ಮರ್ಸಿಡಿಸ್‌ ಸಿ43 AMG-ಸುಭದ್ರ ಸಾವಧಾನ; ದೂರಪ್ರಯಾಣಕ್ಕೆ ತಕ್ಕ ಸಂವಿಧಾನ!

By Web DeskFirst Published Mar 6, 2019, 3:46 PM IST
Highlights

ಮರ್ಸಡಿಸ್ ಸಿ43 AMG ಕಾರು ಭಾರಿ ಸದ್ದು ಮಾಡುತ್ತಿದೆ. ಈ ಕಾರಿನಲ್ಲಿ ಪ್ರಯಾಣ ಅನುಭವ ಹೇಗಿದೆ? ಎಂಜಿನ್, ಕಾರಿನ ತಂತ್ರಜ್ಞಾನ, ಸುರಕ್ಷತೆ ಹೇಗಿದೆ? ಮರ್ಸಿಡಿಸ್‌ ಸಿ43  ಕಾರಿನ ರಿವ್ಯೂವ್ ಇಲ್ಲಿದೆ. 

ಬೆಂಗಳೂರು(ಮಾ.06): ಮರ್ಸಿಡಿಸ್‌ ಸಿ43 ಎಎಂಜಿ ಕಾರು. ಐದೂವರೆ ಸೆಕೆಂಡಿನಲ್ಲಿ ಝೀರೋದಿಂದ ಅರವತ್ತು ಕಿಲೋಮೀಟರ್‌ ಸ್ಪೀಡಿಗೆ ದಾಟಿಕೊಳ್ಳುವ ಸಾಮರ್ಥ್ಯ, ಟಾಪ್‌ ಸ್ಪೀಡು 131 ಮೈಲು, ಎಪ್ಪತ್ತು ಮೈಲಿಯಿಂದ ಶೂನ್ಯಕ್ಕೆ ಬರಲು ಕ್ರಮಿಸುವ ದೂರ ಕೇವಲ 153 ಅಡಿ. ಒಂಬತ್ತು ಸ್ಪೀಡ್‌ ಟ್ರಾನ್ಸ್‌ಮಿಷನ್ಸ್‌, ಟ್ವಿನ್‌ ಟರ್ಬೋ ಇರುವ ಸೆಡಾನ್‌!

ಆದರೆ ನಮ್ಮೂರಿನ ರಸ್ತೆಗಳಲ್ಲಿ ಮಾತ್ರ ಕಾರು ಡುಂಡುಂ ದೇವರ ಹಾಗೆ ಸಾಗುತ್ತದೆ. ಸಣ್ಣ ಸಣ್ಣ ಉಬ್ಬುತಗ್ಗುಗಳಿಗೂ ಈ ನೀಲಿರಾಣಿ ಭಯಂಕರ ಸೆನ್ಸಿಟಿವ್‌. ಹೇಮಮಾಲಿನಿಯ ಕೆನ್ನೆಯಂಥ ರಸ್ತೆಗಿವಳು ಹೇಳಿ ಮಾಡಿಸಿದ ಕನ್ಯಾಕುಮಾರಿ!

ಇದನ್ನೂ ಓದಿ: ಫಾರ್ಮುಲಾ 1 ಕಾರಿಗಿಂತ ವೇಗ- ಮಹೀಂದ್ರ ಹೈಪರ್ ಕಾರು ಅನಾವರಣ!

ಈ ಕಾರಲ್ಲಿ ನಾವು ಹೊರಟದ್ದು ದೂರದ ಪ್ರಯಾಣ. ಒಂದೇ ದಿನದಲ್ಲಿ ಕ್ರಮಿಸಿದ್ದು ಸುಮಾರು ಒಂದೂವರೆ ಸಾವಿರ ಕಿಲೋಮೀಟರ್‌. ಇಂಥ ಕಾರುಗಳು ಹಳೇ ಕುಡುಕನಂತೆ ಪೆಟ್ರೋಲು ಕುಡಿಯುತ್ತವೆ ಎಂದು ನಂಬಿದವರಿಗೆ ಅಚ್ಚರಿಯಾಗುವಂತೆ, ಈ ಕಾರು ಒಳ್ಳೆಯ ಮೈಲೇಜನ್ನೇ ಕೊಟ್ಟಿತು. ಸ್ಪೋರ್ಟ್ಸ್ ಪ್ಲಸ್‌ ಮೋಡ್‌ನಲ್ಲೇ ಘಾಟಿ ರಸ್ತೆ ಹತ್ತಿ ಇಳಿದರೂ 60 ಲೀಟರಿಗೆ ಆರು ನೂರು ಕಿಲೋಮೀಟರ್‌ ಓಡಾಡಿದ್ದಾಯಿತು.

ಈ ಕಾರಲ್ಲಿ ಕೂರುವುದು ಸೌಭಾಗ್ಯ. ಇಳಿಯುವುದು ಮಾತ್ರ ಅವರವರ ಭಾಗ್ಯ. ಕುರ್ಚಿಯಿಂದ ಇಳಿಯುವಾಗ ಸಂಕಟವಾಗುತ್ತದೆ ಎಂದು ರಾಜಕಾರಣಿಗಳು ಹೇಳಬಹುದು. ಈ ಕಾರಿನ ಸೀಟಿನಿಂದ ಇಳಿಯುವುದು ಕೂಡ ಕಷ್ಟವೇ. ಯಾಕೆಂದರೆ ಕಾರು ಬಹುತೇಕ ನೆಲದ ಅಂಚಿಗೇ ಬಂದಿರುತ್ತದೆ. ಹೀಗಾಗಿ ನಾವು ಕಾರಿಂದ ಇಳಿಯುವುದಿಲ್ಲ. ನೆಲದಿಂದ ನೆಲಕ್ಕೇ ಹೆಜ್ಜೆ ಇಡುತ್ತೇವೆ. ಕೊಂಚ ದಪ್ಪ ಇದ್ದವರಿಗಂತೂ ಇದು ಕೂರಲಿಕ್ಕೆ ಬೆಸ್ಟೋ ಬೆಸ್ಟು, ಎದ್ದೇಳಲಿಕ್ಕೆ ಕಷ್ಟೋ ಕಷ್ಟು!

ಇದನ್ನೂ ಓದಿ: ಸಾವಿರಾರು ವಾಹನಗಳು ಗುಜರಿಗೆ!: ಯಾಕೆ? ಯಾವ ವಾಹನಗಳು ಇಲ್ಲಿದೆ ಮಾಹಿತಿ!

ಕಾರಿನ ಬಗ್ಗೆ ಎರಡು ಮಾತಾಡುವಂತಿಲ್ಲ. ನಮ್ಮ ಕಾರಲ್ಲಿ ಕೂತವರು ಪಕ್ಕಾ ಇನ್ನೋವಾ ಅಭಿಮಾನಿಗಳೇ. ಹಿಂದಾಗಡೆ ಕೂತವರಿಗೆ ಕಾಲು ಚಾಚಲಿಕ್ಕೆ ಒಂಚೂರು ಜಾಗ ಬೇಕಿತ್ತು. ಸ್ಟೆಪ್ನಿ ಟೈರ್‌ ಇಡಲಿಕ್ಕೆ ಬೂಟ್‌ಸ್ಪೇಸೇ ಬೇಕಿತ್ತಾ, ಒಂಚೂರು ಜಾಸ್ತಿ ಕುಲುಕುತ್ತೆ ಅಲ್ವೇ ಎಂಬಿತ್ಯಾದಿ ಆಕ್ಷೇಪಗಳ ನಡುವೆಯೂ ಅಲ್ಲಲ್ಲಿ ಮೆಚ್ಚುಗೆಯ ಮಾತುಗಳೂ ಬಂದವು. ಹೇಳಿಕೇಳಿ ಇದು ಬೈಟರ್ಬೋ 3.0, ವಿ6 ಮಾದರಿಯ ಕಾರು. ಐದು ನಿಮಿಷದಲ್ಲಿ ನೂರು ಕಿಲೋಮೀಟರ್‌ ತಲುಪುವಷ್ಟೇ ಸವಾಧಾನವಾಗಿ ನೂರರಿಂದ ಝೀರೋ ಕೂಡ ತಲುಪಬಲ್ಲದು. ಫೋರ್‌ ವೀಲ್‌ ಡ್ರೈವ್‌ ಆಗಿದ್ದರಿಂದ ಏರಿಕೆಗೂ ಇಳಿಕೆಗೂ ಧಾವಂತವಿಲ್ಲ. ಹೊರಗಿನಿಂದ ನೋಡುವುದಕ್ಕಂತೂ ಸೊಗಸಾದ ಕಾರು. ಡೈಮಂಡ್‌ ಮೆಷ್‌, ಹೊಳೆವ ನೀಲಿ ಬಣ್ಣ, ಚೆಂದದ ಮುಖಾರವಿಂದ, ಸೆಳೆಯುವ ಹಿಂಭಾಗ!

ಇದನ್ನೂ ಓದಿ: 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಲಗ್ಗೆ ಇಟ್ಟ ಟಾಟಾ ಮೋಟಾರ್ಸ್!

ನಾಲ್ಕು ಮಂದಿಗೆ ಆರಾಮು, ಐವರಿಗೂ ಸಾಲುವಷ್ಟುಜಾಗ. ಒಳಗೆ ತಂಪಡಗಿದೆ ಎನ್ನುವುದನ್ನು ಸೂಚಿಸಲಿಕ್ಕೆ ಮಂದವರ್ಣದ ವಿನ್ಯಾಸ. ಭದ್ರತೆಯ ಭಾವ ಹುಟ್ಟಿಸುವ ಕಾರು. ಕಂಫರ್ಟ್‌ ಮೋಡ್‌ನಿಂದ ಸ್ಪೋರ್ಟ್ಸ್ ಪ್ಲಸ್‌ ಮೋಡ್‌ಗೆ ಹೋಗುತ್ತಿದ್ದಂತೆ ಕಾರಿನ ಸದ್ದು ಬದಲಾಗುತ್ತದೆ. ಎಷ್ಟೇ ವೇಗದಲ್ಲಿ ಇದ್ದರೂ ಬ್ರೇಕ್‌ ಮುಟ್ಟುತ್ತಿದ್ದಂತೆ ಇದ್ದಕ್ಕಿದ್ದಂತೆ ನಿಂತುಬಿಡುವ ಕಾರಿನೊಳಗೆ ವೇಗಕ್ಕೆ ಅಂಜಬೇಕಿಲ್ಲ. ವೇಗವಾಗಿ ಸಾಗುವಾಗ ಕಾರನ್ನು ಅಡ್ಡಾದಿಡ್ಡಿ ಓಡಿಸುವುದೂ ಕಷ್ಟವಲ್ಲ. ಸ್ಟಿಯರಿಂಗ್‌ ಚಕ್ರ ಮೃದು ಮತ್ತು ಮಧುರ.

ನಾವು ವಾಪಸ್ಸು ಬರುವ ಹಾದಿಯಲ್ಲಿ ಅಲ್ಲಲ್ಲಿ ಹಂಪುಗಳು. ರಾಷ್ಟ್ರೀಯ ಹೆದ್ದಾರಿ. ರಾತ್ರಿಯ ಪಯಣ. ಕಾರು ನಿಧಾನಿಸುವಷ್ಟುದೊಡ್ಡ ಉಬ್ಬೂ ಅಲ್ಲ, ಅದರ ಮೇಲೆ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಸಣ್ಣ ಸದ್ದು. ಅದಾಗಿ ಸುಮಾರು ದೂರ ಕ್ರಮಿಸುತ್ತಿದ್ದಂತೆ ಒಂದು ಸೂಚನೆ. ಮುಂಭಾಗದ ಬಲ ಟೈರಿನಲ್ಲಿ ಗಾಳಿಯಿಲ್ಲ. ಇಳಿದು ನೋಡಿದರೆ ಟೈರು ಕಿತ್ತುಕೊಂಡು ಬಂದಿದೆ. ಹಾಗಿದ್ದರೂ ಕಾರು 120 ಕಿಲೋಮೀಟರ್‌ ವೇಗದಲ್ಲಿ ಏನೂ ಆಗದಂತೆ ಸಾಗುತ್ತಿತ್ತು. ಅದು ಇದರ ಶಕ್ತಿ.

ಇದನ್ನೂ ಓದಿ: ಬುಲೆಟ್ ಪ್ರೂಫ್,ಬಾಂಬ್ ಪ್ರೊಟೆಕ್ಷನ್ - ರೇಂಜ್ ರೋವರ್ ಕಾರು ಬಿಡುಗಡೆಗೆ ರೆಡಿ!

ಟೈರು ಬದಲಾಯಿಸುವುದು ಕೂಡ ಸುಲಭವೇ. ಸ್ಟೆಪ್ನಿ ಟೈರು ಆದಷ್ಟುಬೇಗ ಬದಲಾಯಿಸಬೇಕು ಅನ್ನುವಂತೆ ಮೂಲ ಟೈರಿಗಿಂತ ತೆಳುವಾಗಿತ್ತು. ಅದಕ್ಕೆ ಸೆನ್ಸರ್‌ ಇರಲಿಲ್ಲ. ಸ್ಟೆಪ್ನಿ ಟೈರು ಹಾಕಿ ಓಡಿಸುತ್ತಿದ್ದಷ್ಟುಹೊತ್ತೂ ಸೆನ್ಸರ್‌ ನಾಪತ್ತೆ ಎಂಬ ಸೂಚನೆ ಬರುತ್ತಲೇ ಇತ್ತು.

ರಾತ್ರಿ ಪಯಣಿಸುವ ಹೊತ್ತಲ್ಲಿ ಕೊಂಚ ನಿದ್ದೆಗಣ್ಣಾದರೆ, ಸ್ಟಿಯರಿಂಗ್‌ ವೀಲ್‌ ಮೇಲಿನ ಹಿಡಿತ ಸಡಿಲಾದರೆ ಪಕ್ಕದಲ್ಲಿ ಕೂತ ಮನೆಯಾಕೆ ಆಡುವ ಮಾತನ್ನು ಕಾರೇ ಆಡುತ್ತದೆ. ಮೊದಲು ಕಾರು ಸೈಡಿಗೆ ಹಾಕಿ ಕಾಫಿ ಕುಡೀರಿ, ನೀವು ಸುಸ್ತಾಗಿದ್ದೀರಿ ಅಂತ ಹೇಳುತ್ತದೆ.

ಆ ಮಟ್ಟಿಗೆ ಇದು ಸೇಫೆಸ್ಟ್‌ ಕಾರು. ಪ್ರಯಾಣವೂ ದುಬಾರಿ ಅಲ್ಲ. ಅಂದ ಹಾಗೆ ಇದರ ಬೆಲೆ ಎಕ್ಸ್‌ ಷೋ ರೂಮ್‌ 77.72 ಲಕ್ಷ. ಮಿಕ್ಕಿದ್ದು ನಿಮ್ಮ ಸುಖ-ದುಃಖ.

click me!