ಸಂಕ್ರಾಂತಿ ತಾರಾಫಲ: ಯಾರಿಗೆ ಶುಭ, ಯಾರಿಗಿಲ್ಲ ಲಕ್?

By Web DeskFirst Published Jan 14, 2019, 5:56 PM IST
Highlights

ಇದು ಸಂಕ್ರಮಣದ ಕಾಲ. ಸೂರ್ಯ ತನ್ನ ದಿಕ್ಕನ್ನೇ ಬದಲಾಯಿಸುತ್ತಿದ್ದಾನೆಂದರೆ ಜಾತಕ ಫಲವೂ ಬದಲಾಗುತ್ತೆ ಎಂದರ್ಥ. ಯಾವ ರಾಶಿಯ ಭವಿಷ್ಯ ಹೇಗಿದೆ? ಇಲ್ಲಿದೆ ವರ್ಷದ ಜಾತಕ ಫಲಾಫಲ.

- ಪ್ರಕಾಶ್ ಅಮ್ಮಣ್ಣಾಯ


ಕಾಲ ಗಣನೆಯಲ್ಲಿ ಮಕರ ಸಂಕ್ರಮಣ. ಒಂದು ವರ್ಷದ ಅಳತೆಯು ಸಾಮಾನ್ಯವಾಗಿ 360 ದಿನಗಳು. ಅಂದರೆ ಒಂದು ವೃತ್ತದ ಪರಿಧಿಯೂ 360 ಡಿಗ್ರಿ. ಸೌರಮಾನದ ಪ್ರಕಾರ ರವಿಯು ಅಶ್ವಿನಿ ನಕ್ಷತ್ರ( ಮೇಷ ರಾಶಿ) ಯಿಂದ ಮೀನ ರಾಶಿಯ ರೇವತಿ ನಕ್ಷತ್ರದ ಅಂತ್ಯವನ್ನು  ತಲುಪುವುದೇ ಒಂದು ವರ್ಷ. ಇದನ್ನು ಸೌರ ಯುಗಾದಿ, ವಿಷು ಎಂದು ಕರೆದರು. ಇದೇ ರೀತಿ ಮಕರ ರಾಶಿಯಿಂದ ಪ್ರಾರಂಭಿಸಿ ಮತ್ತೆ
ಧನುರಾಶಿಯ ಅಂತ್ಯ ಭಾಗಕ್ಕೆ ಬರುವಾಗ ಒಂದು ವರ್ಷದ ಲೆಕ್ಕಾಚಾರ. ಅದೇ ರೀತಿ ಚಾಂದ್ರ ಮಾನದ ಪ್ರಕಾರ ಚೈತ್ರ ಶುಕ್ಲ ಪಾಡ್ಯದಿಂದ ಮತ್ತೆ ಚೈತ್ರ ಅಮವಾಸ್ಯಾಂತ್ಯದ ವರೆಗೆ ಒಂದು ವರ್ಷ ಎಂಬ ಲೆಕ್ಕಾಚಾರವೂ ಇದೆ. ಇದನ್ನು ಚಾಂದ್ರ ಯುಗಾದಿ ಎಂದು ಕರೆದರು.

ಈಗ ಮಕರ ಸಂಕ್ರಮಣದ ವಿಚಾರ ನೋಡೋಣ. ರವಿಯು ಮಕರ ರಾಶಿಯ ಉತ್ತರಾಷಾಡ ನಕ್ಷತ್ರದ ಎರಡನೆಯ ಪಾದದ ಸಂಚಾರಾರಂಭವೇ ಮಕರ ಸಂಕ್ರಮಣ. ಇದನ್ನು ರವಿಯ ಉತ್ತರಾಯನ ಕಾಲ ಎಂದರು. ದ್ವಾಪರಾಂತ್ಯದಲ್ಲಿ ಈ ಸಂಕ್ರಮಣ ಕಾಲವು ಉತ್ತರಾಯಣ ಕಾಲ ಪ್ರಾರಂಭದ ದಿನವಾಗಿತ್ತು. ಆಗ ಮೇಷ ಮಾಸದ 18ನೆಯ ದಿನದ ಸೂರ್ಯನು ಭೂಮಿಗೆ ಲಂಬವಾಗಿ( 90 ಡಿಗ್ರಿ) ಬರುತ್ತಿದ್ದನು. ವರ್ಷ ಉರುಳುತ್ತಿದ್ದಂತೆ ಸೂರ್ಯಾದಿ ಸಪ್ತ ಗ್ರಹಗಳ ಚಲನೆಯಲ್ಲೂ ವ್ಯತ್ಯಾಸವಾಗುತ್ತಿರುತ್ತದೆ.

ಇದನ್ನು ಗ್ರಹರ ಆಯನಾಂಶದ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಪ್ರತೀ 144 ವರ್ಷಗಳಿಗೊಮ್ಮೆ ಒಂದು ದಿನದ ಹಿಂದೆಯೇ ಉತ್ತರಾಯಣ ಪ್ರಾರಂಭವಾಗುತ್ತಾ ಈ 2018ನೇ ಇಸವಿಯಲ್ಲಿ ಡಿಸೆಂಬರ್ 21ನೇ ತಾರೀಖು ಉತ್ತರಾಯಣ ಆರಂಭ ಕಾಲ. ಇನ್ನೂ ವರ್ಷಗಳು ಕಳೆದಂತೆ ಈ ದಿವಸಗಳು ಒಂದೊಂದೇ ದಿನ ಹಿಂದೆ ಸರಿಯಲಿದೆ. ಅಂದರೆ ಭಾರತೀಯ ಕಾಲಮಾನದಲ್ಲಿ ದಿನಕ್ಕೆ 24 ಘಂಟೆ ಆಗಿರುವುದಿಲ್ಲ. 24 ಘಂಟೆಗೆ ಸುಮಾರು ಮೂರು ಮಿನಿಟುಗಳ ಹಿಂದೆಯೇ ದಿನವಾಗುತ್ತದೆ. ನಮ್ಮ ಲೆಕ್ಕಾಚಾರದಲ್ಲಿ ದಿನ ಮಾನ ಮತ್ತು ರಾತ್ರಿಮಾನಗಳು ಒಟ್ಟಿಗೆ ಸೇರಿದಾಗ 62 ಘಳಿಗೆಯೂ ಆಗುತ್ತದೆ, 60 ಘಳಿಗೆಯೂ ಆಗುತ್ತದೆ, 58 ಘಳಿಗೆಯೂ ಆಗುವುದುಂಟು. ಹಾಗಾಗಿ ಗ್ರಿಗೋಯರಿನ್, ಜ್ಯೂಲಿಯನ್ ಕ್ಯಾಲೆಂಡರಿಗೂ ಭಾರತೀಯ ಪಂಚಾಂಗಗಳಿಗೂ ವ್ಯತ್ಯಾಸ ಬರುತ್ತದೆ. ಕ್ರಿ ಪೂರ್ವ 350ರಲ್ಲಿ ಈಗಿನ ಜನವರಿ ಒಂದನೆಯ ತಾರೀಕಿನ ಹೊಸವರ್ಷವು ಮಕರ ಸಂಕ್ರಮಣವಾಗಿತ್ತು.

ಬಹುಶಃ ಅವರೂ ಹೊಸವರ್ಷವನ್ನೇ ರವಿಯ ಉತ್ತರಾಯಣ ಕಾಲದ ಪ್ರಾರಂಭಕ್ಕೇ ಆಚರಿಸಿರಬಹುದು. ಬಾನಿನಲ್ಲಿ ಕಾಣುವ ದ್ರುವ ತಾರೆ,ಅಗಸ್ತಯ ನಕ್ಷತ್ರಗಳ(ರವಿಯ ಸಾವಿರ ಪಟ್ಟು ದೊಡ್ಡದಾಗಿರುವ ನಕ್ಷತ್ರಗಳಿವು) ಗಣನೆಯನ್ನು ಈ ಆಯನ ಲೆಕ್ಕಾಚಾರದ ತಾಳೆ ನೋಡಲು ಬಳಸಲಾಗುತ್ತದೆ. ಯಾವುದೇ ನಿರ್ಧಿಷ್ಟ ಗತಿಯ ನಕ್ಷತ್ರಗಳ ಆಧಾರದಲ್ಲೇ ವರ್ಷಗಣನೆ ಮಾಡಲಾಗುತ್ತದೆ. ಮುಂದೆ 3019ರಲ್ಲಿ ಅಂದರೆ 1000 ವರ್ಷಗಳ ನಂತರ ಇದೇ ಮಕರ ಸಂಕ್ರಮಣವು ಜನವರಿ 31ರಂದು ಆಗಲಿದೆ. ಆಗ ರವಿಯು ಧನುರಾಶಿಯಲ್ಲಿ 25 ಡಿಗ್ರಿಯಲ್ಲಿ ಇರುತ್ತಾನೆ. ಮುಂದೆ 1999ರಲ್ಲಿ ಈ ಮಕರ ಸಂಕ್ರಮಣ ಕಾಲವು ಮೇ ತಿಂಗಳಿನಲ್ಲಿ ಬರಲಿದೆ. ಅಂದರೆ ಆಗ ರವಿಯು ಕನ್ಯಾರಾಶಿಯಲ್ಲಿ ಇರುತ್ತಾನೆ. ಇದುವೇ ನಮ್ಮ ಈಗಿನ ಕ್ಯಾಲೆಂಡರಿಗೂ,ಭಾರತೀಯ ಪಂಚಾಗಕ್ಕೂ ಇರುವ ವ್ಯತ್ಯಾಸ.

ಮಕರ ಸಂಕ್ರಮಣ ಕಾಲದಲ್ಲಿ ಸಂವತ್ಸರದ ಅಂತ್ಯ ಭಾಗ ಇರುತ್ತದೆ. ಈಗಿನ ವಿಲಂಬಿ ಸಂವತ್ಸರದ ಅಂತ್ಯದ ಮೂರು ತಿಂಗಳು ಮಕರ ಸಂಕ್ರಮಣದ ಒಳಗಿವೆ. ನಂತರ ವರ್ಷವಿಡೀ ಹೊಸ ವರ್ಷದ ವಿಕಾರಿ ಸಂವತ್ಸರ. ಈ ಮಕರ ಸಂಕ್ರಮಣದ ಹೊಸ ವರ್ಷದಲ್ಲಿ ಎರಡು ಗ್ರಹಣಗಳಾಗಲಿದೆ. ಜುಲೈ ತಿಂಗಳ ಹದಿನಾರನೆಯ ತಾರೀಖು ಖಂಡಗ್ರಾಸ ( ಅರ್ಧ ಭಾಗ)ಚಂದ್ರ ಗ್ರಹಣವೂ, ಡಿಸೆಂಬರ್ 26ರಲ್ಲಿ ಕಂಕಣ ( ಸ್ವಲ್ಪವೇ ಸ್ವಲ್ಪ ಸೂರ್ಯ ಕಾಣಿಸುವಿಕೆ) ಸೂರ್ಯಗ್ರಹಣವೂ ಆಗಲಿದೆ.

ಇಲ್ಲಿ ಸಂಕ್ರಮಣದ ಭವಿಷ್ಯ ನೋಡೋಣ. 


ಮೇಷ ರಾಶಿ
ಮೊದಲ ಎರಡು ತಿಂಗಳು ಗುರು ಅಷ್ಟಮದಲ್ಲಿ ಇರುವುದರಿಂದ ಪ್ರತಿಕೂಲಗಳೇ ಜಾಸ್ತಿ. ಇದರ ಪರಿಣಾಮವಾಗಿ ಶನಿಯು ನವಮದಲ್ಲಿ ಇರುವುದರಿಂದ ಗುರುವಿನ ಅನನುಕೂಲತೆಯು ಧರ್ಮಭ್ರಷ್ಟರನ್ನಾಗಿಸಬಹುದು. ಸ್ವಲ್ಪ ವಿವೇಚನೆ ಇರಲಿ. 

ವೃಷಭ
ಈಗ ಗುರು ಸಪ್ತಮ ಒಂದೆಡೆ, ಶನಿಯು ಅಷ್ಟಮದಲ್ಲಿ. ದೇಹಾರೋಗ್ಯದ ಬಗ್ಗೆ ಎಚ್ಚರವಿರಲಿ. ಮಾರ್ಚ್ ನಂತರ ಗುರುವೂ ಅಷ್ಟಮಕ್ಕೆ ಬರುವುದರಿಂದ 2019 ಪೂರ್ತಿ ಉತ್ತಮ ವಾತಾವರಣ ನೀಡದು. ದೇವತಾರಾಧನೆಯಿಂದ ಕ್ಷೇಮ.

ಮಿಥುನ
ಸದ್ಯ ಎರಡು ತಿಂಗಳು ಗುರುವಿನ ಷಷ್ಟ ಸ್ಥಿತಿಯು ವ್ಯವಹಾರದಲ್ಲಿ ಧೈರ್ಯವನ್ನು ಕಳೆದುಕೊಳ್ಳುವಂತೆ ಮಾಡಿದರೂ ಮಾರ್ಚ್ ನಂತರ ವ್ಯವಹಾರ,ಅವಿವಾಹಿತರಿಗೆ ಕಂಕಣ ಬಲ ವೃದ್ಧಿಯಾಗಲಿದೆ.

ಕರ್ಕಾಟಕ
ಗುರು,ಶನಿಗಳು ಉತ್ತಮ ಫಲದಾಯಕರು. ಮಾರ್ಚ್ ನಂತರ ಋಣ ಬಾಧೆಗಳ ಸಮಸ್ಯೆ ಇರುತ್ತದೆ.ಆದರೂ ವಿಪರೀತ ಸಮಸ್ಯೆಗಳಿವೆ ಎಂದು ಹೇಳಲಾಗದು.

ಸಿಂಹ
ಪಂಚಮ ಶನಿಯು ವರ್ಷವಿಡೀ ಇರುವುದರಿಂದ ಬಂಧು ಮಿತ್ರರೊಡನೆ ವಿನಾಕಾರಣ ವಿವಾದಗಳು ಬರಬಹುದು. ವಿವೇಚನೆ, ಸಾವಧಾನಗಳಿರಲಿ. ಮಾರ್ಚ್ ನಂತರ ಗುರು ಪಂಚಮದಲ್ಲಿ ಬರುವುದರಿಂದ ಪುತ್ರಾಕಾಂಶೆಯಲ್ಲಿರುವವರಿಗೆ ಶುಭವಿದೆ.

ಕನ್ಯಾ
ಚತುರ್ಥ ಶನಿಯಿಂದ ಗೃಹದಲ್ಲಿ ನೆಮ್ಮದಿಯ ಕೊರತೆಗಳು ಕಾಣಬಹುದು. ಸದ್ಯ ಗುರುವಿನ ತೃತೀಯ ಸ್ಥಾನದ ಫಲದಲ್ಲಿ ಭಯ ಆತಂಕಗಳಿವೆ. ಮುಂದೆ ಮಾರ್ಚ್ ನಂತರ ಗುರುವಿನ ಚತುರ್ಥ ಸ್ಥಿತಿ ಇದ್ದರೂ ಕ್ಷೇತ್ರ ,ವಾಹನ ಖರೀದಿಸುವ ಯೋಗವಿದೆ.

ತುಲಾ
ಸದ್ಯ ಮಾರ್ಚ್ ವರೆಗೆ ದ್ವಿತೀಯ ಗುರು ಲಾಭದಾಯಕ. ನಂತರ ಭಯ ಆತಂಕಗಳ ಕಾಲ.ಆದರೂ ವರ್ಷವಿಡೀ ಶನಿಯು ತೃತೀಯದಲ್ಲಿ
ಇರುವುದರಿಂದ ಲಾಭಗಳಿವೆ.

ವೃಶ್ಚಿಕ
ಮೊದಲ ಎರಡು ತಿಂಗಳು ಗುರು ದುಃಖದಾಯಕನಾಗಿದ್ದರೂ ನಂತರ ವರ್ಷವಿಡೀ ಒಳ್ಳೆಯ ಮುಂದಾಳತ್ವವನ್ನು ನೀಡಲಿದ್ದಾನೆ.ಆದರೆ ದ್ವಿತೀಯ ಶನಿಯು ಕಲಹಗಳಿಗೆ ಕಾರಣವೂ ಆಗಬಹುದು. ಹನುಮಂತನ ಸೇವೆಯಿಂದ ಕ್ಷೇಮ.

ಧನು
ಜನ್ಮ ಶನಿ ಆರೋಗ್ಯಕ್ಕೆ ಹಾನಿ ತರಬಹುದು.ಮೊದಲ ಎರಡು ತಿಂಗಳು ವ್ಯಯದ ಗುರುವಿನಿಂದ ಖರ್ಚುಗಳು ಹೆಚ್ಚಾದಾವು.ನಂತರದ ಜನ್ಮ ಗುರುವಿನಿಂದ ಆರೋಗ್ಯ ಚಿಂತೆಗಳನ್ನು ತರಬಹುದು. ಗುರುಸೇವೆಯಿಂದ ಕ್ಷೇಮ. 

ಮಕರ
ಮಾರ್ಚ್‌ವರೆಗೆ ಸ್ಥಾನಮಾನ ಲಾಭ. ನಂತರ ವರ್ಷ ಪೂರ್ತಿ ಅಧಿಕ ಧನವ್ಯಯ .ಶನಿಯೂ ವ್ಯಯದಲ್ಲಿ ಇರುವುದೂ ಖರ್ಚಿಗೆ ಕಾರಣವಾದೀತು.

ಕುಂಭ
ಇದು ಒಂದು ರೀತಿಯ ಲಾಟರಿ ವರ್ಷವೆ. ಮುಟ್ಟಿದ್ದು ಚಿನ್ನವಾಗುವ ಕಾಲ. ಉದ್ಯೋಗ ಪರಿವರ್ತನೆ, ಉದ್ಯೋಗಿಗಳಿಗೆ ಪ್ರೊಮೋಷನ್ ಇತ್ಯಾದಿ ಗುರುವಿನ ಫಲವಾದರೆ, ಶನಿಯು ಲಾಭ ಸ್ಥಾನದಲ್ಲಿ ಅಧಿಕ ಲಾಭ ನೀಡುತ್ತಾನೆ.

ಮೀನ
ನವಮ ಗುರು ಎರಡು ತಿಂಗಳಿದ್ದರೂ ಭಾಗ್ಯ ವೃದ್ಧಿ. ನಂತರ ವರ್ಷವಿಡೀ ಕರ್ಮಸ್ಥಾನದಲ್ಲಿ ಇರುವುದರಿಂದ ಉದ್ಯೋಗ ಲಾಭ, ಅವಿವಾಹಿತರಿಗೆ ಕಂಕಣ ಬಲ ಲಭಿಸಲಿದೆ. ಕರ್ಮ ಸ್ಥಾನದ ಶನಿಯು ದೂರ ಕುಟುಂಬದ ಹಿರಿಯರೊಬ್ಬರ ಅಶುಭ ವಾರ್ತೆ ತರಬಹುದು. ಆದರೂ ಮುಂದಿನ ದಿನಗಳು ನಿಮಗೆ ಶುಭ ದಿನಗಳಾಗಲಿದೆ ಎಂದು ಹೇಳಬೇಕು.

click me!
Last Updated Jan 14, 2019, 5:56 PM IST
click me!