ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!

Published : Jul 26, 2026, 09:08 AM IST
belagavi youtubers

ಸಾರಾಂಶ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್‌ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ: ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್‌ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಗಾಂಜಾ ನೀಡಿ, ಅದನ್ನೇ ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಗ್ರಾಮದ ಮೆಹಬೂಬ್ ಜಮಾದಾರ್ ಎಂಬುವವರೇ ಈ ಖದೀಮರ ಜಾಲಕ್ಕೆ ಬಲಿಯಾದವರು. ಈ ಯೂಟ್ಯೂಬರ್ಸ್ ಗ್ಯಾಂಗ್ ಮೊದಲು ಮೆಹಬೂಬ್ ಅವರಿಗೆ ತಾವೇ ಗಾಂಜಾ ಪ್ಯಾಕೆಟ್ ನೀಡಿದ್ದಾರೆ. ಮೆಹಬೂಬ್ ಕೈಗೆ ಗಾಂಜಾ ಸಿಗುತ್ತಿದ್ದಂತೆ, ಪೊಲೀಸರ ಹೆಸರಿನಲ್ಲಿ ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಬ್ಲ್ಯಾಕ್‌ಮೇಲ್ ತಂತ್ರ

ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ನಿನ್ನನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ ಈ ಗ್ಯಾಂಗ್, ಗಾಂಜಾ ಪ್ಯಾಕೆಟ್ ನೀಡುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿತ್ತು. ಈ ವಿಡಿಯೋ ಇಟ್ಟುಕೊಂಡು ಪೊಲೀಸ್ ಕೇಸ್ ಹಾಕದಂತೆ ಇರಲು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಭಯಭೀತರಾದ ಮೆಹಬೂಬ್ ಅಂದು ತಮ್ಮ ಬಳಿಯಿದ್ದ 60 ಸಾವಿರ ರೂಪಾಯಿಗಳನ್ನು ಇವರಿಗೆ ನೀಡಿದ್ದಾರೆ.

ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದ ಈ ಯೂಟ್ಯೂಬರ್ಸ್, ಮೆಹಬೂಬ್ ಹಣ ನೀಡದಿದ್ದಾಗ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದರಿಂದ ಕಂಗೆಟ್ಟ ಮೆಹಬೂಬ್ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಸೂಲಿ ಜಾಲ ಬಯಲಾಗಿದೆ.

ಬಂಧಿತರ ವಿವರ

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ, ಡೇವಿಡ್ ತಂಗೇರಾಳ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್‌ಗಳು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರಕರ್ತರ ಹೆಸರಿನಲ್ಲಿ ಸಮಾಜದಲ್ಲಿ ದರೋಡೆಗೆ ಇಳಿದಿದ್ದ ಈ ಗ್ಯಾಂಗ್ ಈಗ ಜೈಲು ಪಾಲಾಗಿದೆ.

PREV
Read more Articles on
click me!

Recommended Stories

ಒಂದು ಹುಡುಗಿ ಕತೆ.. ಬೆಳಗಾವಿಯಲ್ಲಿ ಎರಡು ಗ್ರಾಮಗಳ ಯುವಕರಿಂದ ನಡು ರಸ್ತೆಯಲ್ಲಿ ಹೊಡೆದಾಟ..!
ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ ಜೊತೆ ಜಗಳ; ಅದೇ ಸಿಟ್ಟಿನಲ್ಲಿ ದೂಧಗಂಗಾ ನದಿಗೆ ಹಾರಿದ ಪತ್ನಿ!