
ಮಹಾಭಾರತದ (Mahabharata) ಕೌರವರು- ಪಾಡವರ ವೈರ, ಅದರಿಂದ ನಡೆದ ಕುರುಕ್ಷೇತ್ರ ಯುದ್ಧದ ಕಥೆ ನಿಮಗೆ ಗೊತ್ತಿರುವುದೇ ತಾನೆ. ಕೌರವರು ನೂರು ಮಂದಿ, ಪಾಂಡವರು ಐದು ಮಂದಿ ಎಂಬುದೂ ನಿಮಗೆ ಗೊತ್ತು. ಹಾಗೇ ನೂರು ಮಂದಿ ಕೌರವರ ಜೊತೆಗೆ ಜನಿಸಿದ ಒಬ್ಬಳೇ ಒಬ್ಬಳು ತಂಗಿಯ ಬಗ್ಗೆ ನಿಮಗೆ ಹೆಚ್ಚು ಗೊತ್ತಿರಲಾರದು. ಆಕೆಯ ಹೆಸರು ದುಶ್ಶಲೆ. ಯುದ್ಧದ ನಂತರ ಬಹುಕಾಲ ಉಳಿದವಳು ಇವಳು. ಮಹಾಭಾರತದ ಕವಿ ವೇದವ್ಯಾಸರು ಇವಳ ಬಗ್ಗೆ ಹೆಚ್ಚೇನೂ ಬರೆದಿಲ್ಲ. ಆದರೆ ಬರೆದ ಸ್ವಲ್ಪ ಕತೆಯಿಂದಲೇ ನಾವು ಆಕೆಯ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಬಹುದಾಗಿದೆ.
ಸುಂದರಿ ದುಶ್ಶಲೆಯ ಬಾಲ್ಯ ಪ್ರೀತಿಯಿಂದ ತುಂಬಿದ್ದರೂ, ಆಕೆಯ ಮುಂದಿನ ಜೀವನವು ದುಃಖದಿಂದ ತುಂಬಿತ್ತು. ಸಿಂಧು ದೇಶದ ರಾಜ ವೃದ್ಧಕ್ಷತ್ರ ಎಂಬಾತನ ಮಗ ಜಯದ್ರಥನೊಂದಿಗೆ ಆಕೆಯ ಮದುವೆ ಮಾಡಲಾಯಿತು. ಆತನನ್ನು ಮದುವೆಯಾದ ದಿನದಿಂದಲೇ ಅವಳ ಸಂಕಷ್ಟ ಪ್ರಾರಂಭವಾಯಿತು. ಆತನನ್ನು ಸೈಂಧವ ಎಂದೂ ಕರೆಯುತ್ತಾರೆ. ಅವನು ಸ್ವಭಾವತಃ ಲಂಪಟ, ದುಷ್ಟನಾಗಿದ್ದ. ಇವರಿಗೆ ಸುರಥ ಎಂಬ ಮಗ ಜನಿಸಿದ. ಜಯದ್ರಥನು ಶಕ್ತಿಶಾಲಿಯೂ ಆಗಿದ್ದ. ಒಮ್ಮೆ, ಪಾಂಡವರು ವನವಾಸದಲ್ಲಿದ್ದಾಗ, ಅವರಿಲ್ಲದ ಸಮಯದಲ್ಲಿ ಕುಟೀರದಲ್ಲಿ ಒಂಟಿಯಾಗಿದ್ದ ದ್ರೌಪದಿಯನ್ನು ಅಪಹರಿಸಿದ. ಭೀಮಾರ್ಜುನರು ಅವನನ್ನು ಬೆನ್ನಟ್ಟಿ, ಕೊಲ್ಲಲು ಮುಂದಾದರು. ಆದರೆ ತಂಗಿಯ ಗಂಡ, ಆಕೆ ವಿಧವೆಯಾದಿರಲಿ ಎಂಬ ಕಾರಣದಿಂದ ಆತನನ್ನು ಕೊಲ್ಲದೆ ತಲೆ ಬೋಳಿಸಿ ಅವಮಾನ ಮಾಡಿ ಬಿಟ್ಟುಬಿಟ್ಟರು.
ಮುಂದೆ ಹಲವು ವರ್ಷಗಳ ಬಳಿಕ ಪಾಂಡವರು ಅಶ್ವಮೇಧ ಯಾಗ ಮಾಡಿದರು. ಯಾಗದ ಕುದುರೆ ಸಿಂಧು ದೇಶಕ್ಕೆ ಬಂದಿತು. ಅದರ ಜೊತೆಗೆ ಅರ್ಜುನನ ನೇತೃತ್ವದಲ್ಲಿ ದೊಡ್ಡ ಸೈನ್ಯ. ಇದನ್ನು ಕಂಡು, ತನ್ನ ತಂದೆಯಂತೆಯೇ ತನ್ನನ್ನೂ ಪಾರ್ಥ ಕೊಲ್ಲುವನೆಂದು ಹೆದರಿ ಸುರಥ ಸತ್ತೇ ಹೋದ. ದುಶ್ಶಲೆ ಈಗ ಮಗನನ್ನೂ ಕಳೆದುಕೊಂಡಳು. ಅಷ್ಟು ಹೊತ್ತಿಗಾಗಲೇ ಸುರಥನಿಗೆ ಮದುವೆಯಾಗಿ ಒಬ್ಬ ಮಗನೂ ಹುಟ್ಟಿದ್ದ. ಮೊಮ್ಮಗನನ್ನು ಕರೆದುಕೊಂಡು ದುಶ್ಶಲೆ ಅರ್ಜುನನ ಬಳಿಗೆ ಬಂದು ಗೋಳಾಡಿದಳು.
ಅರ್ಜುನ ದುಶ್ಶಲೆಗೆ ಅಭಯ ನೀಡಿದ. ಆಕೆಯ ಮೊಮ್ಮಗನನ್ನು ಸಿಂಧು ದೇಶದ ರಾಜನನ್ನಾಗಿ ಮಾಡಿದ. ನೂರೈದು ಬಲಿಷ್ಠ ಸಹೋದರರು ಇದ್ದರೂ ದುಶ್ಶಲೆ ಜೀವನಪೂರ್ತಿ ಕಷ್ಟ- ದುಃಖಗಳನ್ನು ಅನುಭವಿಸಿದ್ದಳು ಎಂದು ಇದರಿಂದ ತೀರ್ಮಾನಕ್ಕೆ ಬರಬಹುದು. ಬಾಲ್ಯ ಹೊರತುಪಡಿಸಿದ ನಂತರದ ಕಾಲದಲ್ಲಿ ಆನಂದವನ್ನು ವಿಧಿ ಅವಳ ಹಣೆಯಲ್ಲಿ ಬರೆದಿರಲಿಲ್ಲ.