
ಹಿಂದೂ ಸನಾತನ ಧರ್ಮದಲ್ಲಿ ಪ್ರಥಮ ಪೂಜಿತ, ಸಕಲ ವಿಘ್ನಗಳ ನಿವಾರಕ ಮಹಾಗಣಪತಿಯ ಆರಾಧನೆಗೆ ಅತ್ಯಂತ ಪಾವಿತ್ರ್ಯತೆಯ ಸ್ಥಾನವಿದೆ. ಬುದ್ಧಿ, ಸಿದ್ಧಿ ಮತ್ತು ಜ್ಞಾನದ ಅಧಿದೇವತೆಯಾಗಿರುವ ಗಣೇಶನನ್ನು ಯಾವುದೇ ಶುಭಕಾರ್ಯ ಆರಂಭಿಸುವ ಮುನ್ನ ಭಕ್ತಿಪೂರ್ವಕವಾಗಿ ಪ್ರಾರ್ಥಿಸುವುದು ನಮ್ಮ ಸಂಪ್ರದಾಯ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮನೆ-ಮನಗಳಲ್ಲಿ, ದೇವಾಲಯಗಳಲ್ಲಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ, ವಿಧಿ-ವಿಧಾನಗಳಿಂದ ಪೂಜಿಸಿ ಸಂಭ್ರಮಿಸುತ್ತೇವೆ.
ಯೋಗ ಶಾಸ್ತ್ರ ಮತ್ತು ಅಧ್ಯಾತ್ಮ ಸಂಪ್ರದಾಯದ ಪ್ರಕಾರ ಗಣೇಶ ಕೇವಲ ಹೊರಗಿನ ವಿಗ್ರಹದಲ್ಲಿ ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯನ ದೇಹದೊಳಗೂ ಜ್ಯೋತಿರೂಪಿಯಾಗಿ ನೆಲಸಿದ್ದಾನೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ನಮ್ಮ ದೇಹದ ಚೇತನ ಶಕ್ತಿಯ ಅಡಿಪಾಯವಾಗಿರುವ ‘ಮೂಲಾಧಾರ ಚಕ್ರ’ದ ಅಧಿಪತಿಯೇ ಸಾಕ್ಷಾತ್ ಶ್ರೀ ಗಣೇಶ!
ಯೋಗ ಸಂಪ್ರದಾಯದ ಪ್ರಕಾರ.. ಮಾನವ ದೇಹದಲ್ಲಿ ಬ್ರಹ್ಮಾಂಡದ ಶಕ್ತಿಯನ್ನು ಗ್ರಹಿಸುವ ಏಳು ಪ್ರಮುಖ ಶಕ್ತಿ ಕೇಂದ್ರಗಳಿದ್ದು, ಅವುಗಳನ್ನು ಸಪ್ತ ಚಕ್ರಗಳು ಎಂದು ಕರೆಯಲಾಗುತ್ತದೆ. ಅವುಗಳೆಂದರೆ..
ಈ ಏಳು ಚಕ್ರಗಳಲ್ಲಿ ಮೊದಲನೆಯದು ಮತ್ತು ಅತ್ಯಂತ ಪ್ರಮುಖವಾದ ಅಡಿಪಾಯವೇ ಮೂಲಾಧಾರ ಚಕ್ರ. ಇದು ಬೆನ್ನುಹುರಿಯ ತಳಭಾಗದಲ್ಲಿದೆ (ಗುದ ಮತ್ತು ಜನನಾಂಗದ ಮಧ್ಯಭಾಗ). ಹೇಗೆ ಯಾವುದೇ ಕಟ್ಟಡ ಗಟ್ಟಿಯಾಗಿ ನಿಲ್ಲಲು ಬಲವಾದ ಅಡಿಪಾಯ (Foundation) ಬೇಕೋ, ಹಾಗೆಯೇ ಮಾನವ ಜೀವನ, ಆರೋಗ್ಯ ಮತ್ತು ಚೈತನ್ಯಕ್ಕೆ ಈ ಮೂಲಾಧಾರವೇ ಆಧಾರ. ಈ ಪವಿತ್ರ ಚಕ್ರದ ದೈವಿಕ ರಕ್ಷಕನೇ ಶ್ರೀ ಗಣೇಶ.
ಗಣೇಶನ ಸ್ತುತಿಗಳಲ್ಲಿ ಅತ್ಯಂತ ಶ್ರೇಷ್ಠವೆನಿಸಿದ 'ಶ್ರೀ ಗಣಪತಿ ಅಥರ್ವಶೀರ್ಷ' ಉಪನಿಷತ್ತಿನಲ್ಲಿ ಸ್ವತಃ ಗಣೇಶನಿಗೆ ಋಷಿಗಳು ಹೀಗೆ ನಮಸ್ಕರಿಸುತ್ತಾರೆ..
ತ್ವಂ ಮೂಲಾಧಾರಸ್ಥಿತೋಽಸಿ ನಿತ್ಯಮ್
(ಅರ್ಥ: ಹೇ ಗಣಪತಿಯೇ, ನೀನು ಸದಾಕಾಲ ಜೀವಿಯ ಮೂಲಾಧಾರ ಚಕ್ರದಲ್ಲಿ ಶಾಶ್ವತವಾಗಿ ನೆಲೆಸಿದ್ದೀಯ).
ಈ ಮಂತ್ರದ ಪ್ರಕಾರ, ಗಣೇಶನು ಕೇವಲ ಪೂಜಾ ಕೋಣೆಯಲ್ಲಷ್ಟೇ ಅಲ್ಲ, ನಮ್ಮ ಪ್ರಾಣಶಕ್ತಿಯ ಆರಂಭಿಕ ಬಿಂದುವಾದ ಮೂಲಾಧಾರದಲ್ಲಿ ಸದಾ ಜಾಗೃತನಾಗಿದ್ದುಕೊಂಡು, ನಮ್ಮ ದೇಹ ಮತ್ತು ಮನಸ್ಸಿಗೆ ಸ್ಥಿರತೆಯನ್ನು ಕರುಣಿಸುತ್ತಿದ್ದಾನೆ.
ಯೋಗ ಸಾಧನೆಯಲ್ಲಿ ಅತ್ಯುನ್ನತವಾದದ್ದು 'ಕುಂಡಲಿನಿ ಜಾಗೃತಿ'. ಬೆನ್ನುಮೂಳೆಯ ಬುಡದಲ್ಲಿ ಸುಪ್ತವಾಗಿರುವ ದೈವಿಕ ಕುಂಡಲಿನಿ ಶಕ್ತಿಯು ಮೂಲಾಧಾರದಿಂದಲೇ ಮೇಲ್ಮುಖವಾಗಿ ಸಂಚರಿಸಿ, ಸಹಸ್ರಾರ ಚಕ್ರವನ್ನು ತಲುಪಿದಾಗ ಸಾಧಕನಿಗೆ ಆತ್ಮಸಾಕ್ಷಾತ್ಕಾರವಾಗುತ್ತದೆ ಎಂಬ ನಂಬಿಕೆಯಿದೆ.
ಈ ಆಧ್ಯಾತ್ಮಿಕ ಪಯಣ ಸುಲಭವಲ್ಲ. ಈ ಹಾದಿಯಲ್ಲಿ ಬರುವ ನೂರಾರು ಆಂತರಿಕ ಅಡೆತಡೆಗಳು, ಕಾಮ, ಕ್ರೋಧ, ಭಯ ಮತ್ತು ಅಸ್ಥಿರತೆಯನ್ನು ನಿವಾರಿಸಲು ಗಣೇಶನ ಕೃಪೆ ಅತ್ಯಗತ್ಯ. ಮೂಲಾಧಾರದಲ್ಲಿ ಗಣೇಶನನ್ನು ಧ್ಯಾನಿಸಿ, ಮನಸ್ಸನ್ನು ಸ್ಥಿರಗೊಳಿಸಿಕೊಂಡಾಗ ಮಾತ್ರ ಒಳಗಿನ ಶಕ್ತಿ ಜಾಗೃತಗೊಳ್ಳಲು ಸಾಧ್ಯ. ಹೀಗಾಗಿಯೇ ಆತ ಸಕಲ ಸಾಧನೆಗಳಿಗೂ ವಿಘ್ನ ನಿವಾರಕ.
ಗಣೇಶ ಚತುರ್ಥಿ ಎಂದರೆ ಕೇವಲ ಮೋದಕ, ಕಡುಬುಗಳ ನೈವೇದ್ಯ ಮಾಡಿ, ವಿಗ್ರಹವನ್ನು ಸಂಭ್ರಮದಿಂದ ವಿಸರ್ಜಿಸುವುದಷ್ಟೇ ಅಲ್ಲ; ಅದು ನಮ್ಮ ಅಂತರಂಗವನ್ನು ಶುದ್ಧೀಕರಿಸಿಕೊಳ್ಳುವ ಮಹಾಪರ್ವ. ಗಣಪತಿಯು ಭೂತತ್ವಕ್ಕೆ (ಪೃಥ್ವಿ ತತ್ವ) ಸಂಬಂಧಿಸಿದ ದೇವತೆ. ಭೂಮಿಯಂತೆ ತಾಳ್ಮೆ, ದೃಢತೆ ಮತ್ತು ಸ್ಥಿರತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಗಣೇಶ ತತ್ವ. ಹಬ್ಬದ ದಿನ ಗಣೇಶನ ಮೂರ್ತಿಯನ್ನು ಪೂಜಿಸುವಾಗ, ಕಣ್ಣುಮುಚ್ಚಿ ನಮ್ಮ ಬೆನ್ನುಮೂಳೆಯ ತಳಭಾಗದಲ್ಲಿ ಕೆಂಪು ಬಣ್ಣದ ತೇಜಸ್ಸಿನಿಂದ ಕಂಗೊಳಿಸುವ 'ಮೂಲಾಧಾರ ಗಣಪತಿ'ಯನ್ನು ಧ್ಯಾನಿಸಬೇಕು.
ಹೊರಗಿನ ಶತ್ರುಗಳಿಗಿಂತ ನಮ್ಮೊಳಗಿನ ಕೆಟ್ಟ ಆಲೋಚನೆಗಳು, ಆಲಸ್ಯ ಮತ್ತು ನಕಾರಾತ್ಮಕ ಭಾವನೆಗಳೇ ನಮಗೆ ದೊಡ್ಡ ವಿಘ್ನಗಳು. ಅವುಗಳನ್ನು ದೂರಮಾಡಲು ಗಣೇಶನಲ್ಲಿ ಬೇಡಿಕೊಳ್ಳಬೇಕು. ಯೋಗ, ತಂತ್ರ ಮತ್ತು ಪುರಾಣಗಳು ಸಾರುವಂತೆ ಗಣೇಶನು ಪ್ರತಿಯೊಬ್ಬರ ಉಸಿರಿನಲ್ಲೂ, ಅಸ್ತಿತ್ವದ ಮೂಲದಲ್ಲೂ ರಕ್ಷಕನಾಗಿ ನಿಂತಿದ್ದಾನೆ. ಈ ಬಾರಿಯ ಗಣೇಶ ಹಬ್ಬದಂದು ಹೊರಗಡೆ ಗಣೇಶನಿಗೆ ಭಕ್ತಿ ಸಮರ್ಪಿಸುವ ಜೊತೆಗೆ, ನಮ್ಮೊಳಗೆ ನೆಲೆಸಿರುವ ಆ ಪ್ರಥಮ ಪೂಜಿತನನ್ನು ಶ್ರದ್ಧೆಯಿಂದ ನೆನೆಯೋಣ. ನಮ್ಮ ಮನಸ್ಸಿನ ಚಂಚಲತೆಯನ್ನು ಕಳೆದು, ಜೀವನದಲ್ಲಿ ಸದಾ ಶಾಂತಿ, ನೆಮ್ಮದಿ ಮತ್ತು ಸ್ಥಿರತೆ ನೀಡುವಂತೆ ಆ ವಿಘ್ನರಾಜನ ಪಾದಗಳಿಗೆ ಶರಣಾಗೋಣ.