ಬೆಳಗ್ಗೆ ಎದ್ದು ಸೂರ್ಯನಿಗೇಕೆ ನಮಸ್ಕರಿಸಬೇಕು?

By Kannadaprabha NewsFirst Published Dec 18, 2018, 6:23 PM IST
Highlights

'ಆದಿದೇವ...'ನಿಗೆ ವಂದಿಸಿಯೇ ಬೆಳಗ್ಗೆ ಏಳುವ ಅಭ್ಯಾಸ ಭಾರತೀಯರದ್ದು. ಪಂಚ ಭೂತಗಳನ್ನೂ ದೇವರೆಂದು ಭಾವಿಸುವ ಸಂಪ್ರದಾಯ ನಮ್ಮದು. ಆ ಮೂಲಕ ಪ್ರಕೃತಿಯನ್ನು ಆರಾಧಿಸುವ ಪರಿಪಾಠವನ್ನು ಬೆಳೆಯಿಸಿಕೊಂಡಿದ್ದೇವೆ. ಅಷ್ಟಕ್ಕೂ ಬೆಳಗ್ಗೆ ಎಂದು ಸೂರ್ಯನಿಗೇಕೆ ನಮಸ್ಕರಿಸಬೇಕು? ಹಳೆ ಆಚರಣೆಗೆ ಹೊಸ ವಿಚಾರವಿದು....

ಮನೆಯಲ್ಲಿ ಹಿರಿಯರಿದ್ದರೆ ಅವರು ಬೆಳಿಗ್ಗೆ ಎದ್ದಾಕ್ಷಣ ಮುಖ ತೊಳೆದುಕೊಂಡು, ಒಮ್ಮೆ ಹೊರಗೆ ಹೋಗಿ ಸೂರ್ಯನನ್ನು ನೋಡಿ ನಮಸ್ಕಾರ ಮಾಡಿ ಎಂದು ಹೇಳುತ್ತಾರೆ. ಇದು ಕೇವಲ ಸಂಪ್ರದಾಯವಲ್ಲ, ಒಂದು ಆರೋಗ್ಯಕರ ಆಚರಣೆಯೂ ಹೌದು.

ನಮ್ಮ ಆರೋಗ್ಯಕ್ಕೆ ವಿಟಮಿನ್-ಡಿ ಅತ್ಯಗತ್ಯ. ಸೂರ್ಯನ ಬೆಳಕಿನಲ್ಲಿರುವ ಅತಿನೇರಳೆ ಕಿರಣ-ಬಿ (ಸೂರ್ಯನ ಬೆಳಕಿನಲ್ಲಿ ಯುವಿ-ಎ, ಯುವಿ-ಬಿ ಮತ್ತು ಯುವಿ-ಸಿ ಎನ್ನುವ ಮೂರು ನಮೂನೆಯ ಕಿರಣಗಳಿರುತ್ತದೆ. ಇವುಗಳಲ್ಲಿ ಯುವಿ-ಬಿ ವಿಟಮಿನ್-ಡಿ ಉತ್ಪಾದನೆಗೆ ಉಪಯುಕ್ತ) ನಮ್ಮ ಚರ್ಮದ ಮೇಲೆ ಬಿದ್ದಾಗ ಹಿಟಮಿ-ಡಿ ರೂಪುಗೊಳ್ಳುತ್ತದೆ. ಚರ್ಮದಲ್ಲಿ 7-ಡೈಹೈಡ್ರೋಕೊಲೆಸ್ಟರಾಲ್ ಎನ್ನುವ ರಾಸಾಯನಿಕ ಇರುತ್ತದೆ. 

ಹಳೆ ಆಚಾರ, ಹೊಸ ವಿಚಾರ

ಎಳೆ ಸೂರ್ಯನ ಕಿರಣಗಳು ಚರ್ಮದ ಮೇಲೆ ಬಿದ್ದಾಗ, ಇದು ಪ್ರೊ-ವಿಟಮಿನ್ ಡಿ3 ಆಗಿ ಪರಿವರ್ತಿತವಾಗುತ್ತದೆ. ನಂತರ ಇದು ವಿಟಮಿನ್-ಡಿ3 ಆಗುತ್ತದೆ. ನಮ್ಮ ಮೂಳೆಗಳ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಷಿಯಂ ಹಾಗೂ ಫಾಸ್ಪರಸ ಅನ್ನು ನಮ್ಮ ಕರುಳು ಹೀರಿಕೊಳ್ಳಬೇಕಾದರೆ, ಶರೀರದಲ್ಲಿ ಸಾಕಷ್ಟು ವಿಟಮಿನ್-ಡಿ ಇರಬೇಕು. ಪ್ರತಿದಿನ ಬೆಳಿಗ್ಗೆ ಎಳೆ ಬಿಸಿಲಿನಲ್ಲಿ ಅರ್ಧ ಗಂಟೆಕಾಲ ನಮ್ಮ ಶರೀರವನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ, ವಿಟಮಿನ್ ಡಿ ಅಗತ್ಯದಷ್ಟು ಸಿಗುತ್ತದೆ. ಮಧ್ಯಾಹ್ನದ ಸೂರ್ಯನಿಗೆ ಮೈ ಒಡ್ಡಿದರೆ ಚರ್ಮ ಸುಟ್ಟು ಕಪ್ಪಗಾಗುವುದಲ್ಲದೆ, ಚರ್ಮ ಕ್ಯಾನ್ಸರ್‌ನಂಥ ಸಮಸ್ಯೆಗಳು ಬರಬಹುದು.

ಹಾಗಾದರೆ ಸೂರ್ಯನಿಗೆ ನಮಸ್ಕಾರ ಮಾಡಬೇಕು ಅಥವಾ ಅರ್ಘ್ಯ ನೀಡಬೇಕು ಎಂದೇಕೆ ಹೇಳಿದರು? ಬೆಳಗಿನ ಬಿಸಿಲಿನಲ್ಲಿ ಅರ್ಧ ತಾಸು ನಿಲ್ಲಿ ಎಂದೇಕೆ ಹೇಳಲಿಲ್ಲ? ಏಕೆಂದರೆ, ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಬೇಕು ಎಂದಷ್ಟೇ ಹೇಳಿದರೆ ನಮ್ಮಲ್ಲೆಷ್ಟು ಜನ ಅದನ್ನು ಪಾಲಿಸುತ್ತೇವೆ! ನಮಗೆ ಒಳ್ಳೆಯದಾಗಲಿ ಎಂಬ ಆಚರಣೆಗಳಿಗೂ ದೇವರ ಭಕ್ತಿಯನ್ನು ತಳುಕು ಹಾಕಿದರಷ್ಟೇ ನಾವು ಅದನ್ನು ಮಾಡುತ್ತೇವೆ. ಆದ್ದರಿಂದ ಬೆಳಗಿನ ಸೂರ್ಯನಿಗೆ ನಮಸ್ಕಾರ ಮಾಡಿದರೆ ಒಳ್ಳೆಯದಾಗುತ್ತದೆ, ಅರ್ಘ್ಯ ಕೊಟ್ಟರೆ ಪುಣ್ಯ ಬರುತ್ತದೆ ಎಂದು ಪ್ರಾಚೀನರು ಹೇಳಿದ್ದಾರೆ.

- ಮಹಾಬಲ ಸೀತಾಳಬಾವಿ

click me!