ಷ ಮತದಾರರು: ಅಂತಿಮ ಪಟ್ಟಿ ಲಭ್ಯ

By Kannadaprabha NewsFirst Published Jan 16, 2023, 9:59 AM IST
Highlights

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಚಿಕ್ಕಪೇಟೆ, ಶಿವಾಜಿನಗರ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರ ಪಟ್ಟಿಬಿಡುಗಡೆ ಮಾಡಲಾಗಿದ್ದು, ಒಟ್ಟು 9.80 ಲಕ್ಷ ಮತದಾರರಿದ್ದಾರೆ.

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಚಿಕ್ಕಪೇಟೆ, ಶಿವಾಜಿನಗರ, ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರ ಪಟ್ಟಿಬಿಡುಗಡೆ ಮಾಡಲಾಗಿದ್ದು, ಒಟ್ಟು 9.80 ಲಕ್ಷ ಮತದಾರರಿದ್ದಾರೆ. ಒಟ್ಟಾರೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 92.09 ಲಕ್ಷ ತಲುಪಿದೆ. ಕಳೆದ ಜ.5ರಂದು 25 ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಬಿಡುಗಡೆ ಮಾಡಲಾಗಿತ್ತು. ಭಾನುವಾರ ಬಾಕಿ ಉಳಿದ ಈ ಮೂರು ಕ್ಷೇತ್ರದ ಅಂತಿಮ ಮತದಾರ ಪಟ್ಟಿಬಿಡುಗಡೆ ಮಾಡಲಾಗಿದೆ.

ಚಿಕ್ಕಪೇಟೆಯಲ್ಲಿ 2,13,066, ಶಿವಾಜಿನಗರದಲ್ಲಿ 1,94,937 ಹಾಗೂ ಮಹದೇವಪುರದಲ್ಲಿ 5,72,539 ಮತದಾರರಿದ್ದಾರೆ. ಕರಡು ಮತದಾರ ಪಟ್ಟಿಗೆ ಹೋಲಿಕೆ ಮಾಡಿದರೆ ಈ ಮೂರು ವಿಧಾನಸಭಾ ಕ್ಷೇತ್ರದಲ್ಲಿ 13,726 ಮತದಾರರು ಹೆಚ್ಚಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ಈ ಮೂರು ವಿಧಾನಸಭಾ ಕ್ಷೇತ್ರಗಳ ಕರಡು ಪಟ್ಟಿಯಲ್ಲಿ 9,66,816 ಮತದಾರರಿದ್ದರು. ಇದೀಗ ಆ ಸಂಖ್ಯೆ 9,80,542ಕ್ಕೆ ಹೆಚ್ಚಳವಾಗಿದೆ.  ಮತದಾರ ಪಟ್ಟಿಪರಿಷ್ಕರಣೆ ಅವಧಿಯಲ್ಲಿ (ನ.9ರಿಂದ ಜ.15) ಒಟ್ಟು 17,130 ಮತದಾರರ ಹೊಸದಾಗಿ ಮತದಾರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. 3,410 ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. 3,710 ಮಂದಿ ಸ್ಥಳ ಬದಲಾವಣೆ ಸೇರಿದಂತೆ ಇನ್ನಿತರ ತಿದ್ದುಪಡಿ ಮಾಡಿಕೊಂಡಿದ್ದಾರೆ.

ಅಂತಿಮ ಪಟ್ಟಿಯನ್ನು ವಿಎಚ್‌ಎ ಮೊಬೈಲ್‌ ಆ್ಯಪ್‌ ಮತ್ತು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ (ಎನ್‌ವಿಎಸ್‌ಪಿ) ನಲ್ಲಿ ಪರೀಕ್ಷಿಸಿಕೊಳ್ಳಬಹುದು. ತಪ್ಪುಗಳಿದ್ದರೆ ಚುನಾವಣಾಧಿಕಾರಿಗಳ ಕಚೇರಿ, ವಾರ್ಡ್‌ ಕಚೇರಿ ಹಾಗೂ ಬೂತ್‌ ಮಟ್ಟದ ಅಧಿಕಾರಿಗಳ ಬಳಿ ನಮೂನೆ 6, 7 ಮತ್ತು 8ರಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ.

ವರ್ಷದಲ್ಲಿ 2.82 ಲಕ್ಷ ಮತದಾರರು ಕಡಿಮೆ

ಕಳೆದ ವರ್ಷದ ಜನವರಿಯಲ್ಲಿ ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂತಿಮ ಮತದಾರ ಪಟ್ಟಿಯಲ್ಲಿ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 94,92,539 ಮತದಾರರಿದ್ದರು. ಈ ಬಾರಿಯ ಅಂತಿಮ ಮತದಾರ ಪಟ್ಟಿಯಲ್ಲಿ 92,09,917 ಮತದಾರರಿದ್ದಾರೆ ಎಂದು ತಿಳಿಸಿದೆ. ಆದರೆ ಒಂದು ವರ್ಷದಲ್ಲಿ 28 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,82,622 ಮತದಾರರು ಕಡಿಮೆ ಆಗಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ: ಕೋಲಾರದಲ್ಲಿ ಮುಸ್ಲಿಮರು, ಒಕ್ಕಲಿಗರೇ ನಿರ್ಣಾಯಕರು..!

click me!