
ಭಾಗವತ ಪುರಾಣ, ಹರಿವಂಶದಲ್ಲಿ, ದಾಸರ ಭಜನೆ ಕೀರ್ತನೆ ಹರಿಕಥೆ ಇತ್ಯಾದಿಗಳಲ್ಲಿ ಮತ್ತೆ ಮತ್ತೆ ಬರುವ ಉಲ್ಲೇಖ ಎಂದರೆ, ಶ್ರೀಕೃಷ್ಣನು (Sri Krishna) 16,108 ಸ್ತ್ರೀಯರನ್ನು ಮದುವೆ ಆಗಿದ್ದ ಎಂಬುದು. ಇದು ಹೌದೆ? ಹೌದಾಗಿದ್ದರೆ ಶ್ರೀಕೃಷ್ಣ 16,108 ಮಹಿಳೆಯರನ್ನು ಏಕೆ ಮದುವೆಯಾದ? ಅಷ್ಟೂ ಮಂದಿಯನ್ನು ಸಂಭಾಳಿಸಲು ಅವನಿಗೆ ಸಾಧ್ಯವಿತ್ತೆ? ಹಾಗೆ ಮದುವೆಯಾದುದರಿಂದ ಇತರ ಅರ್ಹ ಗಂಡಸರಿಗೆ ಅವನು ಅನ್ಯಾಯ ಮಾಡಿದಂತಾಗಲಿಲ್ಲವೆ? ಇದು ಸಾಂಕೇತಿಕತೆಯೇ? ಪವಾಡವೇ? ಸಾಮಾಜಿಕ ಕ್ರಾಂತಿಯೇ?
ಈ ಕತೆ ಕೇವಲ ಪುರಾಣವಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅದು ನ್ಯಾಯ, ಗೌರವ ಮತ್ತು ದೈವಿಕ ಪ್ರೀತಿಯ ಅನಂತ ಸಾಮರ್ಥ್ಯದ ಬಗ್ಗೆ ಇರುವ ಅಸಾಧಾರಣ ಕಥೆ. ಇದು ಗೊತ್ತಾಗಲು ನರಕಾಸುರನ ಕ್ರೌರ್ಯದ ಕಥೆಯ ಬಗ್ಗೆ ನಿಮಗೆ ತಿಳಿಯಬೇಕು.
ಕೃಷ್ಣನ ಅಷ್ಟಮಹಿಷಿಯರು ಅಂದರೆ ಎಂಟು ಹೆಂಡತಿಯರು ಮಾತ್ರ ಅವನು ಸ್ವಯಂವರ ಮತ್ತಿತರ ವಿಧಾನಗಳಲ್ಲಿ ಮದುವೆಯಾದವರು. ಇನ್ನುಳಿದ 16,100 ಹೆಂಡತಿಯರು ನರಕಾಸುರ ಎಂಬ ರಾಕ್ಷಸನಿಂದ ಕ್ರೂರವಾಗಿ ಬಂಧಿಸಲ್ಪಟ್ಟ ಮಹಿಳೆಯರಾಗಿದ್ದರು. ಆತ ಅವರನ್ನು ಯಜ್ಞದಲ್ಲಿ ಬಲಿ ಕೊಡಲೆಂದು ತಂದಿಟ್ಟುಕೊಂಡಿದ್ದ. ನರಕಾಸುರನನ್ನು ಕೊಂದ ಬಳಿಕ ಕೃಷ್ಣ ಅವರನ್ನು ಬಿಡುಗಡೆ ಮಾಡಿದ. ಆದರೆ ಮುಂದೇನು? ಅವರು ಎಲ್ಲಿ ಹೋಗಬೇಕು? ನರಕನಂಥ ಖೂಳರ ಸೆರೆಮನೆಯಲ್ಲಿ ಇದ್ದ ಕಾರಣ, ಅವರನ್ನು ಸಮಾಜ ಕಳಂಕಿತೆಯರಂತೆ ನೋಡುತ್ತದೆ. ಶಾಶ್ವತವಾಗಿ ತಿರಸ್ಕರಿಸುತ್ತದೆ ಮತ್ತು ಅವಮಾನಿಸುತ್ತದೆ.
ಆಗ ಅವರು ನಾವೇನು ಮಾಡಲಿ ಕೃಷ್ಣಾ ಎಂದು ಅವನ ಮೊರೆ ಹೋದರು. ಅವರ ಘನತೆ, ಪಾವಿತ್ರ್ಯಗಳನ್ನು ಎತ್ತಿ ಹಿಡಿಯಲು ಕೃಷ್ಣ ಅವರನ್ನು ತಾನೇ ಸ್ವೀಕರಿಸಿದ. ಅವರಿಗೆ ರಕ್ಷಣೆ, ಸ್ಥಾನಮಾನ ಮತ್ತು ಹೊಸ ಜೀವನವನ್ನು ನೀಡಿದ. ಅದು ಹೇಗೆ? ತಾನೇ ಅವರ ಗಂಡನೆಂದು ಘೋಷಿಸಿದ. ಅವರನ್ನು ದ್ವಾರಕೆಗೆ ಕರೆದೊಯ್ದ. ಅದೊಂದು ಬಗೆಯ ಧೀರೋದಾತ್ತ ನಿಲುವಾಗಿತ್ತು. ರಕ್ಷಣೆ, ಜವಾಬ್ದಾರಿ ಮತ್ತು ಸಾಮಾಜಿಕ ನ್ಯಾಯದ ಕೆಲಸ ಆಗಿತ್ತು.
ಪುರಾಣ ಗ್ರಂಥಗಳು ಈ ಸಂಖ್ಯೆಯಲ್ಲಿ ವಿಭಿನ್ನತೆ ತೋರಿಸಿವೆ- 16,000, 16,100, ಅಥವಾ 16,108 ಹೆಂಡತಿಯರು ಎಂದು. ನಂತರದಲ್ಲಿ ಕೃಷ್ಣನ ಎಂಟು ಮುಖ್ಯ ರಾಣಿಯರು ಖಾಯಂ ಎನಿಸಿದರು. ನೂರ ಎಂಟು ಎಂಬುದು ಹಿಂದೂ ಧರ್ಮದಲ್ಲಿ ಪವಿತ್ರ ಸಂಖ್ಯೆ ಎಂಬುದು ನಿಮಗೆ ಗೊತ್ತಿದೆ.
ಒಮ್ಮೆ ನಾರದರು ದ್ವಾರಕೆಗೆ ಬಂದರು. ಶ್ರೀಕೃಷ್ಣನು ಹದಿನಾರು ಸಾವಿರ ಹೆಂಡತಿಯರೊಡನೆ ಹೇಗೆ ಇರುತ್ತಾನೆ ಎಂದು ತಿಳಿಯಬೇಕಿತ್ತು ಅವರಿಗೆ. ನೋಡಿದರು- ಕೃಷ್ಣ ಒಬ್ಬಳ ಮನೆಯಲ್ಲಿ ಮಲಗಿದ್ದ, ಮತ್ತೊಬ್ಬಳಲ್ಲಿ ಅಡುಗೆ ಮಾಡುತ್ತಿದ್ದ, ಇನ್ನೊಂದು ಮನೆಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಿದ್ದ, ಬೇರೊಂದೆಡೆ ಸಲ್ಲಾಪದಲ್ಲಿ ತೊಡಗಿದ್ದ. ಪ್ರತಿಯೊಬ್ಬ ಹೆಂಡತಿಯೂ ಶ್ರೀಕೃಷ್ಣ ತನ್ನ ಮನೆಯಲ್ಲೇ ಇದ್ದಾನೆ ಎಂದು ಹೇಳಿದಳು. ಪ್ರತಿಯೊಬ್ಬಳೂ ಸಂಪೂರ್ಣವಾಗಿ, ವೈಯಕ್ತಿಕವಾಗಿ ಕೃಷ್ಣನನ್ನು ಅನುಭವಿಸಿದ್ದಳು. ಇದೊಂದು ದೈವಿಕ ಪವಾಡ. ಇದು ಕೃಷ್ಣನ ಅಪರಿಮಿತ ಸಾಮರ್ಥ್ಯದ ಸಂಕೇತ.
ಅನೇಕ ವಿದ್ವಾಂಸರು, ಕೃಷ್ಣನ ಸಾವಿರಾರು ಹೆಂಡತಿಯರನ್ನು ಅಸಂಖ್ಯಾತ ಭಕ್ತರ ಸಂಕೇತವೆಂದು ವ್ಯಾಖ್ಯಾನಿಸುತ್ತಾರೆ. ಪ್ರತಿಯೊಬ್ಬ ಭಕ್ತನೂ ದೇವರ ಜೊತೆಗೆ ವಿಶಿಷ್ಟ ಮತ್ತು ವೈಯಕ್ತಿಕ ಅನುಬಂಧವನ್ನು ಪಡೆಯುತ್ತಾರೆ. ಅವನು ಪ್ರತಿ ಆತ್ಮವನ್ನು ಪ್ರತ್ಯೇಕವಾಗಿ ಪ್ರೀತಿಸುತ್ತಾನೆ. ಈ ದೃಷ್ಟಿಕೋನದಲ್ಲಿ, ಪ್ರತಿಯೊಬ್ಬ ಭಕ್ತನೂ ತನ್ನದೇ ಆದ "ವೈಯಕ್ತಿಕ ಕೃಷ್ಣ"ನನ್ನು ಪಡೆಯುತ್ತಾರೆ.
ಕೃಷ್ಣನ ಈ ಕೆಲಸವು ಆ ಮಹಿಳೆಯರನ್ನು ಅವರ ಜೀವಮಾನದ ಕಳಂಕದಿಂದ ರಕ್ಷಿಸಿತು. ಸಮಾಜವು ಬಲಿಪಶುಗಳನ್ನು ದೂಷಿಸದಂತೆ, ಆತ ಅವರೊಂದಿಗೆ ನಿಂತ. ಇದು ನಿಸ್ಸಂಶಯವಾಗಿ, ಮಹಿಳೆಯರ- ಶೋಷಿತರ ಹಕ್ಕುಗಳ ಜೊತೆಗೆ ನಿಂತ ಕರುಣಾಮಯಿ ಸಮಾಜ ಸುಧಾರಕನ ಕಥೆ. ಇದು ಕರುಣೆ, ಗೌರವ, ಸಮಾನತೆ ಮತ್ತು ಜವಾಬ್ದಾರಿಯ ಕತೆ. ಇದು ಹಾಸ್ಯಾಸ್ಪದ, ವಿವಾದಾತ್ಮಕ ಕತೆಯಲ್ಲ. ಬದಲಾಗಿ ದೇವರ ಪ್ರೀತಿಯ ಕಾಲಾತೀತ ಸಂದೇಶ.