ಹೊಸ ಕಾರು, ಬೈಕ್‌ಗಳ ಇನ್ಶೂರೆನ್ಸ್ ಅವಧಿ ಒಂದು ವರ್ಷ ಹೆಚ್ಚಿಸಿದ ಸುಪ್ರೀಂ ಕೋರ್ಟ್‌!

Published : Aug 04, 2026, 06:11 PM IST
Car Bike Insurence

ಸಾರಾಂಶ

ರಸ್ತೆ ಅಪಘಾತ ಸಂತ್ರಸ್ತರಿಗೆ ಪರಿಹಾರ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಹೊಸ ಕಾರುಗಳಿಗೆ 4 ವರ್ಷ ಮತ್ತು ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಿದೆ. ದೇಶದಲ್ಲಿ ಶೇ. 56ರಷ್ಟು ವಾಹನಗಳು ವಿಮೆ ಇಲ್ಲದೆ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಆದೇಶವನ್ನು ನೀಡಲಾಗಿದೆ.

ನವದೆಹಲಿ (ಆ.4): ದೇಶದಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಹೊಸ ಕಾರುಗಳ ಥರ್ಡ್ ಪಾರ್ಟಿ ಮೋಟಾರು ವಾಹನ ವಿಮೆಯ (Third-party insurance) ಅವಧಿಯನ್ನು 4 ವರ್ಷಗಳಿಗೆ ಹಾಗೂ ಹೊಸ ದ್ವಿಚಕ್ರ ವಾಹನಗಳ ವಿಮೆ ಅವಧಿಯನ್ನು 6 ವರ್ಷಗಳಿಗೆ ಹೆಚ್ಚಿಸಿ ಆದೇಶಿಸಿದೆ.

ಪ್ರಸ್ತುತ, ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ನಿರ್ದೇಶನದಂತೆ ಹೊಸ ಕಾರುಗಳಿಗೆ 3 ವರ್ಷ ಹಾಗೂ ಹೊಸ ಬೈಕ್‌ಗಳಿಗೆ 5 ವರ್ಷಗಳ ಥರ್ಡ್ ಪಾರ್ಟಿ ವಿಮೆ ಚಾಲ್ತಿಯಲ್ಲಿದೆ. ಆದರೆ, 8 ವರ್ಷಗಳ ಹಿಂದೆ ಈ ನಿಯಮ ತಂದರೂ ಸಹ ದೇಶದಲ್ಲಿ ಲಕ್ಷಾಂತರ ವಾಹನಗಳು ಇಂದಿಗೂ ವಿಮೆ ಇಲ್ಲದೆಯೇ ಸಂಚರಿಸುತ್ತಿರುವುದನ್ನು ಗಮನಿಸಿದ ನ್ಯಾಯಪೀಠ, ಈ ಅವಧಿಯನ್ನು ತಲಾ ಒಂದು ವರ್ಷ ಹೆಚ್ಚಿಸಲು ನಿರ್ಧರಿಸಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಮತ್ತು ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (GIC) ಈ ಅವಧಿ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.

ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು ಈ ಕುರಿತು ಆದೇಶ ನೀಡುತ್ತಾ, "8 ವರ್ಷಗಳು ಕಳೆದರೂ ಬೃಹತ್ ಪ್ರಮಾಣದ ವಾಹನಗಳು ವಿಮೆ ಇಲ್ಲದೆ ಓಡಾಡುತ್ತಿರುವುದು ಕಂಡುಬಂದಿದೆ. ಈ ಅವಧಿಯನ್ನು ಹೆಚ್ಚಿಸಬಾರದು ಎಂದು ಐಆರ್‌ಡಿಎ ಮತ್ತು ಜಿಐಸಿ ಶಿಫಾರಸು ಮಾಡಿದ್ದರೂ, ರಸ್ತೆ ಸುರಕ್ಷತೆಯ ಹಿತದೃಷ್ಟಿಯಿಂದ ಅವಧಿಯನ್ನು ಇನ್ನೂ 1 ವರ್ಷ ಹೆಚ್ಚಿಸುವುದು ಅಗತ್ಯ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ಇನ್ಮುಂದೆ ಹೊಸ ಕಾರುಗಳಿಗೆ 4 ವರ್ಷ ಹಾಗೂ ಹೊಸ ದ್ವಿಚಕ್ರ ವಾಹನಗಳಿಗೆ 6 ವರ್ಷಗಳ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದು, ಈ ಬಗ್ಗೆ ತಕ್ಷಣ ಸೂಕ್ತ ನಿರ್ದೇಶನ ಹೊರಡಿಸುವಂತೆ ಐಆರ್‌ಡಿಎಗೆ ಸೂಚಿಸಿದೆ.

ವಿಮೆ ಪತ್ತೆಗೆ ಹೈಟೆಕ್ ತಂತ್ರಜ್ಞಾನ: ಪೆಟ್ರೋಲ್ ಬಂಕ್‌ಗಳಲ್ಲೂ ಚೆಕಿಂಗ್!

ಕಡ್ಡಾಯ ವಿಮೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಹಲವು ಕ್ರಾಂತಿಕಾರಿ ನಿರ್ದೇಶನಗಳನ್ನು ನೀಡಿದೆ.

ಎಎನ್‌ಪಿಆರ್ ಕ್ಯಾಮೆರಾ ಇಂಟಿಗ್ರೇಷನ್: ಹೆದ್ದಾರಿಗಳು ಮತ್ತು ರಸ್ತೆಗಳಲ್ಲಿರುವ 'ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್' (ANPR) ಕ್ಯಾಮೆರಾಗಳನ್ನು ಇನ್ಶೂರೆನ್ಸ್ ಇನ್ಫರ್ಮೇಷನ್ ಬ್ಯೂರೋ ಡೇಟಾಬೇಸ್ ಮತ್ತು 'ವಾಹನ್' (VAHAN) ಪೋರ್ಟಲ್ ಜೊತೆ ತಕ್ಷಣ ಜೋಡಿಸಬೇಕು. ಇದರಿಂದ ಓವರ್ ಸ್ಪೀಡಿಂಗ್ ಅಥವಾ ಸಿಗ್ನಲ್ ಜಂಪ್ ಪತ್ತೆ ಮಾಡುವುದರ ಜೊತೆಗೆ, ವಿಮೆ ಇಲ್ಲದ ವಾಹನಗಳಿಗೆ ಸ್ವಯಂಚಾಲಿತವಾಗಿ 'ಇ-ಚಲನ್' (e-challan) ಜನರೇಟ್ ಆಗಲಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಬಂದ್ ಸಂಭವ: ತಂತ್ರಜ್ಞಾನದ ಸಹಾಯದಿಂದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಪೂರೈಕೆಯನ್ನು ವಾಹನದ ವಿಮೆ ಸ್ಥಿತಿಗತಿಯೊಂದಿಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ಇದರ ಪ್ರಕಾರ, ವಿಮೆ ನವೀಕರಿಸದ (Uninsured) ವಾಹನಗಳಿಗೆ ಪೆಟ್ರೋಲ್/ಡೀಸೆಲ್ ನೀಡುವುದನ್ನು ತಡೆಹಿಡಿಯುವ ವ್ಯವಸ್ಥೆ ಬರಲಿದೆ.

ಪೊಲೀಸರ ಕೈಗೆ ಹ್ಯಾಂಡ್‌ಹೆಲ್ಡ್ ಡಿವೈಸ್: ರಾಜ್ಯ ಪೊಲೀಸ್ ಸಿಬ್ಬಂದಿಗೆ ವಾಹನ್ ಪೋರ್ಟಲ್ ಮತ್ತು ವಿಮೆ ಡೇಟಾಬೇಸ್‌ಗೆ ಸಂಪರ್ಕ ಹೊಂದಿರುವ ಮೊಬೈಲ್ ಆ್ಯಪ್‌ಗಳು ಅಥವಾ ಹ್ಯಾಂಡ್‌ಹೆಲ್ಡ್ ಉಪಕರಣಗಳನ್ನು ನೀಡಬೇಕು. ಇದರಿಂದ ಪೊಲೀಸರು ಸ್ಥಳದಲ್ಲೇ ವಾಹನದ ಇನ್ಶೂರೆನ್ಸ್ ಸ್ಟೇಟಸ್ ತಪಾಸಣೆ ನಡೆಸಿ ದಂಡದ ಚಲನ್ ನೀಡಬಹುದು.

ಶೇ. 56ರಷ್ಟು ವಾಹನಗಳಿಗೆ ಇನ್ಶೂರೆನ್ಸ್ ಇಲ್ಲ!

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಮೇಲ್ಮನವಿಯ ವಿಚಾರಣೆ ನಡೆಸುವ ವೇಳೆ ಸುಪ್ರೀಂ ಕೋರ್ಟ್ ಈ ಸಮಗ್ರ ನಿರ್ದೇಶನಗಳನ್ನು ನೀಡಿದೆ. ಸಂಸದೀಯ ಸ್ಥಾಯಿ ಸಮಿತಿಯ ವರದಿಯನ್ನು ಉಲ್ಲೇಖಿಸಿದ ನ್ಯಾಯಾಲಯ, ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಒಟ್ಟು 30.48 ಕೋಟಿ ವಾಹನಗಳ ಪೈಕಿ ಬರೋಬ್ಬರಿ 16.54 ಕೋಟಿ ವಾಹನಗಳಿಗೆ (ಸುಮಾರು ಶೇ. 56ರಷ್ಟು) ಮಾನ್ಯತೆ ಹೊಂದಿರುವ ಇನ್ಶೂರೆನ್ಸ್ ಇಲ್ಲದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.

2024ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ 4.87 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ವಿಮೆ ಇಲ್ಲದ ವಾಹನಗಳಿಂದ ಅಪಘಾತ ಸಂಭವಿಸಿದಾಗ ಸಂತ್ರಸ್ತರು ಹಾಗೂ ಅವರ ಕುಟುಂಬಗಳು ಪರಿಹಾರಕ್ಕಾಗಿ ಅಲೆಯುವಂತಾಗುತ್ತದೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 146ರ ಅಡಿಯಲ್ಲಿ ವಿಮೆ ಕಡ್ಡಾಯಗೊಳಿಸಿರುವುದರ ಮುಖ್ಯ ಉದ್ದೇಶ ಸಂತ್ರಸ್ತರಿಗೆ ತಕ್ಷಣ ಪರಿಹಾರ ಸಿಗಬೇಕು ಮತ್ತು ಅವರು ದೀರ್ಘಕಾಲದ ಕಾನೂನು ಸಮರಕ್ಕೆ ಬೀಳುವುದು ತಪ್ಪಬೇಕು ಎಂಬುದಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

PREV
Read more Articles on
click me!

Recommended Stories

ಗ್ರಾಹಕರ ಒತ್ತಾಯಕ್ಕೆ ಮಣಿದು ಯಮಹಾ ರೇಸ್ ಎಡಿಶನ್, FZ ಸಿರೀಸ್ ಹೊಸ ಅವತಾರದಲ್ಲಿ ಬಿಡುಗಡೆ
ಮೂರು ಅದ್ಭುತ ಫೀಚರ್‌ಗಳೊಂದಿಗೆ ಆ.15ಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಮಹೀಂದ್ರಾ Scorpio N