The Power of Ashwini Nakshatra: ಯಾವುದೇ ಕಾಯಿಲೆಯಿಂದ ಗುಣಪಡಿಸಬಲ್ಲ ಅಶ್ವಿನಿ ದೇವತೆಗಳ ಪವರ್‌ ನಿಮಗೆ ಗೊತ್ತಾ?

Published : Sep 09, 2025, 01:41 PM IST
ashwini gods

ಸಾರಾಂಶ

ಸೂರ್ಯ ಮತ್ತು ಸಂಧ್ಯಾದೇವಿ ದಂಪತಿಗಳಲ್ಲಿ ಜನಿಸಿದ ಅಶ್ವಿನಿ ದೇವತೆಯರು ನಕುಲ-ಸಹದೇವರಿಗೆ ತಂದೆಯರು. ಸಂಜೆ ವೇಳೆ ಇವರ ಸಂಚಾರ, ಅಸ್ತು ಅಸ್ತು ಎನ್ನುವ ಪವರ್, ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ವೆಲ್ಲ ವಿಶೇಷ. 

ಮೂವತ್ಮೂರು ಕೋಟಿ ದೇವತೆಗಳಲ್ಲಿ ಅಶ್ವಿನಿ ದೇವತೆಗಳು ವಿಶಿಷ್ಟ ಪವರ್‌ ಹೊಂದಿದವರು ಎಂದು ಹಿಂದೂ ಪುರಾಣಗಳು ತಿಳಿಸುತ್ತವೆ. ಇವರು ದೇವಭೇಷಜರು ಅಂದರೆ ದೇವವೈದ್ಯರು. ಯಾವುದೇ ಕಾಯಿಲೆಯಿಂದ ಗುಣಪಡಿಸಬಲ್ಲ ಶಕ್ತಿ ಹೊಂದಿದವರು. ಇವರು ಪಾಂಡವರಲ್ಲಿ ಕಿರಿಯರಾದ ನಕುಲ- ಸಹದೇವರಿಗೆ ತಂದೆಯರು ಕೂಡ. ಇವರ್ಯಾರು? ಇವರ ಪವರ್‌ಗಳು ಏನೇನು ಅಂತ ಇಲ್ಲಿ ತಿಳಿಯೋಣ.

ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್‌ ಸೂರ್ಯ ದೇವನಿಗೆ ಮತ್ತು ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವವರು ಎನ್ನುತ್ತಾರೆ. ಇವರನ್ನು ಅಶ್ವಿನಿ ಕುಮಾರರೆಂದು, ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ದೇಹ ಮಾನವ ದೇಹವಾದರೆ, ಮುಖ ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರು.

ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಾಳಲಾರದೆ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾದ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ, ಹಿಮಾಲಯ ಪರ್ವತದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ. ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ವಿಹರಿಸುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.

ಅಶ್ವಿನಿ ದೇವತೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ ಎನ್ನುವುದು ನಂಬಿಕೆ. ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು, ಮಲಗಬಾರದು ಎಂದು ಹೇಳಲಾಗುತ್ತದೆ. ಅಶ್ವಿನಿ ದೇವತೆಗಳು ಅಸ್ತು, ಅಸ್ತು ಎಂದು ನುಡಿಯುತ್ತಿರುತ್ತಾರೆ. ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ ಅವರು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ನೆನೆಯಬೇಕು, ಮಾತನಾಡಬೇಕು.

ಅಶ್ವಿನಿ ದೇವತೆಗಳು ಸಂಚಾರ ಮಾಡುವಂತಹ ಸಮಯದಲ್ಲಿ ಸ್ನಾನ ಅಥವಾ ಕೈ - ಕಾಲು, ಮುಖವನ್ನು ತೊಳೆದು ಶುದ್ಧರಾಗಿ ಮನೆಯ ದೇವರ ಕೋಣೆಯಲ್ಲಿ, ತುಳಸಯ ಬಳಿ ಹಾಗೂ ಇನ್ನು ಕೆಲವರು ಮನೆಯ ಹೊರಗೆ ದೀಪವನ್ನು ಹಚ್ಚಿ ಪೂಜೆಯನ್ನು ಮಾಡುತ್ತಾರೆ. ಅಶ್ವಿನಿ ದೇವತೆಗಳ ಸಂಚಾರದ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿ ಪ್ರಾರ್ಥನೆ ಮಾಡಿದರೆ ಅವರು ನಮ್ಮೆಲ್ಲಾ ಕಷ್ಟಗಳನ್ನು ದೂರಾಗಿಸುತ್ತಾರೆ. ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸು, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸುತ್ತಾರೆ ಹಾಗೂ ಜೀವನದ ಪ್ರತಿಯೊಂದು ಹಂತದಲ್ಲೂ ಏಳಿಗೆಯನ್ನು ಹೊಂದುತ್ತಾರೆ ಎನ್ನುವ ನಂಬಿಕೆಯಿದೆ.

PREV
Read more Articles on
click me!

Recommended Stories

Christmas 2025: ಇಸ್ಲಾಂ ಧರ್ಮದಲ್ಲಿ ಯೇಸುಕ್ರಿಸ್ತನಿಗೆ ಅಪಾರ ಗೌರವ; ಆದರೂ ಮುಸ್ಲಿಮರು ಈ ಹಬ್ಬ ಆಚರಿಸುವುದಿಲ್ಲವೇಕೆ?
ರಾಹು ಗ್ರಹ ಸಂಚಾರದಿಂದ 2026ರಲ್ಲಿ ನಿಮ್ಮ ಜನ್ಮರಾಶಿಗೆ ಏನು ಫಲ?