
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆಗೆ ಪಾಯ ಅಗೆಯುವಾಗ ನಿಧಿ ಸಿಕ್ಕಿದ್ದು, ಇದೀಗ ಪುರಾತತ್ವ ಇಲಾಖೆಯವರು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆಯೇ ಅಲ್ಲಿ ಘಟಸರ್ಪ ಕಾಣಿಸಿಕೊಂಡ ವರದಿಯೂ ಆಗಿದೆ. ಅಷ್ಟಕ್ಕೂ ಹಾವಿಗೆ ಭಾವನೆಗಳಿರುತ್ತಾ?
ಹಿಂದು ಪುರಾಣಗಳಲ್ಲಿ ಪವಾಡಗಳೇ ಮನುಷ್ಯನನ್ನು ರಕ್ಷಿಸಿದ ಕಥೆಗಳನ್ನು ಕೇಳಿದ್ದೇವೆ. ಅದರಲ್ಲಿಯೂ ವಿಶೇಷವಾಗಿ ಹಲವು ಸಂದರ್ಭಗಳಲ್ಲಿ ಹಾವುಗಳು ಇಂಥ ಮಿರಾಕಲ್‌ಗೆ ಸಾಕ್ಷಿಯಾಗಿದ್ದಿವೆ. ಹಾವಿರುವೆಡೆ ನಿಧಿಯ ನಿಕ್ಷೇಪ ಕಂಡಿರುವ ಅನೇಕ ಘಟನೆಗಳು ನಮ್ಮಲ್ಲಾಗಿವೆ. ಅಷ್ಟೇ ಅಲ್ಲ ದೇವರು, ನಿಧಿಯನ್ನು ಹಾವುಗಳು ರಕ್ಷಿಸುತ್ತವೆ. ಹಾಗಾಗಿ ಭಾರತದ ಅನೇಕ ದೇವಸ್ಥಾನಗಳಲ್ಲಿರುವ ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ವಜ್ರಾಭರಣಗಳನ್ನು ಯಾರಿಗೂ ಕೊಳ್ಳೆ ಹೊಡೆಯಲು ಕಷ್ಟ ಎನ್ನುವ ನಂಬಿಕೆ ಭಾರತೀಯರದ್ದು.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬುದೌನ್ ಎಂಬ ಹಳ್ಳಿಯಲ್ಲಿ ಒಂದೆರಡು ವರ್ಷಗಳ ಹಿಂದೆ ನಡೆದ ಘಟನೆಯೊಂದು ಎಂಥವರನ್ನೂ ವಿಸ್ಮಯವಾಗಿಸುವಂತಿತ್ತು. ಹಾವು ಕಂಡ್ರೆ ಕಲ್ಲು ಹೊಡೆಯುವ ಮಂದಿಗೆ ಕಣ್ತೆರೆಸುವ ಘಟನೆಯೊಂದು ನಡೆದಿದ್ದು, ಹಾವಿಗೂ ಹೃದಯ ಶ್ರೀಮಂತಿಕೆ ಇದೆ ಎಂಬುದನ್ನು ತೋರಿಸಿದ್ದು. ಯಾರೋ ಪಾಪಿಗಳು 20 ಅಡಿ ನೀರಿಲ್ಲದ ಬಾವಿಗೆ ನವಜಾತ ಶಿಶುವೊಂದನ್ನು ಎಸೆದು ಹೋಗಿದ್ದು. ಅದನ್ನು ಕಾಪಾಡಿದ್ದು ನಾಗರಹಾವು. ರಾತ್ರಿ ಇಡೀ ಆ ಹೊಟ್ಟೆಗೆ ಸುತ್ತಿಕೊಂಡ ಮಗುವಿನ ಜೀವ ಉಳಿಸಿದೆ ಹಾವು.
ಈ ಸ್ಟೋರಿ ಓದಿದ್ರೆ ಯಾವುದೋ ಸಿನಿಮಾ ನೋಡಿದ ಅನುಭವ ಆಗಲಿದೆ. ಆದರೆ ಮೂವಿ ಕಥೆಯಲ್ಲ. ನೈಜ ಪವಾಡ ಸದೃಶ ಸತ್ಯಕಥೆ. ಬುದೌನ್ ಎಂಬ ಪುಟ್ಟ ಗ್ರಾಮದ ರೈತ ಪ್ರೇಮ ರಾಜ್- ಸೌಮ್ವತಿ ದೇವಿಗೆ ಅಚ್ಚರಿಯೊಂದು ಕಾದಿತ್ತು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ದಂಪತಿಗೆ ಮಗುವಿನ ಅಳು ಕೇಳಿಸಿತು. ಮಗುವಿನ ಧ್ವನಿ ಕೇಳಿಸಿಕೊಂಡು ಆ ದಿಕ್ಕಲಲ್ಲೇ ಹೊರಟವರಿಗೆ ತಮ್ಮದೇ ಜಮೀನನ ಹಾಳುಬಿದ್ದ ಬಾವಿಯಲ್ಲಿ ಮಗು ಕಂಡಿದೆ.
20 ಅಡಿ ಆಳದ ಈ ಬಾವಿಯ ತುಂಬೆಲ್ಲ, ಮುಳ್ಳು, ಗಿಡ ಗಂಟಿಗಳು. ಬಾವಿಯೊಳಗೆ ಇಳಿಯುವುದೂ ಕಷ್ಟವೇ ಆಗಿತ್ತು. ಅಕ್ಕಪಕ್ಕದ ಜನರ ನೆರವು ಪಡೆದ ಪ್ರೇಮ್ರಾಜ್, ಹಗ್ಗ ಕಟ್ಟಿಕೊಂಡು ಬಾವಿಯೊಳಗೆ ಇಳಿದರು. ಬಾವಿ ತಳಕ್ಕೆ ಇಳಿಯುತ್ತಿದ್ದಂತೆ ಅಲ್ಲಿನ ದೃಶ್ಯ ಕಂಡು ಕ್ಷಣ ಬೆಚ್ಚಿಬಿದ್ದರು ರೈತ ಪ್ರೇಮ ರಾಜ್. ಅಲ್ಲಿ ಕಂಡಿದ್ದು ನೋಡಿ ಹೃದಯವೇ ಬಾಯಿಗೆ ಬಂದಂತಾಗಿತ್ತು. ಅಳುತ್ತಿದ್ದ ನವಜಾತ ಗಂಡು ಶಿಶುವಿನ ಹೊಟ್ಟೆ ಸುತ್ತಿಕೊಂಡ ಹಾವು ಹೆಡೆ ಎತ್ತಿ ಕುಳಿತಿತ್ತು.
ಪ್ರೇಮರಾಜ್ ಒಮ್ಮೆ ದಂಗಾದರು. ಆದರೆ ಅವರಿಗೆ ಮಗುವಿನ ಪ್ರಾಣ ರಕ್ಷಿಸಿಸುವುದೇ ಮೊದಲ ಆದ್ಯತೆ ಆಗಿತ್ತು. ಗಾಬರಿಯಾದರೂ ಬೇರೆ ದಾರಿ ಎಲ್ಲಿತ್ತು? ಮಗು ಬಿಟ್ಟು ಬರಲಿಲ್ಲ. ಹಾವನ್ನು ಓಡಿಸುವುದೂ ಸುಲಭವಾಗಿರಲಿಲ್ಲ. ಕ್ಷಣ ಹೊತ್ತು ಪ್ರೇಮರಾಜ್ ಸುಮ್ಮನೆ ನಿಂತರು. ರಾತ್ರಿ ಇಡೀ ಮಗುವಿನ ಕಾವಲಿಗೆ ನಿಂತಿದ್ದ ಹಾವು, ಪ್ರೇಮರಾಜ್ ನೋಡುತ್ತಿದ್ದಂತೆ, ಮಗು ಬಿಟ್ಟು ನಿಧಾನವಾಗಿ ಸರಿದು ಹೋಯ್ತು. ಬಾವಿಯಲ್ಲೇ ಇದ್ದ ಬಿಲದ ಒಳಗೆ ನುಸುಳಿ ಕಣ್ಮರೆಯಾಯ್ತು. ಹಾವು ಮರೆಯಾಗುತ್ತಿದ್ದಂತೆ ಮಗುವನ್ನು ಎತ್ತಿಕೊಂಡ ಪ್ರೇಮ್ರಾಜ್ ಬಾವಿಯಿಂದ ಮೇಲೆ ಬಂದರು.
ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳ ಜನರೂ ಬಾವಿಯತ್ತ ಧಾವಿಸಿದ್ರು. ಬಾವಿಗೆ ಎಸೆದಿದ್ದ ಮಗುವನ್ನು ನಾಗರಹಾವು ಕಾಪಾಡಿದೆ ಎಂದು ನಂಬಿದ್ರು. 20 ಅಡಿ ಮೇಲಿನಿಂದ ಎಸೆದರೂ ಮಗುವಿಗೆ ಏನೂ ಆಗಿಲ್ಲ ಅಂದರೆ, ಹಾವೇ ಮಗುವಿನ ಜೀವ ಉಳಿಸಿರಬೇಕು’ ಎಂದು ಮಾತಾಡಿಕೊಂಡ್ರು. ಮಗುವನ್ನು ಬಿಸಾಕಿ ಹೋದ ಹೆತ್ತವರಿಗೆ ಹಿಡಿಶಾಪ ಹಾಕಿದ್ರು.
ಕೂಡಲೇ ಈ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಪ್ರೇಮರಾಜ್ , ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದರು. ಮಗುವಿನ ಕರುಳು ಬಳ್ಳಿಯನ್ನೂ ಕತ್ತರಿಸದೇ, ಹುಟ್ಟಿದ ಕೆಲವೇ ಗಂಟೆಗಳಲ್ಲಿ ಮಗುವನ್ನು ಬಾವಿಗೆ ಎಸೆದಿದ್ದಾರೆ. ಮಗುವಿನ ತಲೆಯ ಬಳಿ ಸಣ್ಣ ಒಳ ಗಾಯ ಆಗಿರುವ ಸಾಧ್ಯತೆ ಇದ್ದು, ತಲೆಯಲ್ಲಿ ಊತ ಕಾಣಿಸಿದೆ. ಮೇಲಿನಿಂದ ಬಾವಿಯ ಒಳಗೆ ಎಸೆದಿದ್ದರಿಂದ ಊತ ಉಂಟಾಗಿದೆ. ಸ್ಕ್ಯಾನಿಂಗ್ ಮಾಡಲಾಗಿದೆ, ಯಾವುದೇ ತೊಂದರೆ ಇಲ್ಲ ಅಂತಾರೆ ಡಾಕ್ಟರ್.
ಈ ಮಗುವಿನ ಎಲ್ಲ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಪ್ರೇಮ ರಾಜ್ ಹಾಗೂ ಸೌಮ್ವ ದಂಪತಿ ಹೇಳಿದ್ದಾರೆ. ಮಗುವನ್ನು ಬಾವಿಗೆ ಎಸೆದ ಕಿರಾತಕ ಪೋಷಕರನ್ನು ಪತ್ತೆ ಹಚ್ಚಲು ಮಕ್ಕಳ ರಕ್ಷಣಾ ತಂಡ ಕಾರ್ಯಪ್ರವೃತ್ತವಾಗಿದೆ. ಅತ್ತ, ಬುದೌನ್ ಗ್ರಾಮದಲ್ಲಿ ಈಗ ಬಾವಿಯಲ್ಲಿ ಸಿಕ್ಕ ಮಗುವಿನದ್ದೇ ಸುದ್ದಿ. ಮಗುವನ್ನು ಕಾಪಾಡಿದ ಹಾವಿನ ಬಗ್ಗೆಯೂ ತರಹೇವಾರಿ ರೋಚಕ ಕಥೆಗಳು ಹುಟ್ಟಿಕೊಂಡಿವೆ. ಪವಾಡಸದೃಶ ರೀತಿಯಲ್ಲಿ, ಹಾವಿನ ರಕ್ಷಣೆಯಲ್ಲಿ ಸಿಕ್ಕ ಮಗು, ಬೆಳೆದು ದೊಡ್ಡವನಾದ ಮೇಲೆ ಇನ್ನೆಷ್ಟು ಪವಾಡ ಮಾಡಿಯಾನೋ ?
ಹಾವನ್ನು ನೋಡಿದರೆ ಮನುಷ್ಯ ಹೆದರಿದರೂ, ಅದರೊಂದಿಗೆ ವಿಶೇಷ ಸಂಬಂಧವನ್ನು ಕಾಪಾಡಿಕೊಂಡಿದ್ದು ಸುಳ್ಳಲ್ಲ. ಅದಕ್ಕೆ ಅಲ್ಲವೇ ಭಾರತದಲ್ಲಿ ಹಾವನ್ನು ವಿಶೇಷವಾಗಿ ಪೂಜಿಸುವುದು ಮತ್ತು ಎಲ್ಲೆಡೆ ದೇವಸ್ಥಾನಗಳಿರುವುದು. ಒಟ್ಟಿನಲ್ಲಿ ಈ ಸರಿಸೃಪಗಳು ನಮ್ಮ ಸಂಪತ್ತು, ಪರಿಸರ ಸಮತೋಲನದ ಸಂಕೇತ ಎನ್ನುವುದರಲ್ಲಿ ಅನುಮಾನವೇ ಇಲ್ಲ.