ಬೆಳಗಾವಿ(ಏ.2): ಬೆಳಗಾವಿಯಯ ಕೇಂದ್ರ ಜಿಎಸ್‌ಟಿ ಆಯುಕ್ತಾಲಯದಿಂದ 2021-22ನೇ ಆರ್ಥಿಕ ವರ್ಷದಲ್ಲಿ .10,172 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಾಖಲೆಯ ಸಂಗ್ರಹ ಸಾಧಿಸಿದೆ ಎಂದು ಜಿಎಸ್‌ಟಿ ಆಯುಕ್ತಾಲಯದ ಆಯುಕ್ತ ಬಸವರಾಜ ನಲೆಗಾವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂತಹ ಜಿಎಸ್‌ಟಿ ಸಂಗ್ರಹ, ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ. ಜತೆಗೆ ದೇಶವು ಸಾಂಕ್ರಾಮಿಕದ ನೆರಳಿನಿಂದ ದೂರ ಸರಿದಿದೆ ಎಂಬುವುದರ ಸೂಚಕವಾಗಿದೆ. ಬೆಳಗಾವಿ ಆಯುಕ್ತಾಲಯ ವ್ಯಾಪ್ತಿ ದೊಡ್ಡದಾಗಿದ್ದು, ಇದು ಬೆಳಗಾವಿ (Belgaum), ಧಾರವಾಡ (Dharwad), ಗದಗ (Gadag), ಕೊಪ್ಪಳ (Koppal), ವಿಜಯನಗರ (Vijayanagar), ಬಳ್ಳಾರಿ (Bellary), ರಾಯಚೂರು (Raichur), ಯಾದಗಿರಿ (Yadagiri), ಕಲಬುರ್ಗಿ (Kalaburgi), ಬೀದರ (bidar), ವಿಜಯಪುರ (Vijayapura) ಮತ್ತು ಬಾಗಲಕೋಟೆ (Bagalkot)ಸೇರಿದಂತೆ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ವ್ಯಾಪಿಸಿದೆ.
ಈ ಜಿಲ್ಲೆಗಳಲ್ಲಿ ಒಟ್ಟು 2,30,566 ತೆರಿಗೆದಾರರು ಜಿಎಸ್‌ಟಿ ಅಡಿಯಲ್ಲಿ ನೋಂದಾವಣಿ ಮಾಡಿಕೊಂದ್ದಾರೆ ಮತ್ತು ಇವುಗಳನ್ನು ರಾಜ್ಯ ಅಥವಾ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಜಿಎಸ್‌ಟಿ ಆಡಳಿತದ ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರಿಂದ, ಬೆಳಗಾವಿ ಕೇಂದ್ರ ಜಿಎಸ್‌ಟಿ ರಚನೆಯಿಂದ .10,172 ಕೋಟಿ ಸಂಗ್ರಹಿಸಲಾಗಿದೆ. 2019-20ನೇ ಸಾಲಿನ ಆಯುಕ್ತಾಲಯದ ಆದಾಯ .7,677 ಕೋಟಿ, 2020-21ರಲ್ಲಿ . 7,124 ಕೋಟಿ ಮತ್ತು 2021-22ನೇ ಸಾಲಿಗೆ . 10,172 ಕೋಟಿಯಷ್ಟಾಗಿದೆ. ಇದು ಹಿಂದಿನ ಆರ್ಥಿಕತೆಗಳ ಸಂಗ್ರಹಕ್ಕಿಂತ ಶೇ 42 ಹೆಚ್ಚಳವಾಗಿದೆ ಎಂದಿದ್ದಾರೆ.
ಉಕ್ಕು (Steel), ಸಿಮೆಂಟ್ (cement), ಗಣಿಗಾರಿಕೆ, ಸಕ್ಕರೆಯ ಪ್ರಮುಖ ಕೈಗಾರಿಕೆಗಳಾದ ಜಿಎಸ್‌ಡಬ್ಲ್ಯು ಸ್ಟೀಲ್ (GSW Steel)ಕೆಸೋರಾಮ (Kesorama) ಇಂಡಸ್ಟ್ರೀಸ್, ಓರಿಯಂಟ್ ಸಿಮೆಂಟ್, ಕೆಜೆಬಿಎ ಇತ್ಯಾದಿಗಳು, ಈ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬೆಳಗಾವಿ ಜಿಎಸ್‌ಟಿ ಆಯುಕ್ತಾಲಯ ತೆರಿಗೆದಾರರ ಅನುಸರಣೆಗೆ ಅನುಕೂಲ ಆಗುವಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ವಂಚಕರ ವಿರುದ್ಧವೂ ಕ್ರಮ:
ತೆರಿಗೆ ವಂಚಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. 2021ರ ಸೆಪ್ಟೆಂಬರ್‌ನಲ್ಲಿ ಇ-ವೇ ಬಿಲ್ ಇಲ್ಲದೆ ಸಾಗಿಸುತ್ತಿದ್ದ ಕಾರಣ ಏಳು ಕೋಟಿ ರುಪಾಯಿ ಮೌಲ್ಯದ ಅಡಿಕೆಯ ಬೃಹತ್ ಸರಕುಗಳನ್ನು ಜಪ್ತಿ ಮಾಡಲಾಗಿದೆ. ಶೀಘ್ರ ನಾಶವಾಗುವಂತಹ ಈ ಅಡಿಕೆಯ ಸರಕನ್ನು, ಯಶಸ್ವಿಯಾಗಿ ಹರಾಜು ಮಾಡಿ, ಜಿಎಸ್‌ಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ. ಬೇಹುಗಾರಿಕೆ ಅಧಿಕಾರಿಗಳು ಕೂಡ, .3 ಕೋಟಿ ನಗದು ಮತ್ತು .503 ಕೋಟಿ (ಖs.503 ಹೂಡುವಳಿ ತೆರಿಗೆ ಜಮೆಯಲ್ಲಿ) ಈ ಹಣಕಾಸು ವರ್ಷದಲ್ಲಿ 101 ಸಂಖ್ಯೆಯ ಅಪರಾಧ ಪ್ರಕರಣಗಳನ್ನು ದಾಖಲಿಸುವ ಮೂಲಕ ಜಿಎಸ್‌ಟಿ ವಸೂಲಿ ಮಾಡಿದ್ದಾರೆ. ಬೇಹುಗಾರಿಕೆ ತಂಡದಿಂದ .549 ಕೋಟಿ ಬೇಹುಗಾರಿಕೆ ಮತ್ತು ಮರುಪಡೆಯುವಿಕೆ ಪ್ರಕ್ರಿಯೆ ನಡೆಯುತ್ತಿದೆ. ತೆರಿಗೆ ವಂಚಕರ ವಿರುದ್ಧ ಕ್ರಮಕೈಗೊಳ್ಳಲು ಜಿಎಸ್‌ಟಿ ಕಾನೂನಿನಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
2021-22ನೇ ಹಣಕಾಸು ವರ್ಷ (Financial Year) ಮಾ.31ಕ್ಕೆ ಮುಕ್ತಾಯವಾಗಲಿದೆ. ಏಪ್ರಿಲ್ 1ರಿಂದ ಪ್ರಾರಂಭವಾದ ಹೊಸ ಹಣಕಾಸಿನ ಸಾಲಿನಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗಿದೆ, ಇದು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಆದಾಯ ತೆರಿಗೆ (25ನೇ ತಿದ್ದುಪಡಿ) ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಿದೆ. ಇದರ ಅನ್ವಯ ಇಪಿಎಫ್ (EPF) ಖಾತೆಯಲ್ಲಿ ವಾರ್ಷಿಕ 2.5ಲಕ್ಷ ರೂ. ತನಕದ ಕೊಡುಗೆ ಮೇಲೆ ಯಾವುದೇ ತೆರಿಗೆ (Tax) ವಿಧಿಸಲಾಗೋದಿಲ್ಲ. ಒಂದು ವೇಳೆ ಇಪಿಎಫ್ (EPF) ಖಾತೆಗೆ ವಾರ್ಷಿಕ 2.5ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿದ್ರೆ ಅದರ ಬಡ್ಡಿ (Interest) ಮೇಲೆ ತೆರಿಗೆ ವಿಧಿಸಲಾಗುತ್ತದೆ.