ಮನೆ ಮುಂದೆ ರಂಗೋಲಿ ಏಕೆ ಹಾಕಬೇಕು?

By Web Desk  |  First Published Nov 14, 2018, 6:18 PM IST

ಭಾರತೀಯರ ಮನೆ ಮುಂದೆ ರಂಗೋಲಿ ಹಾಕುವುದು ಕಾಮನ್. ಮನೆಯೊಡತಿಯ ಕಲೆ ಅನಾವರಣಗೊಳ್ಳುವ ಜತೆಗೆ ಇದರ ಹಿಂದಿರೋ ವೈಜ್ಞಾನಿಕ ಕಾರಣವೇನು? ಇಲ್ಲಿದೆ ಓದಿ...


ಮನೆ ಮುಂದೆ ರಂಗೋಲಿ ಹಾಕುವುದು ಭಾರತೀಯರ ಬಹಳ ಹಳೆಯ ಸಂಪ್ರದಾಯ. ಒಂದು ಆಚರಣೆಯಾಗಿ ಇದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆಯಾದರೂ ಇದರ ಹಿಂದಿರುವ ವೈಜ್ಞಾನಿಕ ಕಾರಣ ತುಂಬಾ ಜನರಿಗೆ ಗೊತ್ತಿರಲಾರದು.

ರಂಗೋಲಿ ಸಾಮಾನ್ಯವಾಗಿ ವೃತ್ತಾಕಾರದ, ನೇರವಾದ ಅಥವಾ ಅಂಕುಡೊಂಕಿನ ರೇಖೆಗಳಿಂದ ಕೂಡಿರುತ್ತದೆ. ಅದನ್ನು ನೋಡಿದರೆ ತರಂಗಗಳು ಬೇರೆ ಬೇರೆ ರೀತಿಯ ಫ್ರೀಕ್ವೆನ್ಸಿಯಲ್ಲಿ ಸಂಚರಿಸುವಂತೆ ಭಾಸವಾಗುತ್ತದೆ. ಈ ರಚನೆಗಳು ನೋಡುಗರ ಮೆದುಳಿನ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿವೆ. ಅದರಲ್ಲೂ, ಹಳೆಯ ಕಾಲದ ಜನರು ಹಾಕುತ್ತಿದ್ದ ಚುಕ್ಕಿ ಮತ್ತು ರೇಖೆಯ ರಂಗೋಲಿಗಳು ಹೆಚ್ಚು ವೈಜ್ಞಾನಿಕವಾಗಿವೆ. 

Tap to resize

Latest Videos

ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಅದರಲ್ಲಿ ತರಂಗದಂತೆ ಹರಿದಿರುವ ರೇಖೆಗಳು ಮನೆಯನ್ನು ಪ್ರವೇಶಿಸುವವನ ಮನಸ್ಸನ್ನು ಶಾಂತಗೊಳಿಸುತ್ತವೆ. ಅವು ಮೆದುಳಿನ ಮೇಲೆ ಪ್ರಭಾವ ಬೀರಿ ಸಂತೋಷದ ನರಗಳನ್ನು ಪ್ರಚೋದಿಸುತ್ತವೆ. ಆಗ ಮನೆಗೆ ಬರುವ ಅತಿಥಿ ಖುಷಿ ಖುಷಿಯಾಗಿರುತ್ತಾನೆ. ರಂಗೋಲಿಯ ವಿವಿಧ ಆಕಾರಗಳು ಮನಸ್ಸಿನ ಮೇಲೆ ಬೇರೆ ಬೇರೆಯದೇ ರೀತಿಯ ಪರಿಣಾಮವನ್ನು ಬೀರುತ್ತವೆ. ಅದರಲ್ಲಿರುವ ಬಣ್ಣಗಳಿಗೂ ಹೀಗೆ ಪ್ರಭಾವ ಬೀರುವ ಶಕ್ತಿಯಿದೆ. ಒಟ್ಟಾರೆ, ಮೆದುಳಿನ ನರಗಳನ್ನು ಪ್ರಚೋದಿಸುವ ಮೂಲಕ ಸುಂದರ ಭಾವನೆಗಳನ್ನು ಉದ್ದೀಪಿಸುವುದು ರಂಗೋಲಿಯ ಮೂಲ ಉದ್ದೇಶ.

ರಂಗೋಲಿ ಎಂಬ ಕನ್ನಡ ಪದದ ಮೂಲ ಸಂಸ್ಕೃತದ ರಂಗವಲ್ಲಿ. ಭಾರತೀಯ ತಂತ್ರಶಾಸ್ತ್ರದಲ್ಲಿ ವಿವಿಧ ಶಕ್ತಿಗಳ ಆರಾಧನೆಯಲ್ಲಿ ಮಂಡಲಗಳನ್ನು ಬರೆದು ಪೂಜಿಸುವುದುಂಟು. ಆ ಮಂಡಲಗಳ ಸರಳ ರೂಪವೇ ರಂಗೋಲಿ ಅಥವಾ ರಂಗವಲ್ಲಿ. ರಂಗೋಲಿಯನ್ನು ಸಾಂಸ್ಕೃತಿಕ ಹಾಗೂ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ನೋಡಬಹುದು. ರಂಗೋಲಿ ಶುಭ ಸಂಕೇತ. ಉತ್ಸವದ ಸಂಕೇತ. ಸಂತೋಷದ ಸಂಕೇತ. ಕಲಾಭಿವ್ಯಕ್ತಿಯ ಮಾಧ್ಯಮ. ಚಿತ್ತವನ್ನು ಅರಳಿಸುವ ಸೌಂದರ್ಯ ಮಾಧ್ಯಮ. ಮನಸ್ಸಿಗೆ ಸಂತೋಷ, ಆನಂದ, ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ.

- ಮಹಾಬಲ ಸೀತಾಳಬಾವಿ

click me!