ಫಾಸ್ಟ್ಯಾಗ್‌ : ಎರಡು ದಿನವಾದ್ರೂ ತಪ್ಪದ ವಾಹನ ಸವಾರರ ಬವಣೆ

Kannadaprabha News   | Asianet News
Published : Jan 18, 2020, 08:26 AM IST
ಫಾಸ್ಟ್ಯಾಗ್‌ : ಎರಡು ದಿನವಾದ್ರೂ ತಪ್ಪದ ವಾಹನ ಸವಾರರ ಬವಣೆ

ಸಾರಾಂಶ

ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ಕೂಡ ವಾಗ್ವಾದಗಳು ಮುಂದುವರಿದಿವೆ. ದುಪ್ಪಟ್ಟು ಶುಲ್ಕ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.

ಬೆಂಗಳೂರು[ಜ.18]: ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ಯಾಗ್‌ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ದುಪ್ಪಟ್ಟು ಶುಲ್ಕ ಪಡೆಯುವ ವಿಚಾರವಾಗಿ ಟೋಲ್‌ ಸಿಬ್ಬಂದಿ ಹಾಗೂ ಚಾಲಕರ ನಡುವೆ ವಾಗ್ವಾದ ಹಾಗೂ ಗೊಂದಲಗಳು ಮುಂದುವರೆದಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಅಳವಡಿಸಿಕೊಂಡ ವಾಹನಗಳಿಗೆ ಫಾಸ್ಟ್ಯಾಗ್‌ ಲೇನ್‌ನಲ್ಲೇ ಸಂಚರಿಸಲು ಅವಕಾಶ ನೀಡುತ್ತಿದೆ. ಫಾಸ್ಟ್ಯಾಗ್‌ ಇಲ್ಲದ ವಾಹನಗಳನ್ನು ಕ್ಯಾಶ್‌ ಲೇನ್‌ನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಿದೆ. ಈ ನಡುವೆ ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಫಾಸ್ಟ್ಯಾಗ್‌ ಲೇನ್‌ನಲ್ಲಿ ಸಂಚರಿಸುತ್ತಿರುವುದರಿಂದ ಟೋಲ್‌ ಸಿಬ್ಬಂದಿ ಕೇಂದ್ರ ಸರ್ಕಾರದ ಆದೇಶದನ್ವಯ ದುಪ್ಪಟ್ಟು ಶುಲ್ಕ ವಸೂಲಿಗೆ ಮುಂದಾಗಿದ್ದಾರೆ. ಇದು ವಾಹನ ಚಾಲಕರು ಹಾಗೂ ಟೋಲ್‌ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಫಾಸ್ಟ್‌ಟ್ಯಾಗ್‌ ಇಲ್ಲದವರಿಗೆ ಕೇಂದ್ರದಿಂದ ಸಿಹಿ ಸುದ್ದಿ..!.

ಅತ್ತಿಬೆಲೆ, ನೆಲಮಂಗಲ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಪ್ಲಾಜಾಗಳಲ್ಲಿ ಶುಕ್ರವಾರ ಫಾಸ್ಟ್ಯಾಗ್‌ ಇಲ್ಲದ ವಾಹನಗಳು ಫಾಸ್ಟ್ಯಾಗ್‌ ಲೇನ್‌ ಬಳಕೆ ಮಾಡಿದಾಗ ಟೋಲ್‌ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಗಲಾಟೆ ನಡೆದಿದೆ. ನಿಯಮದ ಪ್ರಕಾರ ದುಪ್ಪಟ್ಟು ಶುಲ್ಕ ನೀಡಲೇಬೇಕೆಂದು ಟೋಲ್‌ ಸಿಬ್ಬಂದಿ ಪಟ್ಟು ಹಿಡಿದಿದ್ದರಿಂದ ಕೆರಳಿದ ವಾಹನ ಚಾಲಕರು, ದುಪ್ಪಟ್ಟು ಶುಲ್ಕ ನೀಡಲು ಸಾಧ್ಯವಿಲ್ಲ ಎಂದು ವಾಗ್ವಾದಕ್ಕೆ ಮುಂದಾಗಿದ್ದಾರೆ. ಈ ಜಗಳದಲ್ಲಿ ಇತರೆ ವಾಹನಗಳ ಸವಾರರು ಕೆಲಕಾಲ ಕಿರಿಕಿರಿ ಅನುಭವಿಸಿದರು. ಟೋಲ್‌ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಲೇನ್‌ನಲ್ಲೂ ವಾಹನಗಳ ಕ್ಯೂ

ಇನ್ನು ರಾಜ್ಯದ ಟೋಲ್‌ ಪ್ಲಾಜಾಗಳ ಫಾಸ್ಟ್ಯಾಗ್‌ ಲೇನ್‌ಗಳಲ್ಲಿ ಅಳವಡಿಸಿರುವ ಸ್ಕ್ಯಾನರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಶುಕ್ರವಾರವೂ ಮುಂದುವರಿದೆ. ಈ ತಾಂತ್ರಿಕ ಸಮಸ್ಯೆ ಪುನಾರವರ್ತನೆಯಾದ ಪರಿಣಾಮ ಟೋಲ್‌ ಸಿಬ್ಬಂದಿ ಹ್ಯಾಂಡ್‌ ರೀಡರ್‌ ಮೂಲಕ ವಾಹನಗಳ ಫಾಸ್ಟ್ಯಾಗ್‌ ಸ್ಟಿಕ್ಕರ್‌ಗಳನ್ನು ಸ್ಕ್ಯಾನ್‌ ಮಾಡಿದರು. ಇದರಿಂದ ಫಾಸ್ಟ್ಯಾಗ್‌ ಲೇನ್‌ನಲ್ಲೂ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿ ಸವಾರರು ಟೋಲ್‌ ಸಿಬ್ಬಂದಿಯನ್ನು ಶಪಿಸಿಕೊಂಡರು.

ವಿನಾಯಿತಿಗೂ ಕತ್ತರಿ!

ಈ ಹಿಂದೆ ಟೋಲ್‌ ಪ್ಲಾಜಾಗಳಲ್ಲಿ ವಾಹನ ಹೋಗುವ ಹಾಗೂ ಹಿಂದಿರುಗಿ ಬರುವ ಎರಡೂ ಕಡೆಯ ಶುಲ್ಕವನ್ನು ಒಮ್ಮೆಗೆ ಪಾವತಿಸಿದರೆ ಶುಲ್ಕದಲ್ಲಿ ವಿನಾಯಿತಿ ಸಿಗುತ್ತಿತ್ತು. ಅಂದರೆ, ವಾಹನ 24 ತಾಸಿನಲ್ಲಿ ಹಿಂದಿರುಗಬೇಕಿತ್ತು. ಇದೀಗ ಫಾಸ್ಟ್ಯಾಗ್‌ ಲೇನ್‌ನಲ್ಲಿ ಈ ವ್ಯವಸ್ಥೆ ಮುಂದುವರಿದೆ. ಕ್ಯಾಶ್‌ಲೇನ್‌ನಲ್ಲಿ ಮಾತ್ರ ಈ ವ್ಯವಸ್ಥೆ ಇಲ್ಲದಿರುವುದರಿಂದ ಹೋಗುವಾಗ ಎಷ್ಟುಶುಲ್ಕ ಪಾವತಿಸಬೇಕೋ ಹಿಂದಿರುಗುವಾಗಲೂ ಅಷ್ಟೇ ಶುಲ್ಕ ಪಾವತಿಸಬೇಕು. ಇದು ಕ್ಯಾಶ್‌ ಲೇನ್‌ನಲ್ಲಿ ಸಂಚರಿಸುವ ವಾಹನಗಳಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಸ್ಪಷ್ಟನೆ ನೀಡದಿರುವುದು ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಫಾಸ್ಟ್ಯಾಗ್‌ : ದುಪ್ಪಟ್ಟು ಶುಲ್ಕಕ್ಕೆ ತಕರಾರು.

ಟೋಲ್‌ ಪ್ಲಾಜಾಗಳಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳಿವೆ. ದಿನಗಳೆದಂತೆ ಎಲ್ಲವೂ ಸರಿ ಹೋಗಲಿದೆ. ಹೊಸ ವ್ಯವಸ್ಥೆ ಬಂದಾಗ ಇಂತಹ ಲೋಷದೋಷಗಳು ಸಾಮಾನ್ಯ. ಹಂತವಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಉತ್ತಮ ಸೇವೆ ಉತ್ತಮಪಡಿಸಲು ಪ್ರಯತ್ನಿಸಲಾಗುವುದು.

- ಶ್ರೀಧರ್‌, ಪ್ರಧಾನ ವ್ಯವಸ್ಥಾಪಕ, ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿ

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ