ಕಾಂತರಾ ಸಿನಿಮಾ ಹಿಟ್ ಆಗಿದ್ದೇ ತಡ, ಕರಾವಳಿಗೆ ಹೊರತಾದ ಜಿಲ್ಲೆಗಳಲ್ಲೂ ತುಳುನಾಡ ದೈವಗಳ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿದೆ. ಜನರ ಈ ಕುತೂಹಲವನ್ನೇ ಬಂಡವಾಳ ಮಾಡಿಕೊಳ್ಳಲು ಕೆಲ ದಂಧೆಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂಥವರಿಗೆ ಇದೀಗ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಿದೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ನ.25) : ಕಾಂತರಾ ಸಿನಿಮಾ ಹಿಟ್ ಆಗಿದ್ದೇ ತಡ, ಕರಾವಳಿಗೆ ಹೊರತಾದ ಜಿಲ್ಲೆಗಳಲ್ಲೂ ತುಳುನಾಡ ದೈವಗಳ ಬಗ್ಗೆ ಇನ್ನಿಲ್ಲದ ಕುತೂಹಲ ಮೂಡಿದೆ. ಜನರ ಈ ಕುತೂಹಲವನ್ನೇ ಬಂಡವಾಳ ಮಾಡಿಕೊಳ್ಳಲು ಕೆಲ ದಂಧೆಕೋರರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂಥವರಿಗೆ ಇದೀಗ ಬಹಿಷ್ಕಾರದ ಎಚ್ಚರಿಕೆ ಕೇಳಿಬಂದಿದೆ.
ಕರಾವಳಿಯ ದೈವಗಳು ಈಗ ಬೆಂಗಳೂರು, ಮೈಸೂರು ಕಡೆಗೂ ಪ್ರವಾಸ ಹೊರಟಿವೆ. ಕಾಂತರಾ ಸಿನಿಮಾ ಬಂದ ಬೆನ್ನಲ್ಲೇ ಕರಾವಳಿಯ ದೈವಗಳಾದ ಪಂಜುರ್ಲಿ, ಗುಳಿಗ, ಕೊರಗಜ್ಜ, ಮಂತ್ರ ದೇವತೆ ಮುಂತಾದ ಶಕ್ತಿಗಳ ಬಗ್ಗೆ ಹೊರ ಜಿಲ್ಲೆಗಳಲ್ಲೂ ವಿಪರೀತ ಆಸಕ್ತಿ ಮೂಡಿಬಂದಿದೆ. ಜೀವನದ ಕಷ್ಟಗಳಿಂದ ರೋಸಿ ಹೋದವರು ದೈವಗಳ ಆಶೀರ್ವಾದಕ್ಕೆ ಕಾಯುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನೇ ಬಂಡವಾಳ ಮಾಡಿಕೊಂಡು ಇದೀಗ ಕರಾವಳಿಗೆ ಹೊರತಾದ ಜಿಲ್ಲೆಗಳಲ್ಲೂ ದೈವಾರಾಧನೆ ಶುರುವಾಗಿದೆ.
'ಕಾಂತಾರ' ಹಾಡಿನ ವಿವಾದ; ಹೊಂಬಾಳೆಗೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ಇತ್ತೀಚಿಗಷ್ಟೇ ಮೈಸೂರಿನಲ್ಲಿ ಒಂದು ದೈವಕೋಲ ನಡೆದಿತ್ತು. ಈ ನೇಮೋತ್ಸವದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಬೆಂಗಳೂರಿನಲ್ಲೂ ಅಲ್ಲಲ್ಲಿ ಕಟ್ಟೆ ಕಟ್ಟಿಕೊಂಡು ಪೇಟಿಎಂ ಮೂಲಕ ಹಣ ವಸೂಲಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಎಲ್ಲಾ ಬೆಳವಣಿಗೆ ಕರಾವಳಿಯ ನಿಜವಾದ ದೈವಾರಾಧಕರನ್ನು ಕೆರಳಿಸಿದೆ.
ದೈವರಾದನೆ ದಂಧೆ ಅಲ್ಲ, ಕರಾವಳಿಯ ದೈವಗಳಿಗೆ ಇತಿಹಾಸವಿದೆ. ಆ ದೈವಗಳು ತುಳುನಾಡಿನಲ್ಲಿ ನೆಲೆ ನಿಂತ ಬಗ್ಗೆ ಮೌಕಿಕ ಸಾಹಿತ್ಯವಾದ ಪಾಡ್ದನಗಳ ದಾಖಲೆ ಇದೆ. ಅದಕ್ಕೆ ಹೊರತಾಗಿ ಹೊರ ಜಿಲ್ಲೆಗಳಲ್ಲಿ ದೈವಾರಾಧನೆ ನಡೆಯೋದಾದರೂ ಹೇಗೆ? ಎಂದು ಪ್ರಶ್ನೆ ಸುತ್ತಿದ್ದಾರೆ.
ಅಷ್ಟೇ ಅಲ್ಲ ಕರಾವಳಿಯ ಅನೇಕ ದೈವರಾಧಕರು ಬೆಂಗಳೂರು ಮೈಸೂರು ಕಡೆಗೆ ಹೋಗಿ ಈ ದಂಧೆಯಲ್ಲಿ ಕೈಜೋಡಿಸುತ್ತಿದ್ದಾರೆ. ಅಂಥವರಿಗೆ ಇದೀಗ ಕರಾವಳಿಯ ದೈವಚಾಕರಿಯವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮ ಮೀರಿ ಹೊರ ಜಿಲ್ಲೆಗಳಲ್ಲಿ ದೈವಾರಾಧನೆ ನಡೆಸಿದರೆ ಕರಾವಳಿಯಲ್ಲಿ ನಡೆಯುವ ಆರಾಧನೆಯಲ್ಲಿ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.
ದೈವಾರಾಧನೆ ಯಾವುದೇ ವ್ಯವಹಾರವಿಲ್ಲದ ಅತ್ಯಂತ ಸರಳವಾದ ಆಚರಣೆ. ಈ ಹಿಂದೆ ಕರಾವಳಿ ಭಾಗದಲ್ಲೂ ದೈವಗಳ ಛದ್ಮವೇಶ ಧರಿಸುವ ಪರಿಪಾಠ ಇತ್ತು. ಆದರೆ ಜಾಗೃತಗೊಂಡ ಜನರು ಇದೀಗ ದೈವರಾಧನೆಯನ್ನು ಅತ್ಯಂತ ಪುಣ್ಯ ಭಾವದಲ್ಲಿ ಕಾಣುತ್ತಿದ್ದಾರೆ. ಜನ ಪೇಟಿಎಂ ದಂಧೆ ಕೋರರಿಂದ ಮೋಸ ಹೋಗಬಾರದು ಎಂದು ಎಚ್ಚರಿಸಿದ್ದಾರೆ.
ಕಾಂತರಾ ಸಿನಿಮಾ ದೈವಾರಾಧನೆಯ ಸತ್ವವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದೆ, ಈ ಹೆಗ್ಗಳಿಕೆಯ ನಡುವೆಯೂ ಜನಪ್ರಿಯತೆಯನ್ನು ದುರ್ಬಳಕೆ ಮಾಡಿಕೊಳ್ಳುವವರ ಬಗ್ಗೆ ಜನಸಾಮಾನ್ಯರು ಎಚ್ಚರದಿಂದಿರಬೇಕು.
ಈ ಎಲ್ಲ ಬೆಳವಣಿಗೆಗಳ ಕುರಿತು ಚಿಂತಕ ಶ್ರೀಕಾಂತ ಶೆಟ್ಟಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ, ತುಳುನಾಡನ್ನು ಬಿಟ್ಟು ನೇಮಗಳು ನಡೆಯುತ್ತಿರುವುದು ಹೊಸತಲ್ಲ.
ಮುಂಬೈ ನಲ್ಲಿ ಈ ಹಿಂದೆಯೇ ದೈವಗಳ ಆರಾಧನೆ ನಡೆಸಿದ್ದಾರೆ. ಆದರೆ ಈಗ ಆರಂಭವಾಗಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಬಸ್ ನಿಲ್ದಾಣದಲ್ಲಿ ಬೋರ್ಡ್ ಹಾಕಿ ಕುಳಿತುಕೊಳ್ಳುವವರು ದೈವಗಳ ಹೆಸರು ಹೇಳಲು ಆರಂಭಿಸಿದ್ದಾರೆ. ಕೊರಗಜ್ಜ ಮಂತ್ರ ದೇವತೆ ಗುಳಿಗ ಪಂಜರ್ಲಿ ದೈವಗಳ ಹೆಸರು ಹಾಕಿಕೊಂಡು ಕಟ್ಟೆ ಮಾಡುತ್ತಿದ್ದಾರೆ. ಪೇಟಿಎಂ ಅಲ್ಲಿ ಹಣ ತೆಗೆದುಕೊಂಡು ಗಂಧ ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ದೈವಗಳ ಹೆಸರಲ್ಲಿ ದಂಧೆ ಶುರು ಮಾಡಿದ್ದಾರೆ. ದುಡಿದು ತಿನ್ನಲು ಆಗದವರು ಈ ಕೃತ್ಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ನಮ್ಮ ತುಳುನಾಡ ದೈವಗಳು ಅವರ ಕೈಯಲ್ಲಿ ಸಿಲುಕಿ ನಲಗುವಂತಾಗಿದೆ, ಇದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ. ನಮ್ಮ ದೈವಾರಾಧನೆ ಅತ್ಯಂತ ಪರಿಪೂರ್ಣ ಹಾಗೂ ಪರಿಶುದ್ಧವಾದ ಆಚರಣೆ. ಹಣ ವ್ಯವಹಾರ ನಡೆಸದೆ ನಿಷ್ಕಲ್ಮಶವಾಗಿ ದೈವರಾದನೆ ನಡೆಸುತ್ತೇವೆ. ಸಂಪೂರ್ಣ ಶರಣಾಗತಿಯಿಂದ ದೈವಾರಾಧನೆ ಮಾಡುತ್ತೇವೆ. ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ಕೊಡುವ ಭಕ್ತರೇ ದೈವಾಲಯಗಳನ್ನು ಗಮನಿಸಿ. ತುಳುನಾಡಿನ ದೈವಾಲಯಗಳಲ್ಲಿ ಎಷ್ಟು ಸರಳವಾಗಿ ಆರಾಧನೆ ನಡೆಯುತ್ತೆ ನೋಡಿ. ವ್ಯಾಪಾರಿ ದೃಷ್ಟಿಯಿಂದ ದೈವಗಳನ್ನು ನೋಡುವುದನ್ನು ಕರಾವಳಿಗರು ಕೂಡ ಬಿಡಬೇಕು.
ಉಡುಪಿಯಲ್ಲಿ ಜ್ಯೂ. ರಿಷಬ್ ಶೆಟ್ಟಿ: ಇವರು ನೋಡೋದಕ್ಕೆ ಸೇಮ್ 'ಕಾಂತಾರ' ಶಿವು
ಆಗ ನಮಗೆ ನೈತಿಕವಾದ ಬಲ ಬರುತ್ತೆ. ಹೊರ ಜಿಲ್ಲೆಗಳಿಗೆ ಹೋಗಿ ವ್ಯಾಪಾರಿಕರಣ ಮಾಡುವ ಕರಾವಳಿಯ ದೈವಾರಾದಕರನ್ನು ಮೊದಲು ಗುರುತಿಸಿ. ದೈವ ಕಟ್ಟುವವರು, ಮಧ್ಯಸ್ಥರು, ದರ್ಶನ ಪಾತ್ರಿಗಳು, ಮುಕ್ಕಾಲ್ತಿ ಕೆಲಸಕ್ಕೆ ಹೋಗುವವರನ್ನು ಗುರುತಿಸಿ.ಅವರಿಗೆ ನಾವು ಮೊದಲು ತಿಳಿ ಹೇಳಬೇಕು. ಅಗತ್ಯ ಬಿದ್ದರೆ ಅಂತವರನ್ನು ಬಹಿಷ್ಕರಿಸಬೇಕು. ದೈವಕ್ಕೆ ಸಮರ್ಪಿತ ವ್ಯಕ್ತಿ ಸ್ವಾರ್ಥ ಬಿಟ್ಟವ ಮಾತ್ರ ಆರಾಧನೆ ಮಾಡಬಹುದು ಎಂದು ಹೇಳಿದ್ದಾರೆ.