
ರಾಮಾಯಣದಲ್ಲಿ ಅನೇಕ ರೋಚಕ ಕಥೆಗಳಿವೆ. ಒಂದು ಕಥೆ ಇಂದಿಗೂ ಕುತೂಹಲ ಹುಟ್ಟಿಸುತ್ತದೆ. ಅದೇನು ಎಂದರೆ, ರಾವಣನ ಮಗನಾದ ಇಂದ್ರಜಿತು ಅಜೇಯನಾಗಿದ್ದ. ಅವನು ಇಂದ್ರನನ್ನೇ ಸೋಲಿಸಿದ್ದ. ಅವನನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿರಲಿಲ್ಲ. ಶಿವನಿಂದ ಅವನೊಂದು ವಿಶೇಷ ವರವನ್ನು ಪಡೆದಿದ್ದ. ಅದೇನೆಂದರೆ, ಹದಿನಾಲ್ಕು ವರ್ಷ ಕಾಲ ನಿದ್ರೆ, ಆಹಾರ ತೊರೆದು, ಬ್ರಹ್ಮಚರ್ಯ ವ್ರತ ಪಾಲನೆಯಲ್ಲಿ ಇದ್ದ ವ್ಯಕ್ತಿಯಿಂದ ಮಾತ್ರ ಅವನನ್ನು ವಧೆ ಮಾಡಲು ಸಾಧ್ಯ ಎಂದು. ರಾಮನಿಂದಲೂ ಅವನನ್ನು ಗೆಲ್ಲಲಾಗಲಿಲ್ಲ. ಕೊನೆಗೆ ಘೋರ ಯುದ್ಧದಲ್ಲಿ ಇಂದ್ರಜಿತುವನ್ನು ಲಕ್ಷ್ಮಣ ವಧಿಸಿದ.
ಆಗ ಆಶ್ಚರ್ಯ ಚಕಿತನಾದ ರಾಮ, ಲಕ್ಷ್ಮಣನನ್ನು ಕೇಳಿದ- ಇಂದ್ರಜಿತುವಿಗೆ ವಿಶೇಷ ವರವಿತ್ತೆಂದು ಕೇಳಿದ್ದೇನೆ. ನೀನು ಹದಿನಾಲ್ಕು ವರ್ಷ ಕಾಲ ನಿದ್ರೆ ಮಾಡದೆ, ಆಹಾರ ಸೇವಿಸದೆ ಇದ್ದೆಯಾ? ನೀನು ಬ್ರಹ್ಮಚಾರಿಯಾಗಿದ್ದೆ ಎಂಬುದು ನನಗೆ ಗೊತ್ತಿದೆ- ಯಾಕೆಂದರೆ ನಿನ್ನ ಪತ್ನಿ ಊರ್ಮಿಳೆ ಊರಿನಲ್ಲಿದ್ದಾಳೆ. ಆದರೆ ಇತರ ಎರಡು ಹೇಗೆ ಸಾಧ್ಯವಾಯಿತು ಎಂಬುದು ನನ್ನ ಕುತೂಹಲ.
ಆಗ ಲಕ್ಷ್ಮಣ ಉತ್ತರಿಸಿದ- ಅಣ್ಣಾ, ಹೌದು. ಕಾಡಿನಲ್ಲಿ ರಾಕ್ಷಸರ ಭಯವಿರುತ್ತಿತ್ತಲ್ಲ? ರಾತ್ರಿ ನೀವಿಬ್ಬರೂ ಎಲೆಮನೆಯಲ್ಲಿ ನಿದ್ರಿಸುತ್ತಿದ್ದಿರಿ. ನಾನು ನಿಮ್ಮನ್ನು ಕಾಪಾಡಲೋಸುಗ ಸದಾ ಎಚ್ಚರವಿರುತ್ತಿದ್ದೆ. ಹಗಲು ನಾವು ಕಾಡಿನಲ್ಲಿ ನಡೆಯುತ್ತಿದ್ದೆವು. ಹೀಗಾಗಿ ನಿದ್ರಿಸುತ್ತಿರಲಿಲ್ಲ. ಇನ್ನು ಆಹಾರ- ನಾನು ಕಂದ ಮೂಲ ಫಲಗಳನ್ನು ತಂದು ನಿಮಗೆ ಕೊಡುತ್ತಿದ್ದೆ. ನೀವು ಸೇವಿಸುವುದನ್ನು ಕಂಡು ನನಗೆ ಹೊಟ್ಟೆ ತುಂಬುತ್ತಿತ್ತು. ನೀವು ಲಕ್ಷ್ಮಣಾ, ನೀನು ಆಹಾರ ಸೇವಿಸು ಎನ್ನುವಿರೆಂದು ನಾನು ಕಾದೆ. ನೀವು ಹೇಳಲಿಲ್ಲ, ನಾನು ಸೇವಿಸಲಿಲ್ಲ.
ಇದನ್ನು ಕೇಳಿ ರಾಮನ ಕಣ್ಣು ತುಂಬಿತು. ಲಕ್ಷ್ಮಣನನ್ನು ಗಾಢವಾಗಿ ಆಲಿಂಗಿಸಿಕೊಂಡ. ಹೇಳಿದ- ವಿಧಿಯೇ ನಮ್ಮಿಂದ ಹಾಗೆ ಮಾಡಿಸಿತು. ಯಾಕೆಂದರೆ ನೀನು ಹಾಗೆ ವ್ರತ ಮಾಡದೇ ಇದ್ದಿದ್ದರೆ ಇಂದ್ರಜಿತುವನ್ನು ಕೊಲ್ಲಲು ನಾವ್ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.
ಈ ಕಥೆಯಲ್ಲಿ ಭಕ್ತಿ, ತ್ಯಾಗ, ನಿರೀಕ್ಷೆ ಇಲ್ಲದ ಪ್ರೀತಿ, ಇಂದ್ರಿಯನಿಗ್ರಹ ಎಲ್ಲವೂ ಅಡಗಿವೆ. ಶ್ರೀರಾಮ 14 ವರ್ಷ ವನವಾಸಕ್ಕೆ ಹೊರಟಾಗ ಲಕ್ಷ್ಮಣ ಒಂದು ಕ್ಷಣವೂ ಮರುಯೋಚನೆ ಮಾಡದೇ ಅವನ ಜೊತೆ ಹೋಗಲು ತೀರ್ಮಾನಿಸಿದ. “ರಾಮ ಮತ್ತು ಸೀತೆಯನ್ನು ಹೇಗಾದರೂ ಕಾಪಾಡುತ್ತೇನೆ” ಎಂದು ಪ್ರಮಾಣ ಮಾಡಿದ. ಹೀಗಾಗಿ, ದಿನ- ರಾತ್ರಿ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು ಅನ್ನೋ ಭಾವನೆ ಲಕ್ಷ್ಮಣನಲ್ಲಿತ್ತು. ನಿದ್ರೆ ಅವನ ಕೆಲಸಕ್ಕೆ ಅಡ್ಡಿ ಆಗುತ್ತದೆ ಅಂತ ಅನಿಸಿತು.
ದೇಹದ ಮಿತಿಯನ್ನು ಮೀರಲು ಆತ ನಿದ್ರಾದೇವಿಯನ್ನು ಆರಾಧಿಸಿ ಒಲಿಸಿಕೊಂಡ. “ನನಗೆ ನಿದ್ರೆ ಬರದಿರಲಿ” ಎಂದು ಬೇಡಿಕೊಂಡ. ಅವನ ಭಕ್ತಿಯಿಂದ ಸಂತುಷ್ಟಳಾದ ನಿದ್ರಾದೇವಿ, ವಿಶೇಷ ವರವೊಂದನ್ನು ನೀಡಿದಳು. ಲಕ್ಷ್ಮಣನಿಗೆ ಬರಬೇಕಾದ ನಿದ್ರೆ, ಅವನ ಪತ್ನಿ ಊರ್ಮಿಳೆಗೆ ಬರುವಂತೆ ಮಾಡಿದಳು. ಹೀಗಾಗಿ ಲಕ್ಷ್ಮಣ ಎಚ್ಚರವಾಗಿದ್ದರೆ, ಉರ್ಮಿಳೆ ಆ ವರ್ಷಗಳನ್ನೆಲ್ಲಾ ನಿದ್ರೆಯಲ್ಲೇ ಕಳೆದಳು. ಇದೊಂದು ಪ್ರಕ್ಷಿಪ್ತ ಕಥೆ. ಇದು ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ.
ಊರ್ಮಿಳೆಯ ಬದುಕು ತ್ಯಾಗದ್ದು. ಅವಳ ಕೊಡುಗೆ ಕಡಿಮೆಯೇನೂ ಅಲ್ಲ. ಪತಿಯ ಕರ್ತವ್ಯದ ಮಹತ್ವವನ್ನು ಅರ್ಥ ಮಾಡಿಕೊಂಡು, ಮೌನವಾಗಿ ಬದುಕಿದ ಊರ್ಮಿಳೆ, ಪ್ರತಿ ಮಹಾನ್ ಕಾರ್ಯದ ಹಿಂದೆ ಮೌನದ ಬೆಂಬಲವೂ ಇರುತ್ತದೆ ಅನ್ನೋದನ್ನು ತೋರಿಸುತ್ತಾಳೆ. ಇನ್ನೊಂದು ಕಡೆ ಲಕ್ಷ್ಮಣನ ಎಚ್ಚರಿಕೆ, ಶಿಸ್ತು ಮತ್ತು ಮನಸ್ಸಿನ ನಿಯಂತ್ರಣ ಮಹತ್ವದ್ದು. ಆ ಕಾಲದ ಋಷಿಮುನಿಗಳು, ಧ್ಯಾನ, ಸರಳ ಜೀವನ ಮತ್ತು ಸ್ಪಷ್ಟ ಗುರಿ ಇದ್ದರೆ ನಿದ್ರೆಯ ಅವಶ್ಯಕತೆ ಕಡಿಮೆ ಅಂತ ನಂಬಿದ್ದರು.
ಸೇವೆಯನ್ನೇ ಜೀವನವನ್ನಾಗಿ ಮಾಡಿಕೊಂಡ ಲಕ್ಷ್ಮಣ, ಶಿಸ್ತುಬದ್ಧ ಮನಸ್ಸಿದ್ದರೆ ಮನುಷ್ಯ ಎಷ್ಟನ್ನು ಸಾಧಿಸಬಹುದು ಅನ್ನೋದಕ್ಕೆ ಜೀವಂತ ಉದಾಹರಣೆ. ಈ ಕಥೆಯ ಅರ್ಥ “ನಿದ್ರೆ ಮಾಡಬೇಡಿ” ಅನ್ನೋದಲ್ಲ. ಬದಲಾಗಿ ಜವಾಬ್ದಾರಿ, ನಿಷ್ಠೆ ಮತ್ತು ಬದ್ಧತೆ ಎಷ್ಟು ಮುಖ್ಯ ಅನ್ನೋದು. ನಿಜವಾದ ಶಕ್ತಿ ಅಂದರೆ ದೇಹಬಲವಲ್ಲ, ಇಚ್ಛಾಶಕ್ತಿ. ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ, ಇಂದಿಗೂ ನಮಗೆ ಅದನ್ನೇ ನೆನಪಿಸುತ್ತದೆ.