
ಬೆಳಗಾವಿ: ಕಾವೇರಿ-2.0 ನೋಂದಣಿ ತಂತ್ರಾಂಶದಲ್ಲಿದ್ದ ತಾಂತ್ರಿಕ ದೋಷದಿಂದಾಗಿ, ಶಾಶ್ವತ ಗುತ್ತಿಗೆ (Permanent Lease) ಆಧಾರಿತ ಜಾಗದಲ್ಲಿ ನಿರ್ಮಿಸಲಾದ ಫ್ಲಾಟ್‌ಗಳ ಮಾರಾಟ ನೋಂದಣಿಗೆ ಎದುರಾಗಿದ್ದ ಅಡಚಣೆಯನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಸಾಫ್ಟ್‌ವೇರ್‌ನ ಪರಿಮಿತಿಗಳು ಕಾನೂನುಬದ್ಧವಾಗಿ ಲಭ್ಯವಿರುವ ಗುತ್ತಿಗೆ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿರುವ ನ್ಯಾಯಾಲಯ, ಎರಡು ತಿಂಗಳೊಳಗೆ ತಂತ್ರಾಂಶವನ್ನು ನವೀಕರಿಸಬೇಕು. ಇಲ್ಲವಾದಲ್ಲಿ ಮ್ಯಾನುವಲ್ ಆಗಿ ಮಾರಾಟ ಪತ್ರಗಳನ್ನು ನೋಂದಾಯಿಸಬೇಕು ಎಂದು ಸೂಚನೆ ನೀಡಿದೆ.
ಬೆಳಗಾವಿಯ ‘ಕ್ರಿಶ್ ಜೀವನ್ ಅಪಾರ್ಟ್‌ಮೆಂಟ್’ ನಿರ್ಮಾತೃ ಮತ್ತು ಡೆವಲಪರ್ ಗೋಪಾಲರಾವ್ ಅವರು ಶಾಶ್ವತ ಗುತ್ತಿಗೆ ಹಕ್ಕಿನಡಿ ಹೊಂದಿದ್ದ ಜಾಗದಲ್ಲಿ 34 ಫ್ಲಾಟ್‌ಗಳನ್ನು ನಿರ್ಮಿಸಿದ್ದರು. ಕಾವೇರಿ-2.0 ಪೋರ್ಟಲ್ ಜಾರಿಗೆ ಬರುವ ಮುನ್ನವೇ 21 ಫ್ಲಾಟ್‌ಗಳ ಮಾರಾಟ ಪತ್ರಗಳು ಯಾವುದೇ ಅಡೆತಡೆಯಿಲ್ಲದೆ ನೋಂದಣಿಯಾಗಿದ್ದವು.
ಆದರೆ, ಕಾವೇರಿ-2.0 ಜಾರಿಯಾದ ನಂತರ ಉಳಿದ 13 ಫ್ಲಾಟ್‌ಗಳ ನೋಂದಣಿಗೆ ತಾಂತ್ರಿಕ ಸಮಸ್ಯೆ ಉಂಟಾಯಿತು. ನಗರಾಡಳಿತ ಹಾಗೂ ‘ಇ-ಆಸ್ತಿ’ ದಾಖಲೆಗಳಲ್ಲಿ ಮೂಲ ಗುತ್ತಿಗೆದಾರನನ್ನು ಮಾಲೀಕ ಎಂದು ಹಾಗೂ ಗೋಪಾಲರಾವ್ ಅವರನ್ನು ಕೇವಲ ತೆರಿಗೆ ಪಾವತಿದಾರ ಎಂದು ತೋರಿಸಲಾಗಿತ್ತು. ಪುರಸಭೆಯ ಡೇಟಾವನ್ನು ಕಾವೇರಿ-2.0 ವ್ಯವಸ್ಥೆಗೆ ಮ್ಯಾಪ್ ಮಾಡುವಾಗ ಉಂಟಾದ ಲೋಪದಿಂದಾಗಿ ಮಾರಾಟ ಪತ್ರಗಳ ಪ್ರಕ್ರಿಯೆ ಸ್ಥಗಿತಗೊಂಡಿತು. ಇದನ್ನು ಪ್ರಶ್ನಿಸಿ ಗೋಪಾಲರಾವ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೆಳಗಾವಿಯಲ್ಲಿ ಶಾಶ್ವತ ಗುತ್ತಿಗೆ ಆಸ್ತಿಗಳ ವಿಷಯದಲ್ಲಿ ಇಂತಹ ಸಮಸ್ಯೆ ಇರುವುದನ್ನು ಸರ್ಕಾರಿ ಅಧಿಕಾರಿಗಳೇ ಒಪ್ಪಿಕೊಂಡಿದ್ದು, ಸಾಫ್ಟ್‌ವೇರ್ ಮ್ಯಾಪಿಂಗ್‌ನಲ್ಲಿ ಬದಲಾವಣೆ ಮಾಡುವುದು ಅತ್ಯಗತ್ಯ ಎಂಬುದನ್ನು ನ್ಯಾಯಾಲಯ ಗಮನಿಸಿತು.
ಆಸ್ತಿ ವರ್ಗಾವಣೆ ಕಾಯ್ದೆಯಡಿ, ಗುತ್ತಿಗೆ ಎಂಬುದು ಕೇವಲ ಜಾಗವನ್ನು ಬಳಸಿಕೊಳ್ಳುವ ಹಕ್ಕಷ್ಟೇ ಅಲ್ಲ. ಅದು ವರ್ಗಾಯಿಸಬಹುದಾದ ಮೌಲ್ಯಯುತ ಕಾನೂನುಬದ್ಧ ಹಿತಾಸಕ್ತಿಯನ್ನು ಕೂಡ ಒಳಗೊಂಡಿದೆ ಎಂಬುದನ್ನು ಕೋರ್ಟ್ ಹೇಳಿತು..
ಸಾಫ್ಟ್‌ವೇರ್ ಪೋರ್ಟಲ್ ಎಂಬುದು ಕಾನೂನನ್ನು ಜಾರಿಗೊಳಿಸುವ ಒಂದು ಮಾಧ್ಯಮವಷ್ಟೇ ಹೊರತು, ಅದೇ ಒಂದು ಶಾಸನವಲ್ಲ. ತಂತ್ರಾಂಶದ ಕಾರಣಕ್ಕೆ ಕಾನೂನಿನಲ್ಲಿ ಇಲ್ಲದಿರುವ ನಿರ್ಬಂಧಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಪೀಠವು ಹೇಳಿತು.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠವು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಪೌರಾಡಳಿತ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, 'ಫಾರ್ಮ್ ಸಂಖ್ಯೆ 2/ಇ-ಆಸ್ತಿ' ದಾಖಲೆಗಳ ಮ್ಯಾಪಿಂಗ್ ಮತ್ತು API ಇಂಟರ್ಫೇಸ್‌ನಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು.
ಹೊಸ ವ್ಯವಸ್ಥೆಯು ಮೂಲ ಜಮೀನುದಾರನ ಮಾಲೀಕತ್ವ ಮತ್ತು ಗುತ್ತಿಗೆದಾರನ ವರ್ಗಾಯಿಸಬಹುದಾದ ಗುತ್ತಿಗೆ ಹಕ್ಕನ್ನು ಪ್ರತ್ಯೇಕವಾಗಿ ಗುರುತಿಸುವಂತಿರಬೇಕು. ಈ ಪ್ರಕ್ರಿಯೆಯನ್ನು ಆದೇಶದ ಪ್ರತಿ ಸಿಕ್ಕ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು.
ಒಂದು ವೇಳೆ ನಿಯಮಿತ 2 ತಿಂಗಳೊಳಗೆ ತಾಂತ್ರಿಕ ಸಮಸ್ಯೆಗಳು ಪೂರ್ಣಗೊಳ್ಳದಿದ್ದರೆ, ಸಂಬಂಧಪಟ್ಟ ಉಪ-ನೋಂದಣಿದಾರರು (Sub-Registrar) ಶಾಸನಬದ್ಧ ನಿಯಮಗಳಿಗೆ ಒಳಪಟ್ಟು ಮಾರಾಟ ಪತ್ರಗಳನ್ನು ಹಸ್ತಚಾಲಿತವಾಗಿ ಸ್ವೀಕರಿಸಿ ನೋಂದಾಯಿಸಿಕೊಡಬೇಕು.
ಈ ತೀರ್ಪು ಅರ್ಜಿದಾರರನ್ನು ಮೂಲ ಭೂಮಿಯ ಸಂಪೂರ್ಣ ಮಾಲೀಕರನ್ನಾಗಿ ಮಾಡುವುದಿಲ್ಲ, ಬದಲಾಗಿ ಕಾನೂನು ಹಾಗೂ ಗುತ್ತಿಗೆ ನಿಯಮಗಳ ವ್ಯಾಪ್ತಿಯಲ್ಲಿ ಅವರ ಶಾಶ್ವತ ಗುತ್ತಿಗೆ ಹಕ್ಕನ್ನು ಮಾತ್ರ ನೋಂದಾಯಿಸಬಹುದಾದ ಶೀರ್ಷಿಕೆ ಎಂದು ಗುರುತಿಸುತ್ತದೆ ಎಂದು ಕೋರ್ಟ್ ಹೇಳಿದೆ.