
ರಾಮಾಯಣದಲ್ಲಿ ಸೇರಿದಂತೆ ಹಿಂದೂ ಧರ್ಮದ ಪುರಾಣಗಳಲ್ಲಿ ರಾವಣ ಖಳನಾಯಕನಾಗಿಯೇ ಚಿತ್ರಿಸಲ್ಪಟ್ಟಿದ್ದಾನೆ, ಇದರಲ್ಲಿ ಸಂದೇಹವಿಲ್ಲ. ಶ್ರೀರಾಮನ ಮಡದಿಯನ್ನು ಮೋಸದಿಂದ ಕದ್ದುಕೊಂಡು ಹೋದದ್ದು, ಇನ್ನೂ ಹಲವಾರು ನಾರಿಯರ ಶೀಲಭಂಗ ಮಾಡಿದ್ದು, ತಂಗಿಯ ಗಂಡನನ್ನು ನಿಷ್ಕರುಣೆಯಿಂದ ಕೊಂದದ್ದು, ದೇವತೆಗಳನ್ನು ಸಾಯಬಡಿದು ಸ್ವರ್ಗವನ್ನು ಕೈವಶ ಮಾಡಿಕೊಂಡದ್ದು- ಎಲ್ಲವೂ ಖಳನಾಯಕನ ಗುಣವೇ ಸರಿ. ಆದರೆ ಅವನಲ್ಲಿ ಒಳ್ಳೆಯ ಗುಣಗಳು ಹಲವಾರು ಇವೆ. ಆ ಗುಣಗಳನ್ನು ನೀವು ಪಾಲಿಸಿ, ಅದರಿಂದ ಬಾಳಿನಲ್ಲಿ ಯಶಸ್ಸನ್ನು ಹೊಂದಿರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಾದರೆ ರಾವಣನಲ್ಲಿಯೂ ಇರುವ ಒಳ್ಳೆಯ ಗುಣಗಳು ಯಾವುವು?
ತಪಸ್ಸಿನ ಛಲ
ರಾವಣ ಸಾಮಾನ್ಯನಲ್ಲ. ಅವನ ತಪಸ್ಸಿನ ಶಕ್ತಿ ಅದ್ಬುತ. ಒಮ್ಮೆ ಅವನು ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾನೆ. ಸಾವಿರಾರು ವರ್ಷ ತಪಸ್ಸಿಗೆ ಬ್ರಹ್ಮನು ಒಲಿಯದೇ ಹೋದಾಗ, ತನ್ನ ಹತ್ತು ತಲೆಗಳಲ್ಲಿ ಒಂದೊಂದನ್ನೇ ಚಿವುಟಿ ಚಿವುಟಿ ಬೆಂಕಿಗೆ ಅರ್ಪಿಸುತ್ತಾ ಜಪಿಸುತ್ತಾನೆ. ಇದರಿಂದ ಬ್ರಹ್ಮ ಪ್ರಸನ್ನನಾಗಿ ಅವನಿಗೆ ವರಗಳನ್ನು ಕೊಡುತ್ತಾನೆ. ಯಾವುದೇ ಕೆಲಸ ಈಡೇರಬೇಕಾದರೂ ತಪಸ್ಸಿನಂಥ ಛಲ ಬೇಕು.
ಆಳವಾದ ಜ್ಞಾನ
ರಾವಣನು ವೇದಗಳು, ಶಾಸ್ತ್ರಗಳು, ಆಯುರ್ವೇದ ಮತ್ತು ರಾಜಕೀಯ ವಿಜ್ಞಾನದಲ್ಲಿ ಪರಿಣತಿಯನ್ನು ಹೊಂದಿರುವ ವಿದ್ವಾಂಸನಾಗಿದ್ದ. ಶಿವನನ್ನು ಸ್ತುತಿಸುವ ಸ್ತೋತ್ರವಾದ ಶಿವ ತಾಂಡವ ಸ್ತೋತ್ರವನ್ನು ರಚಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ. ಒಮ್ಮೆ ಅವನು ಶಿವನ ಕುರಿತು ತಪಸ್ಸು ಮಾಡುತ್ತಾನೆ. ಶಿವನು ಒಲಿಯುವುದಿಲ್ಲ. ಆಗ ರಾವಣ ಕೈಲಾಸದ ಅಡಿಗೇ ಕೈಹಾಕಿ ಅದನ್ನು ಅಲ್ಲಾಡಿಸುತ್ತಾನೆ. ಶಿವ ಕೈಲಾಸವನ್ನು ಮೆಟ್ಟಿ ಒತ್ತಿದಾಗ ರಾವಣನ ಕೈ ಅದರಡಿ ಸಿಲುಕಿಕೊಳ್ಳುತ್ತಾನೆ. ಆಗ ಆಗುವ ಯಾತನೆಯನ್ನೇ ರಾವಣ ಸಾಮವೇದವನ್ನಾಗಿ ಹಾಡಿ, ಶಿವನನ್ನು ಪ್ರಸನ್ನೀಕರಿಸಿಕೊಳ್ಳುತ್ತಾನೆ.
ಬಲವಾದ ನಾಯಕತ್ವ ಗುಣ
ಅವನು ಲಂಕೆಯ ಪ್ರಬಲ ಮತ್ತು ನ್ಯಾಯಯುತ ಆಡಳಿತಗಾರನಾಗಿದ್ದ. ವಿಷ್ಣುಚಕ್ರಕ್ಕೆ ಬೆದರಿ ಪಾತಾಳದಲ್ಲೋ ಸಮುದ್ರದ ಆಳದಲ್ಲೋ ಅವಿತು ಕುಳಿತಿದ್ದ ರಾಕ್ಷಸರನ್ನು ಒಟ್ಟು ಸೇರಿಸಿ ಅವರಿಗೆ ನಾಯಕತ್ವ ನೀಡಿ ಲಂಕೆಯಲ್ಲಿ ಅವರನ್ನೆಲ್ಲ ಬಲಿಷ್ಠವಾದ ಸೈನ್ಯ ಕಟ್ಟಿದ. ಅವರನ್ನು ಕರೆದುಕೊಂಡು ಸ್ವರ್ಗದ ಮೇಲೆ ದಾಳಿ ಮಾಡಿ ದೇವತೆಗಳನೇ ಗೆದ್ದ. ಅವನು ಪರಾಕ್ರಮ ಮತ್ತು ರಾಜ್ಯವನ್ನು ಪರಿಣಾಮಕಾರಿಯಾಗಿ ಆಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದ.
ಶಿವನ ಮೇಲಿನ ಭಕ್ತಿ
ರಾವಣನು ಶಿವನ ಕಟ್ಟಾ ಭಕ್ತನಾಗಿದ್ದ. ತನ್ನ ಭಕ್ತಿಗೆ ಸಾಕ್ಷಿಯಾಗಿ ತನ್ನ ಹತ್ತು ತಲೆಗಳನ್ನು ಶಿವನಿಗೆ ಅರ್ಪಿಸಿದನು ಎಂದೂ ಕತೆಯಿದೆ. ಪ್ರತಿದಿನ ಶಿವಪೂಜೆಯಿಲ್ಲದೆ ದಿನವನ್ನು ಆರಂಭಿಸುತ್ತಿರಲಿಲ್ಲ. ಶಿವನನ್ನು ಆರಾಧಿಸಿ ಚಂದ್ರಹಾಸ ಎಂಬ ಅಪರಿಮಿತ ಶಕ್ತಿಯ ಖಡ್ಗವನ್ನು ಪಡೆದಿದ್ದ. ಶಿವನನ್ನು ಪೂಜಿಸಿ ಆತ್ಮಲಿಂಗವನ್ನು ಪಡೆದ.
ಜ್ಯೋತಿಷ್ಯದ ಪ್ರಕಾರ ಈ 4 ರಾಶಿಯವರು ಬೇಗ ಹಣ ಸಂಪಾದನೆ ಮಾಡ್ತಾರೆ!
ನಿರ್ಭೀತ ಯೋಧ
ಅವನು ಯುದ್ಧದಲ್ಲಿ ರಾಮನನ್ನು ಎದುರಿಸಿದ. ಅದರ ಸಂಭಾವ್ಯ ಪರಿಣಾಮಗಳನ್ನು ತಿಳಿದಿದ್ದರೂ ತನ್ನ ತಾತ್ವಿಕ ಬದ್ಧತೆ, ಧೈರ್ಯ ಮತ್ತು ತನ್ನ ನಂಬಿಕೆಗಳಿಗಾಗಿ ಹೋರಾಡುವ ಧೀರತೆಯನ್ನು ಪ್ರದರ್ಶಿಸಿದ. ರಾಕ್ಷಸರೆಲ್ಲ ಒಬ್ಬೊಬ್ಬರೇ ನಾಶವಾಗುತ್ತ ಬಂದರೂ ರಾಮನನ್ನು ಎದುರಿಸುವ ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ.
ಸಹೋದರಿಯ ರಕ್ಷಕ
ರಾಮ- ಲಕ್ಷ್ಮಣರು ರಾವಣನ ಸಹೋದರಿ ಶೂರ್ಪನಖಿಯ ಕಿವಿ ಮೂಗುಗಳನ್ನು ಕತ್ತರಿಸಿದರು. ಅದನ್ನು ಕೇಳಿದ ರಾವಣ ಕ್ರುದ್ಧನಾದ. ಆದರೆ ತನ್ನ ಸಾಹೋದರ್ಯ, ಕೌಟುಂಬಿಕ ನಿಷ್ಠೆ ಮತ್ತು ಆಕೆಯ ರಕ್ಷಣೆಯ ಪ್ರಜ್ಞೆಯನ್ನು ಪ್ರದರ್ಶಿಸಿದ. ಅದಕ್ಕಾಗಿ ಸೀತೆಯನ್ನು ಅಪಹರಿಸಿ, ರಾಮ- ಲಕ್ಷಣರನ್ನು ಶಿಕ್ಷಿಸಲು ಮುಂದಾದ.
ಯಾವ ಮದುವೆ ಸ್ಟ್ರಾಂಗ್? ಲವ್ ಮ್ಯಾರೇಜ್ ಅಥವಾ ಅರೆಂಜ್?