ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ: ಡಾ.ಅಂಜಲಿ ನಿಂಬಾಳ್ಕರ

By Anusha KbFirst Published Apr 10, 2022, 4:23 AM IST
Highlights
  • ಬಿಜೆಪಿ ಕೇವಲ ವೋಟ್‌ ಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿದೆ
  • ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ 
  • ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿಕೆ

ಬೆಳಗಾವಿ(ಏ.10): ನಮ್ಮದು ಈಗಾಗಲೇ ಹಿಂದೂ ರಾಷ್ಟ್ರವಿದೆ. ಹೀಗಾಗಿ, ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ ಎಂದು ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನಮ್ಮ ದೇಶದ ಮೇಲೆ ಬ್ರಿಟಿಷರು ಸೇರಿ ಹಲವರು ದಾಳಿ ಮಾಡಿದ್ದರು. ಆದರೂ ದೇಶಕ್ಕೆ ಏನೂ ಆಗಲಿಲ್ಲ. ಹಿಂದೂ ಧರ್ಮವನ್ನು ಯಾರಿಂದಲೂ ಟಚ್‌ ಮಾಡಲು ಆಗಲ್ಲ. ಅಂದು ಹಿಂದೂ ಧರ್ಮ ಇತ್ತು. ಇಂದು ಸಹ ಹಾಗೇ ಇದೆ. ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು.

ಬಿಜೆಪಿ ಕೇವಲ ವೋಟ್‌ ಬ್ಯಾಂಕ್‌ಗಾಗಿ ಧರ್ಮ, ಜಾತಿ ಆಧಾರದ ಮೇಲೆ ರಾಜಕೀಯ ಮಾಡುತ್ತಿದೆ. ನಮ್ಮದು ಹಿಂದೂ ರಾಷ್ಟ್ರ. ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್‌ ಮಾಡಿದ್ದಾರೆ. ಈಗ್ಯಾವ ಹೊಸ ಹಿಂದೂ ರಾಷ್ಟ್ರ ಮಾಡಲು ಇವರು ಹೊರಟಿದ್ದಾರೆ. ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರವನ್ನು ನಾವು ಒಪ್ಪಲ್ಲ. ಹಿಂದೂ ಧರ್ಮದ ಬಗ್ಗೆ ಮೊದಲು ಆರ್‌ಎಸ್‌ಎಸ್‌ ತಿಳಿದುಕೊಳ್ಳಬೇಕು. ಹಿಂದು ಧರ್ಮದಲ್ಲಿ ಬ್ರಾಹ್ಮಣ, ದಲಿತ ಮುಸ್ಲಿಮರು ಎಲ್ಲರೂ ಇದ್ದಾರೆ. ಹಿಂದೂ ಧರ್ಮಕ್ಕೆ ಎಲ್ಲರೂ ಒಳಪಡುತ್ತಾರೆ. ಹಿಂದೂ ಧರ್ಮದ ಸಂಸ್ಕೃತಿ ಬಹಳ ದೊಡ್ಡದಿದೆ ಎಂದರು.

Latest Videos

ಗೃಹ ಸಚಿವ ಅರಗ ಜ್ಞಾನೇಂದ್ರ ಆರ್‌ಎಸ್ಎಸ್ ಏಜೆಂಟ್: ಶಾಸಕಿ ಅಂಜಲಿ ನಿಂಬಾಳ್ಕರ್

ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ ರಾಜಕೀಯ ಪ್ರವೇಶ ವಿಚಾರ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಖಾನಾಪುರದಲ್ಲಿ ಇರ್ತೀನಿ ನಿಜ. ಆದರೆ ಅವರೊಂದಿಗೆ ದಿನಕ್ಕೆ ಮೂರು, ನಾಲ್ಕು ಬಾರಿ ಮಾತನಾಡುತ್ತೇನೆ ನನಗೆ ಈ ಬಗ್ಗೆ ಸುದ್ದಿ ಬಂದಿಲ್ಲ. ನಿಮಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ಈಗ ವಿದ್ಯಾಭ್ಯಾಸಕ್ಕಾಗಿ ರಜೆ ಪಡೆದಿದ್ದಾರೆ. ಎರಡು ವರ್ಷ ರಜೆ ಪಡೆದು ಎಲ್‌ಎಲ್‌ಬಿ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಯಾರು ಸೀನಿಯರ್‌, ಜೂನಿಯರ್‌ ಅಲ್ಲ ಎಂದರು.


ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಲಿ

ಆರ್‌ಎಸ್‌ಎಸ್‌ ಏಜೆಂಟ್‌ ತರಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಿಂದಿ ಹೇರಿಕೆ ಪ್ರಸ್ತಾಪವನ್ನೂ ತೀವ್ರವಾಗಿ ಖಂಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಗೃಹ ಸಚಿವ ಆರಗ್‌ ಜ್ಞಾನೇಂದ್ರ ನೀಡಿರುವ ಹೇಳಿಕೆ ಖಂಡನೀಯ. ಗೃಹ ಸಚಿವರು ಕೋಮುಸೌಹಾರ್ದ ಕದಡಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ಏಜೆಂಟ್‌ ತರಹ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅವರು ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಕೋಮು ಸೌಹಾರ್ದ ಕೆದಡಿಸುವ ಗೃಹ ಸಚಿವರ ರಾಜೀನಾಮೆ ಪಡೆಯಬೇಕು ಎಂದರು.

Hijab Row: ನನ್ನ ಹಿಜಾಬ್‌ನ್ನು ಕಿತ್ತುಕೊಂಡರೆ ನಾನು ಹಿಜಾಬ್ ಪರ: ಅಂಜಲಿ ನಿಂಬಾಳ್ಕರ್

ಬಿಜೆಪಿ ಅಜೆಂಡಾ ಕೂಡ ಇದೆ. ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಸಾಕಷ್ಟುಇದೆ. ಅದನ್ನು ಬಗೆಹರಿಸುವ ಬದಲು ಸಮಾಜ ಸ್ವಾಸ್ಥ್ಯ ಹದಗೆಡಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎಲ್ಲಾ ಭಾಷೆ ಬಿಟ್ಟು ಹಿಂದಿ ಹೇರಿಕೆ ಮಾಡುವುದು ಖಂಡನೀಯ. ಭಾರತದ ಶಕ್ತಿಯನ್ನು ಕುಗ್ಗಿಸಲು ಕೇಂದ್ರ ಸರ್ಕಾರ ಹೊರಟಿದೆ. ದೇಶದಲ್ಲಿ ಶೇ.60 ರಷ್ಟುಜನ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ. ವಿವಿಧ ಕಡೆಗಳಲ್ಲಿ ನಾನಾ ಭಾಷೆ ಮಾತನಾಡುತ್ತಾರೆ. ಇದು ಭಾರತದ ಸಂಸ್ಕೃತಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ (Vinay Nawalgatti), ನಗರ ಜಿಲ್ಲಾಧ್ಯಕ್ಷ ರಾಜು ಸೇಠ್‌ (Raju Seth), ಕಾಂಗ್ರೆಸ್‌ ಮುಖಂಡ ಸುನೀಲ ಹನುಮಣ್ಣವರ (Sunila Hanumanavara), ಜಗದೀಶ ಸಾವಂತ (Jagdish Sawant), ಬಸವರಾಜ ಶಿಗಾವಿ (Basavaraja Shigawi) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ (Arag Ganendra), ಸಿ.ಟಿ.ರವಿ (CT Ravi) ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ(Anjali Nimbalkara,)  ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು ಬೆಳಗಾವಿ ನಗರ ಪೊಲೀಸ್‌ ಆಯುಕ್ತರಿಗೆ ಶನಿವಾರ ದೂರು ಸಲ್ಲಿಸಿದರು.

ಬೆಂಗಳೂರಿನ ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಚಂದ್ರು ಹತ್ಯೆ ಪ್ರಕರಣ ಸಂಬಂಧ ರಾಜ್ಯದಲ್ಲಿ ಅಶಾಂತಿ ನಿರ್ಮಿಸಲು ಪ್ರಚೋದನಾಕಾರಿ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ ಮಾಡಿದರು.
 

click me!