ಸಾವಿರಾರು ವಾಹನಗಳು ಗುಜರಿಗೆ!: ಯಾಕೆ? ಯಾವ ವಾಹನಗಳು ಇಲ್ಲಿದೆ ಮಾಹಿತಿ!

By Web DeskFirst Published Mar 6, 2019, 8:07 AM IST
Highlights

ಮುದಿ ವಾಹನಗಳಿಗೆ ಸರ್ಕಾರದ ನಿಷೇಧ!| 15 ವರ್ಷ ಮೀರಿದ ವಾಹನಕ್ಕೆ ಅನ್ವಯ| ಆಟೋ, ಕಾರು, ಟೆಂಪೋ, ಬಸ್‌ನಂತಹ ವಾಹನಕ್ಕೆ ನಿಷೇಧ| ರಾಜ್ಯದ 54 ಸಾವಿರ ಪ್ರಯಾಣಿಕರ ವಾಹನಗಳು ಗುಜರಿಗೆ?

ಬೆಂಗಳೂರು[ಮಾ.06]: ರಾಜ್ಯದಲ್ಲಿ 15 ವರ್ಷದ ಮೀರಿದ ಪ್ರಯಾಣಿಕ ವಾಹನಗಳನ್ನು ನಿಷೇಧಿಸಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ 15 ವರ್ಷ ಮೀರಿದ ಸುಮಾರು 54 ಸಾವಿರ ಪ್ರಯಾಣಿಕ ವಾಹನಗಳು ಗುಜರಿ ಸೇರಲಿವೆ.

ಈ ಸುತ್ತೋಲೆ ಅನ್ವಯ ಇನ್ನು ಮುಂದೆ ರಾಜ್ಯದಲ್ಲಿ 15 ವರ್ಷ ಮೀರಿದ ಸ್ಟೇಜ್‌ ಕ್ಯಾರಿಯೇಜ್‌, ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳು, ಶಾಲಾ-ಕಾಲೇಜು ವಾಹನಗಳು, ಟೆಂಪೋ, ಆಟೋ, ಕಾರು (ವೈಟ್‌ ಬೋರ್ಡ್‌ ಹೊರತುಪಡಿಸಿ), ಮ್ಯಾಕ್ಸಿಕ್ಯಾಬ್‌ ಮೊದಲಾದ ಪ್ರಯಾಣಿಕ ವಾಹನಗಳ ಕಾರ್ಯಾಚರಣೆಗೆ ಅವಕಾಶವಿಲ್ಲ. ಮಾಲಿಕರು ಈ ಅವಧಿ ಮೀರಿದ ವಾಹನಗಳನ್ನು ಗುಜರಿಗೆ ಹಾಕಿ ಬಳಿಕ ಹಳೆ ರಹದಾರಿಯಲ್ಲಿ ಹೊಸ ವಾಹನ ಖರೀದಿಸಿ ಕಾರ್ಯಾಚರಣೆ ಮಾಡಬೇಕು.

ಮೋಟಾರು ವಾಹನಗಳ ಕಾಯ್ದೆ ಹಾಗೂ ನಿಯಮಗಳ ಅನ್ವಯ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಮತ್ತು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಓ)ಗಳಿಂದ ಪ್ರಯಾಣಿಕರ ವಾಹನಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ಸಂದರ್ಭದಲ್ಲಿ ವಾಹನಗಳ ವಯೋಮಿತಿ ಷರತ್ತನ್ನು ಗಂಭೀರವಾಗಿ ಪರಿಗಣಿಸದಿರುವುದು ಕಂಡುಬಂದಿದೆ. ಹಾಗಾಗಿ ತಾಂತ್ರಿಕವಾಗಿ ದುರ್ಬಲವಾಗಿರುವ ಮತ್ತು ರಸ್ತೆಗಳಲ್ಲಿ ಸಂಚರಿಸಲು ಯೋಗ್ಯವಲ್ಲದ ವಾಹನಗಳು ಕೂಡ ರಹದಾರಿ (ಪರ್ಮಿಟ್‌) ಪಡೆದು ಕಾರ್ಯಾಚರಣೆ ಮಾಡುತ್ತಿವೆ. ಇದರಿಂದ ಮಾರಾಣಾಂತಿಕ ಅಪಘಾತಗಳು ಮತ್ತು ಅವಘಡಗಳು ಸಂಭವಿಸುತ್ತಿವೆ. ಇಂತಹ ವಾಹನಗಳಲ್ಲಿ ಪ್ರಯಾಣಿಸುವ ಅಮಾಯಕ ಪ್ರಮಾಣಿಕರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿವೆ.

ಈ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನಗಳಿಗೆ ಅದರಲ್ಲೂ ವಿಶೇಷವಾಗಿ ಸಾರ್ವಜನಿಕರು ಹೆಚ್ಚು ಪ್ರಯಾಣಿಸುವ ಸ್ಟೇಜ್‌ ಕ್ಯಾರಿಯೇಜ್‌ ಮತ್ತು ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ವಾಹನಗಳಿಗೆ ಮೂಲ ದಿನಾಂಕದಿಂದ 15 ವರ್ಷಗಳವರೆಗೆ ವಯೋಮಿತಿ ವಿಧಿಸಿ ರಹದಾರಿ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ ರಹದಾರಿ ಪಡೆದಿರುವ ವಾಹನಗಳಿಗೆ ರಹದಾರಿ ನವೀಕರಣ ಸಂದರ್ಭದಲ್ಲಿ ವಾಹನದ ವಯೋಮಿತಿ ಪರಿಶೀಲಿಸಬೇಕು. ಒಂದು ವೇಳೆ 15 ವರ್ಷದ ವಯೋಮಿತಿ ಮೀರಿದ್ದರೆ ವಾಹನ ಬದಲಾಯಿಸಲು ಸೂಚಿಸಿ, ನವೀಕರಣ ತಿರಸ್ಕರಿಸಬೇಕು ಎಂದು ಸರ್ಕಾರದ ಸುತ್ತೋಲೆಯಲ್ಲಿ ಆರ್‌ಟಿಎ ಮತ್ತು ಆರ್‌ಟಿಓಗಳಿಗೆ ಖಡಕ್‌ ಸೂಚನೆ ನೀಡಲಾಗಿದೆ.

ಮಂಡ್ಯದ ಘಟನೆ ಬಳಿಕ ಎಚ್ಚೆತ್ತ ಸರ್ಕಾರ:

ಕಳೆದ ನವೆಂಬರ್‌ 20ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಖಾಸಗಿ ಬಸ್‌ವೊಂದು ನಾಲೆಗೆ ಬಿದ್ದು 30 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಆ ಬಸ್‌ ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ತಾಂತ್ರಿಕವಾಗಿ ದುರ್ಬಲವಾಗಿತ್ತು. ಈ ಘಟನೆ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ 15 ವರ್ಷ ಮೀರಿದ ಪ್ರಯಾಣಿಕ ವಾಹನಗಳ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿರುವ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.’

ಯಾವ ವಾಹನಗಳು?

15 ವರ್ಷ ಮೀರಿದ ಸ್ಟೇಜ್‌ ಕ್ಯಾರಿಯೇಜ್‌, ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳು, ಶಾಲಾ-ಕಾಲೇಜು ವಾಹನಗಳು, ಟೆಂಪೋ, ಆಟೋ, ಕಾರು (ವೈಟ್‌ ಬೋರ್ಡ್‌ ಹೊರತುಪಡಿಸಿ), ಮ್ಯಾಕ್ಸಿಕ್ಯಾಬ್‌

ಖಾಸಗಿ ಬಸ್‌ಗಳೇ ಹೆಚ್ಚು

ರಾಜ್ಯದಲ್ಲಿ 15 ವರ್ಷ ಮೀರಿದ ಸುಮಾರು 54 ಸಾವಿರ ಪ್ರಯಾಣಿಕ ವಾಹನಗಳ ಪೈಕಿ 13,600 ಖಾಸಗಿ (ಕಾಂಟ್ರಾಕ್ಟ್, ಸ್ಟೇಜ್‌ ಕ್ಯಾರಿಯೇಜ್‌) ಬಸ್‌ಗಳಿವೆ. ಬೆಂಗಳೂರು ನಗರದಲ್ಲಿ 13,125 ಸ್ಟೇಜ್‌ ಕ್ಯಾರಿಯೇಜ್‌, 442 ಕಾಂಟ್ರಾಕ್ಟ್ ಕ್ಯಾರಿಯೇಜ್‌ ಬಸ್‌ಗಳಿವೆ. ಅಲ್ಲದೆ, 4,071 ಖಾಸಗಿ ಶಿಕ್ಷಣ ಸಂಸ್ಥೆ ಬಸ್‌ಗಳು, 1,430 ಖಾಸಗಿ ಸೇವಾ ವಾಹನಗಳು ಸೇರಿದಂತೆ ಒಟ್ಟು 21,096 ಪ್ರಯಾಣಿಕ ವಾಹನಗಳು 15 ವರ್ಷ ಮೀರಿವೆ.

-ಮೋಹನ್‌ ಹಂಡ್ರಂಗಿ

click me!