
ಶ್ರೀ ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆ ಜುಲೈ 27, 2018ರ ಶುಕ್ರವಾರ ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ, ಮಕರ ರಾಶಿಯಲ್ಲಿ, ಮೇಷ, ವೃಷಭ ಮತ್ತು ಮಿಥುನ ಲಗ್ನಗಳಲ್ಲಿ, ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತದೆ. ಸೂತಕ ಸಮಯವೆಂದೇ ಭಾವಿಸುವ ಈ ಗ್ರಹಣ ಸಮಯದಲ್ಲಿ ಕೆಲವು ಆಚರಣೆಗಳನ್ನು ತಪ್ಪದೇ ಪಾಲಿಸಬೇಕೆಂದು ಹಿರಿಯರು ಹೇಳುತ್ತಾರೆ. ಈ ಬಗ್ಗೆಯೊಂದು ಸುತ್ತು.
ಗ್ರಹಣ ಸ್ಪರ್ಶ ಕಾಲ: ರಾತ್ರಿ 11.54
ಗ್ರಹಣ ಮಧ್ಯ ಕಾಲ: ಮಧ್ಯರಾತ್ರಿ 01.52
ಗ್ರಹಣ ಮೋಕ್ಷ ಕಾಲ: 03.49 ಬೆಳಗಿನ ಜಾವ
ಭಾರತದಲ್ಲಿಯೂ ಇದೆ ಗ್ರಹಣ:
ಗ್ರಹಣವು ಭಾರತದಲ್ಲಿಯೂ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ.
ಆಷಾಢ ಮಾಸದ ಶುಕ್ಲ ಪೌರ್ಣಿಮೆಯಂದು ಚಂದ್ರ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ ರಾತ್ರಿ 11.54 ರಿಂದ ಪ್ರಾರಂಭವಾಗಿ ರಾತ್ರಿ 03.49ಕ್ಕೆ ಮೋಕ್ಷ ಕಾಲವಾಗಿರುತ್ತದೆ.
ಊಟ ಎಷ್ಟೊತ್ತಿಗೆ ಮಾಡಬೇಕು?
- ಹಗಲು 12.29 ಗಂಟೆಯವರೆಗೆ ಆಹಾರ ಸೇವಿಸಬಹುದು. ಬಾಲಕರು, ವೃದ್ಧರು, ರೋಗಿಗಳು, ಅಶಕ್ತರು ಆ ದಿನ ಮಧ್ಯಾಹ್ನ 03-38ರವರೆಗೂ ಆಹಾರ ಸೇವಿಸಬಹುದು.
- ಗ್ರಹಣ ಮಧ್ಯಕಾಲಾನಂತರ ಅಂದರೆ ರಾತ್ರಿ 01.51ರ ನಂತರ ತರ್ಪಣ ಬಿಡಬಹುದು.
- ಶ್ರಾದ್ಧವು ಜುಲೈ 27, 2018ಕ್ಕೆ ಇದ್ದರೆ, ಮಾರನೇ ದಿನ ಶನಿವಾರ ನಡೆಸಬಹುದು.
- 'ಉತ್ತರಾಷಾಢ' ನಕ್ಷತ್ರದವರೂ, 'ಶ್ರವಣ' ನಕ್ಷತ್ರದವರೂ, 'ಮಕರ', 'ಧನಸ್ಸು' ರಾಶಿಯವರೂ ಈ ಕೆಳಗಿನ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು, ಗ್ರಹಣ ಮುಗಿಯುವವರೆಗೂ ಜತೆಯಲ್ಲಿಟ್ಟುಕೊಳ್ಳಬೇಕು. ಗ್ರಹಣ ಮೋಕ್ಷಾ ನಂತರ ದಕ್ಷಿಣೆ ಸಮೇತ ದಾನ ಮಾಡಬೇಕು.
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಚಂದ್ರಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು ||2||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಚಂದ್ರ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3|
ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳೇನು?
- ಸೂತಕ ಸಮಯವೆಂದು ಭಾವಿಸುವ ಗ್ರಹಣ ಕಾಲದಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಅನಿವಾರ್ಯ...
- ಗ್ರಹಣದ ಆರಂಭ ಅಂತ್ಯಗಳಲ್ಲಿ ಧರಿಸಿದ ಬಟ್ಟೆ ಸಮೇತ ಸ್ನಾನ ಮಾಡ ಬೇಕು.
- ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
- ಚಂದ್ರ ಗ್ರಹಣದ ಸೂತಕವು ಗ್ರಹಣ ಆರಂಭದ ಒಂಬತ್ತು ಗಂಟೆ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
- ಗ್ರಹಣ ಕಾಲದಲ್ಲಿಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.
- ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು.
- ದೇವಾಲಯ ಅಥವಾ ಪೂಜಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು. -
- ಶೌಚಾಲಯವನ್ನು ಬಳಸಬಾರದು.
- ಗ್ರಹಣ ಕಾಲದಲ್ಲಿ ಅಲಂಕಾರ ಮಾಡಿಕೊಳ್ಳಬಾರದು.
- 'ಸರ್ವೇಷಾಮೇವ ವರ್ಣಾನಾಂ ಸೂತಕಂ ರಾಹುಸೂತಕೇ' ಎಲ್ಲರೂ ಗ್ರಹಣ ಕಾಲದಲ್ಲಿ ಮೈಲಿಗೆಯನ್ನು ಆಚರಿಸಬೇಕು.
- ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು.
- ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು.
- ಜನನ ಹಾಗೂ ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.
- ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
- ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.- ಗ್ರಹಣ ಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು. ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನ ಮಾಡಬಹುದು.
- ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂಥವರು, ಹಾಗೆಯೇ ಮಾಡಬೇಕು.
- ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆಯೋ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆ ಹಾಕಿರಬೇಕು.
- ಗ್ರಹಣ ಆರಂಭದಿಂದ ಅಂತ್ಯವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು.
ಅನಾಹುತ ಹೊತ್ತು ತರಲಿವೆಯಾ ರಕ್ತ ಚಂದ್ರ ಗ್ರಹಣ?