
ವೈವಾಹಿಕ ಜೀವನವನ್ನು ಸಮತೋಲನದಿಂದ ನಡೆಸುವುದು ಸುಲಭದ ಕೆಲಸವಲ್ಲ. ಚಾಣಕ್ಯನ ನೀತಿಯಂತೆ, ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆ ಬೇಕಾದರೆ ನಡೆ, ಸಹವಾಸ ಮತ್ತು ನಿರ್ಧಾರಗಳಲ್ಲಿ ಎಚ್ಚರಿಕೆ ಅತ್ಯಂತ ಮುಖ್ಯ. ಮಹಿಳೆಯರ ನಡವಳಿಕೆ, ಅವರ ಆಯ್ಕೆಗಳು ಮತ್ತು ಅವರ ಸುತ್ತಲಿನ ವಾತಾವರಣವೇ ವೈವಾಹಿಕ ಜೀವನದ ಭವಿಷ್ಯವನ್ನು ರೂಪಿಸುತ್ತದೆ ಎಂಬುದು ಚಾಣಕ್ಯ ನೀತಿಯ ತಾತ್ಪರ್ಯ. ಹೆಂಗಸರ ನಡವಳಿಕೆ, ವೈವಾಹಿಕ ಜೀವನ ಹೇಗಿರಬೇಕು ಅನ್ನೋದಕ್ಕೂ ಇದರಲ್ಲಿ ಸಾಕಷ್ಟು ತತ್ವಗಳಿವೆ. ಈ ತತ್ವಗಳನ್ನು ವಿವಾಹಿತ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಪತಿ–ಪತ್ನಿಯರ ನಡುವಿನ ಸಂಬಂಧ ಇನ್ನಷ್ಟು ಬಲವಾಗುತ್ತದೆ, ಪ್ರೀತಿ ಮತ್ತು ನಂಬಿಕೆ ಕೂಡ ಗಟ್ಟಿಯಾಗುತ್ತದೆ. ಹಾಗಾದ್ರೆ ನೀತಿಯಲ್ಲಿ ಹೆಂಡತಿಗೆ ಯಾವೆಲ್ಲಾ ನಿಯಮಗಳನ್ನು ಹೇಳಲಾಗಿದೆ ಅನ್ನೋದನ್ನ ನೋಡೋಣ.
ಚಾಣಕ್ಯ ನೀತಿಯ ಪ್ರಕಾರ, ಮದುವೆಯಾದ ನಂತರ ಹೆಂಡತಿ ಗಂಡನಿಂದ ದೀರ್ಘ ಸಮಯ ದೂರ ಇರೋದು ಒಳ್ಳೆಯದಲ್ಲ. ಸಾಧ್ಯವಾದಷ್ಟು ಗಂಡನ ಜೊತೆ ಇರೋಕೆ ಪ್ರಯತ್ನ ಮಾಡಬೇಕು. ಗಂಡ–ಹೆಂಡತಿ ನಡುವೆ ದೂರ ಹೆಚ್ಚಾದರೆ ಮನಸ್ಸಿಗೆ ಒತ್ತಡ ಬರುತ್ತದೆ. ಅದರಿಂದ ಪ್ರೀತಿ, ನಂಬಿಕೆ ನಿಧಾನವಾಗಿ ಕಡಿಮೆಯಾಗೋ ಸಾಧ್ಯತೆ ಇರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಇಂತಹ ಪರಿಸ್ಥಿತಿ ಕಾಣಿಸಿದ್ರೆ ಅದನ್ನು ಲಘುವಾಗಿ ತೆಗೆದುಕೊಳ್ಳದೆ ತಕ್ಷಣ ಸರಿಯಾದ ಕ್ರಮ ತೆಗೆದುಕೊಳ್ಳೋದು ತುಂಬಾ ಮುಖ್ಯ.
ಕೆಟ್ಟ ಸ್ವಭಾವದ ಜನರ ಸಹವಾಸ ಬೇಡ
ಚಾಣಕ್ಯ ನೀತಿ ಹೇಳೋದೇನೆಂದರೆ, ಯಾವುದೇ ಮಹಿಳೆ ಕೆಟ್ಟ ನಡವಳಿಕೆಯ ಜನರ ಜೊತೆಗೆ ಹೆಚ್ಚು ಬೆರೆತರೆ ಅವ್ರ ಜೀವನದ ಮೇಲೆ ಅದರ ಪರಿಣಾಮ ಬೀರುತ್ತದೆ. ಅವರು ಸ್ನೇಹಿತರಾಗಿರಲಿ, ಸಂಬಂಧಿಕರಾಗಿರಲಿ – ಅವರ ಕೆಟ್ಟ ಅಭ್ಯಾಸಗಳು ನಿಮ್ಮ ವೈವಾಹಿಕ ಜೀವನಕ್ಕೆ ನಕಾರಾತ್ಮಕವಾಗಿ ತಟ್ಟಬಹುದು. ಅದಕ್ಕಾಗಿಯೇ ವಿವಾಹಿತ ಮಹಿಳೆಯರು ಯಾರ ಜೊತೆ ಬೆರೆಯಬೇಕು, ಯಾರಿಂದ ದೂರ ಇರಬೇಕು ಅನ್ನೋದನ್ನ ಚೆನ್ನಾಗಿ ಯೋಚಿಸಿ ನಿರ್ಧಾರ ಮಾಡಬೇಕು.
ಚಾಣಕ್ಯ ನೀತಿಐಲ್ಲಿ ಇನ್ನೊಂದು ಪ್ರಮುಖ ಮಾತು ಇದೆ. ಗಂಡನ ಬಗ್ಗೆ ಕೆಟ್ಟದಾಗಿ ಮಾತನಾಡುವ, ನಿಂದಿಸುವ ಜನರಿಂದ ಹೆಂಡತಿ ದೂರ ಇರಬೇಕು ಅಂತ ಹೇಳಲಾಗಿದೆ. ಅಂಥವರ ಮಾತುಗಳನ್ನು ಕೇಳುತ್ತಾ ಹೋದ್ರೆ ನಿಮ್ಮ ಮನಸ್ಸು ಅಶಾಂತವಾಗುತ್ತದೆ. ಗಂಡನ ಮೇಲಿನ ನಂಬಿಕೆ, ಗೌರವ, ಪ್ರೀತಿ ನಿಧಾನವಾಗಿ ಕಡಿಮೆಯಾಗಬಹುದು. ಅದರಿಂದ ವೈವಾಹಿಕ ಜೀವನದಲ್ಲಿ ಅನುಮಾನ, ಗೊಂದಲ, ಒತ್ತಡ ಎಲ್ಲವೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೇರೆಯವರ ಮನೆಯಲ್ಲಿ ಹೆಚ್ಚು ಕಾಲ ಇರೋದು ಸರಿಯಲ್ಲ
ಕೆಲವು ಹೆಂಗಸರಿಗೆ ಯಾರದ್ದಾದರೂ ಮನೆಗೆ ಹೋದ್ರೆ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆಯೋ ಅಭ್ಯಾಸ ಇರುತ್ತದೆ. ಬೇರೆಯವರ ಮನೆಗೆ ಹೋಗೋದು ತಪ್ಪಲ್ಲ, ಆದರೆ ಅಲ್ಲಿ ಅನವಶ್ಯಕವಾಗಿ ದೀರ್ಘ ಸಮಯ ಉಳಿಯೋದು ಒಳ್ಳೆಯದಲ್ಲ. ಶಾಸ್ತ್ರಗಳ ಪ್ರಕಾರ, ವಿವಾಹಿತ ಮಹಿಳೆ ಕಾರಣವಿಲ್ಲದೆ ಬೇರೆಯವರ ಮನೆಯಲ್ಲಿ ಹೆಚ್ಚು ಕಾಲ ಉಳಿಯಬಾರದು. ಅತಿಯಾಗಿ ಅಲ್ಲಿ ಇದ್ದರೆ ತಮ್ಮ ಗೌರವಕ್ಕೂ, ಗಂಡನ ಗೌರವಕ್ಕೂ ಧಕ್ಕೆ ಬರಬಹುದು. ಕೆಲವೊಮ್ಮೆ ಇದು ವೈವಾಹಿಕ ಜೀವನದಲ್ಲಿ ಬಿರುಕು ಮೂಡುವುದಕ್ಕೂ ಕಾರಣವಾಗಬಹುದು.
ಸಮರ್ಪಣೆ ಮನೋಭಾವ ಇರಲಿ
ಒಂದೆಡೆ ವಿಷ್ಣು ದೇವನು ತನ್ನ ವಾಹನವಾದ ಗರುಡನಿಗೆ ಹೇಳೋ ಮಾತು ತುಂಬಾ ಅರ್ಥಪೂರ್ಣ. ಗಂಡ–ಹೆಂಡತಿಯ ಸಂಬಂಧ ಪರಸ್ಪರ ನಂಬಿಕೆ, ಗೌರವ ಮತ್ತು ಸಮರ್ಪಣೆ ಮೇಲೆ ನಿಂತಿರುತ್ತದೆ ಅಂತ. ಅದಕ್ಕಾಗಿಯೇ ಹೆಂಡತಿ ಯಾವ ಸಂದರ್ಭ ಬಂದರೂ ಗಂಡನ ಬೆಂಬಲಕ್ಕೆ ನಿಲ್ಲಬೇಕು. ಇದು ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ಇಬ್ಬರ ಮಧ್ಯೆ ಹೊಂದಾಣಿಕೆ, ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದಂತೆ. ಹಾಗಂತ ಚಾಣಕ್ಯ ನೀತಿ ತಿಳಿಸುತ್ತದೆ.