ಶಿವಸೇನೆ ನಾಯಕ ಸಂಜಯ್ ರಾವತ್ 'ಬೆಳಗಾವ ಫೈಲ್ಸ್' ಅಂತಾ ಟ್ವಿಟ್ಟರ್‌ನಲ್ಲಿ ವಿವಾದಿತ ಪೋಸ್ಟ್ ಮಾಡಿ ಉದ್ಧಟತನ ಮೆರೆದಿದ್ದಾರೆ. ದಿ ಕಾಶ್ಮೀರ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ವೇಳೆಯೇ ವಿವಾದಿತ ಪೋಸ್ಟ್ ಮಾಡಿದ ರಾವತ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮಾ.22): ಪದೇಪದೇ ಗಡಿವಿವಾದ ಕೆಣಕುತ್ತಿರುವ ಮಹಾರಾಷ್ಟ್ರ ಶಿವಸೇನೆ (Shiv Sena ) ನಾಯಕರು ತಮ್ಮ ಉದ್ಧಟತನ ಮುಂದುವರಿಸಿದ್ದಾರೆ. ಶಿವಸೇನೆ ವಕ್ತಾರ ಸಂಜಯ್ ರಾವತ್ (Sanjay Raut) ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ 'ಬೆಳಗಾವ ಫೈಲ್ಸ್' (Belgaum Files) ಎಂಬ ತಲೆಬರಹದಡಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ದಿ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರದ ಬಗ್ಗೆ ಪರ ವಿರೋಧ ಚರ್ಚೆ ವೇಳೆಯೇ ವಿವಾದಿತ ಪೋಸ್ಟ್ ಮಾಡಿದ ಸಂಜಯ್ ರಾವತ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವ್ಯಂಗ್ಯ ಚಿತ್ರದಲ್ಲಿ 'ಬೆಳಗಾವ ಫೈಲ್ಸ್ ಏನು ಕಡಿಮೆ ಇದೆಯಾ? ಪ್ರಜಾಪ್ರಭುತ್ವದ ಹತ್ಯೆ, ಮರಾಠಿ ಯುವಕ' ಎಂಬ ಬರಹಗಳಿರುವ ವಿವಾದಿತ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿದ್ದು, ಬೆಳಗಾವಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಆಗ್ತಿದೆ ಅಂತಾ ಬಿಂಬಿಸುವ ಯತ್ನ ಮಾಡಿದ್ದಾರೆ.
ಶಿವಸೇನೆ ನಾಯಕ ಸಂಜಯ್ ರಾವತ್ ವಿರುದ್ಧ ಬೆಳಗಾವಿಯಲ್ಲಿ (Belagavi) ಆಕ್ರೋಶ ಭುಗಿಲೆದ್ದಿದ್ದು ಸಾಮಾಜಿಕ ಜಾಲತಾಣಗಳಲ್ಲೇ ಕನ್ನಡಿಗರು ಸಂಜಯ್ ರಾವತ್ ಗೆ ತರಾಟೆಗೆ ತಗೆದುಕೊಂಡಿದ್ದಾರೆ. 'ಭಾರತದ ಕಾಶ್ಮೀರನ್ನು ಪಾಕಿಸ್ತಾನಕ್ಕೆ ಸೇರಿಸಿ ಅನ್ನೋರನ್ನು ಉಗ್ರರು ಅಂತಿವಿ. ಕರ್ನಾಟಕದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುವರನ್ನು ಏನೆನ್ನಬೇಕು ಹೇಳು?' ಅಂತಾ ಶಿವಸೇನೆಯ ಸಂಜಯ್ ರಾವುತ್‌ಗೆ ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Maha Vikas Aghadi ಅಸಾದುದ್ದೀನ್ ಓವೈಸಿ ಪಾರ್ಟಿ, ಬಿಜೆಪಿಯ ಬಿ ಟೀಮ್ ಎಂದ ಸಂಜಯ್ ರಾವತ್!
'ಬೆಳಗಾವ ಫೈಲ್ಸ್ ಬಿಡಿ, ಶಿವಸೇನೆ ಭ್ರಷ್ಟಾಚಾರ ಫೈಲ್ಸ್ ನೋಡಿ' : ಸಂಜಯ್ ರಾವತ್ ವಿವಾದಿತ ಪೋಸ್ಟ್‌ಗೆ ಆಮ್ ಆದ್ಮಿ ಪಕ್ಷದ ಮುಖಂಡ ರಾಜು ಟೋಪಣ್ಣವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದ ಶಿವಸೇನೆ ಗಡಿ ವಿವಾದ ಜೀವಂತ ಇಡಲು ಯತ್ನಿಸುತ್ತಿದೆ. ಇದಕ್ಕಾಗಿ ಪದೇ ಪದೇ ಈ ರೀತಿ ಕೃತ್ಯ ಎಸಗುತ್ತಿದೆ. ಬೆಳಗಾವಿಯಲ್ಲಿ ಕನ್ನಡಿಗರು ಮರಾಠಿಗರು ಒಗ್ಗಟ್ಟಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಇರುವಂತಹ ಶಿವಸೇನೆ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಬೇಕಿದ್ರೆ ಸಂಜಯ್ ರಾವತ್ 'ಶಿವಸೇನೆ ಫೈಲ್ಸ್' ನೋಡಲಿ' ಅಂತಾ ತಿರುಗೇಟು ನೀಡಿದ್ದಾರೆ.
ಸಂಜಯ್ ರಾವತ್ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಲು ಆಗ್ರಹ: ಇನ್ನು ಈ ಕುರಿತು ಮಾತನಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಹೋಲಿಸಿ ಬೆಳಗಾವ ಫೈಲ್ಸ್ ಅಂತಾ ಪೋಸ್ಟ್ ಮಾಡಿದ್ದು ಖಂಡನೀಯ. ಬೆಳಗಾವಿಯಲ್ಲಿ ಕನ್ನಡಿಗರು ಮರಾಠಿಗರು ಸೌಹಾರ್ದಯುತರಾಗಿದ್ದಾರೆ. ಬೆಳಗಾವಿಯಲ್ಲಿಯ ಮುಗ್ಧ ಮರಾಠಿಗರನ್ನು ಕೆರಳಿಸುವ ಯತ್ನ ಶಿವಸೇನೆ ಮಾಡ್ತಿದೆ. ಅಷ್ಟೇ ಅಲ್ಲದೇ ಬೆಳಗಾವ ಫೈಲ್ಸ್ ಅಂತಾ ಪೋಸ್ಟ್ ಮಾಡುವ ಮೂಲಕ ಕರ್ನಾಟಕ ಸರ್ಕಾರ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಹೀಗಾಗಿ ಸಂಜಯ್ ರಾವತ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು' ಅಂತಾ ಒತ್ತಾಯಿಸಿದ್ದಾರೆ.
MEKEDATU PROJECT ತಮಿಳುನಾಡು ವಿಧಾನಸಭೆ ನಿರ್ಣಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ ಎಂದ HDK