Chanakya Niti: ಜನ ನಿಮಗೆ ಗೌರವ ಕೊಡ್ತಾ ಇಲ್ವಾ? ಚಾಣಕ್ಯನ ಈ ಮಾತು ಕೇಳಿ!

Published : Dec 24, 2025, 08:50 PM IST
Chanakya Niti

ಸಾರಾಂಶ

ಅಧಿಕಾರದಲ್ಲಿದ್ದೂ ತನಗೆ ಸೂಕ್ತವಾದ ಗೌರವ ಸಿಗ್ತಾ ಇಲ್ಲ ಅಂತ ಕೊರಗುತ್ತಾ ಇದೀರಾ? ಅಧಿಕಾರದಲ್ಲಿ ಇರೋರು ಗೌರವ ಕಾಪಾಡಿಕೊಳ್ಳಬೇಕಾದ್ದು ಹೇಗೆ? ಯಾವುದರಿಂದ ನಿಮಗೆ ಗೌರವ ದೊರೆಯುತ್ತೆ? ಚಾಣಕ್ಯ ನೀತಿ (Chanakya Niti) ಹೇಳಿರೋ ಮಾತು ಕೇಳಿ.

ಆಚಾರ್ಯ ಚಾಣಕ್ಯರ ಪ್ರಕಾರ ಅಧಿಕಾರ ಅಂದ್ರೆ ಜನರ ಚಪ್ಪಾಳೆ, ಪ್ರೀತಿ ಅಥವಾ ಮೆಚ್ಚುಗೆ ಅಲ್ಲ. ಅಧಿಕಾರ ಅಂದ್ರೆ ಕ್ರಮ. ಚಾಣಕ್ಯ ನೀತಿಯ ಪ್ರಕಾರ, ಜನ ಕೋಪಗೊಂಡಾಗ ಒಂದು ದೇಶ ಕುಸಿಯಲ್ಲ. ಜನ ಅಜಾಗರೂಕರಾದಾಗ ಕುಸಿಯುತ್ತೆ. ಆ ಅಜಾಗರೂಕತೆ ಶುರುವಾಗೋದು ಯಾವಾಗ ಅಂದ್ರೆ, ಆಡಳಿತಗಾರನ ಅಧಿಕಾರ ತುಂಬಾ ಪರಿಚಿತವಾಗಿ, ಲಘುವಾದಾಗ. ಸಾರಾಂಶ ಅಂದರೆ, “ರಾಜನನ್ನು ಲಘುವಾಗಿ ತೆಗೆದುಕೊಂಡ ಕ್ಷಣವೇ ದೇಶ ಅಪಾಯಕ್ಕಿಡಾಗುತ್ತದೆ.” ಎಲ್ಲರೂ ತುಂಬಾ ಆರಾಮವಾಗಿ, ಕ್ಯಾಶುಯಲ್ ಆಗಿ, ಪರಿಣಾಮಗಳ ಭಯವೇ ಇಲ್ಲದಂತೆ ಇದ್ದರೆ- ಹೊರಗೆ ನೋಡೋಕೆ ಅದು ಶಾಂತಿಯಂತೆ ಕಾಣಬಹುದು. ಆದ್ರೆ ಅದು ರಾಜನ ನಿಯಂತ್ರಣ ನಿಧಾನವಾಗಿ ಕರಗುತ್ತಿರುವ ಕ್ಷಣ ಎಂದು ಚಾಣಕ್ಯ ಹೇಳ್ತಾರೆ. ಹಾಗಾದ್ರೆ ನಿಮ್ಮನ್ನು ಜನ ಗೌರವದಿಂದ, ಶಿಸ್ತಿನಿಂದ, ಭಯದಿಂದ ಕಾಣುವಂತೆ ಮಾಡೋದು ಹೇಗೆ?

1. ಅತಿಯಾದ ಆರಾಮ ಕೊಡಬೇಡಿ

ಚಾಣಕ್ಯರ ಪ್ರಕಾರ ಮನುಷ್ಯನ ಸ್ವಭಾವ ಕೇವಲ ದಯೆಗೆ ಅಲ್ಲ, ಶಿಸ್ತಿಗೆ ಮಾತ್ರ ಪ್ರತಿಕ್ರಿಯೆ ಕೊಡುತ್ತೆ. ತಮ್ಮ ಕೆಲಸಕ್ಕೆ ತಕ್ಕ ಪರಿಣಾಮ ಬರುತ್ತೆ ಅನ್ನೋ ನಂಬಿಕೆ ಇದ್ದರೆ, ವರ್ತನೆ ಸರಿಹೋಗುತ್ತೆ. ದಯಾವಂತನಾಗಿರು, ಆದರೆ ಯಾವತ್ತೂ ಕ್ಷಮೆ ನೀಡುತ್ತ ಇರಬೇಡ. ಯಾಕಂದ್ರೆ, ಸಡಿಲಿಕೆ ಸಾಮಾನ್ಯವಾಗಿ ಬಿಟ್ಟರೆ ಶಿಸ್ತು ಕರಗುತ್ತೆ. ಜವಾಬ್ದಾರಿ ತಪ್ಪೋದು ಅಭ್ಯಾಸವಾಗುತ್ತೆ. ನಿಯಮಗಳು ಕಾಗದದಲ್ಲಿಯೇ ಉಳಿಯುತ್ತವೆ. ಶಿಕ್ಷೆ ಖಚಿತವಿಲ್ಲದ ಕಡೆ ತಪ್ಪುಗಳು ಹೆಚ್ಚಾಗುತ್ತವೆ.

2. ನಿಜವಾದ ಅಧಿಕಾರ ಮೌನದಲ್ಲಿದೆ

ಚಾಣಕ್ಯ ಗಮನಿಸಿದ ಒಂದು ಸೂಕ್ಷ್ಮ ಸಂಗತಿ ಏನು ಗೊತ್ತಾ? ನಿಜವಾದ ಅಧಿಕಾರ ಆದೇಶ ಕೊಡಬೇಕಾಗಿಲ್ಲ. ಅದು ಸ್ವತಃ ಎಚ್ಚರಿಕೆ ತರುತ್ತೆ. ಅಂತಹ ಜಾಗದಲ್ಲಿ ಜನ ಧ್ವನಿಯನ್ನು ತಗ್ಗಿಸುತ್ತಾರೆ. ಮಾತು ಆಯ್ಕೆ ಮಾಡಿ ಮಾತಾಡುತ್ತಾರೆ. ನಡವಳಿಕೆಗೆ ಮುಂಚೆ ಎರಡು ಸಲ ಯೋಚಿಸುತ್ತಾರೆ. ಅದು ಭಯದಿಂದ ಅಲ್ಲ. ನಿಮ್ಮ ವ್ಯಕ್ತಿತ್ವದ ತೂಕದಿಂದ. ನೀವು ಒಳಗೆ ಬಂದಾಗ ಕೋಣೆಯ ವಾತಾವರಣವೇ ಬದಲಾಗದಿದ್ದರೆ, ನಿಮ್ಮ ಅಧಿಕಾರಕ್ಕೆ ಬೆಲೆಯಿಲ್ಲ.

3. ಎಲ್ಲರಿಗೂ ಇಷ್ಟವಾಗಬೇಕು ಅನ್ನೋ ಆಸೆ ಬೇಡ

ಚಾಣಕ್ಯನಿಗೆ ಜನಪ್ರಿಯತೆಯ ಮೇಲೆ ನಂಬಿಕೆ ಇರಲಿಲ್ಲ. ಯಾಕಂದ್ರೆ ಜನಪ್ರಿಯರಾಗಬೇಕು ಅನ್ನೋ ಆಸೆ ಆಡಳಿತಗಾರರನ್ನು ಕಠಿಣ ನಿರ್ಧಾರಗಳನ್ನು ಮುಂದೂಡಲು ಪ್ರೇರೇಪಿಸುತ್ತದೆ. ಆ ಮುಂದೂಡಿದ ಶಿಸ್ತು ನಂತರ ಅಶಿಸ್ತಾಗಿಬಿಡುತ್ತೆ. ಜನರಿಗೆ ಆರಾಮ ಇಷ್ಟ. ಆದ್ರೆ ಗೌರವ ಬರೋದು ಸ್ಥಿರತೆಯಿಂದ. ಒಬ್ಬ ನಾಯಕ “ನನ್ನ ಬಗ್ಗೆ ಬೇಸರ ಆಗಬಾರದು” ಅಂತ ಸಡಿಲವಾಗ್ತಾ ಹೋದ್ರೆ ನಿಯಮಗಳು ಸಡಿಲವಾಗುತ್ತವೆ, ಮಾನದಂಡಗಳು ಕರಗುತ್ತವೆ. ಇತರರನ್ನು ಬೇಸರಗೊಳಿಸೋಕೆ ಭಯ ಇರುವ ರಾಜನು, ಮುಖ್ಯವಾದದ್ದನ್ನು ರಕ್ಷಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ.

4. ಎಲ್ಲವೂ ಸುಲಭವಾಗಿ ಸಿಗದಿರಲಿ

ಚಾಣಕ್ಯನ ಪ್ರಕಾರ ನಾಯಕತ್ವಕ್ಕೆ ಬೇಕಾದದ್ದು ಜನರಿಗೆ ಸುಲಭವಾಗಿ ಸಿಗುವುದಲ್ಲ. ಕಾಣಬೇಕು, ಆದ್ರೆ ಸಿಗಬಾರದು. ಯಾರಿಗೆ ಬೇಕಾದರೂ ಸಿಗಬಹುದು, ತಕ್ಷಣ ಬೇಡಿಕೆ ಇಡಬಹುದು, ನಿಯಮವಿಲ್ಲದೆ ನಿಮ್ಮನ್ನು ಮುಟ್ಟಬಹುದು ಅಂದ್ರೆ- ಅಧಿಕಾರಕ್ಕೆ ಬೆಲೆಯಿಲ್ಲ. ಅಧಿಕಾರದಲ್ಲಿ ಶ್ರೇಣಿ ಬೇಕು. ತಳಮಟ್ಟದವರು ನೇರಾನೇರ ನಿಮ್ಮ ಬಳಿಗೆ ಬರಬಾರದು. ಅಡೆತಡೆ ಬೇಕು. ಅತಿಯಾದ ಪರಿಚಯ ಅವ್ಯವಸ್ಥೆಗೆ ಕಾರಣ. ಅದು ಮುಂದೆ ಅಶಿಸ್ತಾಗುತ್ತದೆ. ದೂರವೇ ಗೌರವವನ್ನು ಕಾಪಾಡುತ್ತೆ.

5. ತಕ್ಷಣ ಪ್ರತಿಕ್ರಿಯೆ ಕೊಡಬೇಡಿ

ತಕ್ಷಣ ಪ್ರತಿಕ್ರಿಯೆ ನೀಡ್ತಾ ಇದ್ದರೆ, ಜನ ನಿಮ್ಮನ್ನು manipulate ಮಾಡೋದು ಕಲಿಯುತ್ತಾರೆ. ಯಾವ ರಾಜ ಯಾವಾಗಲೂ ತಕ್ಷಣ ಪ್ರತಿಕ್ರಿಯೆ ಕೊಡ್ತಾನೋ, ಅವನ ಭಾವನೆಗಳನ್ನು ಹೇಗೆ ಹ್ಯಾಂಡಲ್‌ ಮಾಡಬೇಕು ಅಂತ ಜನ ಕಲಿತುಕೊಳ್ಳುತ್ತಾರೆ. ಮೌನ ಅಸ್ಥಿರಗೊಳಿಸುತ್ತದೆ. ಅದು ಆತ್ಮಪರಿಶೀಲನೆಗೆ ಒತ್ತಾಯಿಸುತ್ತದೆ. ಪ್ರತಿಕ್ರಿಯೆ ತಡವಾದರೂ, ಪರಿಣಾಮ ಖಚಿತವಾಗಿದ್ದರೆ, ಜಗಳ ಇಲ್ಲದೆ ವರ್ತನೆ ಸುಧಾರಿಸುತ್ತದೆ. ಚಾಣಕ್ಯ ಸೂಚಿಸಿದ ಅರ್ಥ ಇದು: “ನಿಗ್ರಹ ಅಧಿಕಾರವನ್ನು ಕಾಪಾಡುತ್ತದೆ; ಆವೇಶ ಅದನ್ನು ಬಿಚ್ಚಿಡುತ್ತದೆ.” ಮೌನ ದುರ್ಬಲತೆ ಅಲ್ಲ. ಅದು ಶಿಸ್ತು.

6. ದಯೆ ಹೃದಯ ಗೆಲ್ಲುತ್ತದೆ, ನ್ಯಾಯ ಗೌರವ ತರುತ್ತದೆ

ಚಾಣಕ್ಯನಿಗೆ ವೈಯಕ್ತಿಕ ಆತ್ಮೀಯತೆಗಿಂತ ನ್ಯಾಯ ಮುಖ್ಯ. ಪಕ್ಷಪಾತವು, ಕಠಿಣ ನಿಯಮಗಳಿಗಿಂತ ಬೇಗ ನಂಬಿಕೆಯನ್ನು ಕೊಲ್ಲುತ್ತದೆ. ಆರಾಮ ಸಂಬಂಧದ ಮೇಲೆ ನಿಂತಿದೆ ಅನ್ನೋ ಭಾವನೆ ಬಂದಾಗ, ಅಸಮಾಧಾನ ಒಳಗೊಳಗೇ ಬೆಳೆಯುತ್ತೆ. ಸ್ಥಿರತೆ ಭದ್ರತೆ ಕೊಡುತ್ತೆ. ಮೂಡ್ ಗೊಂದಲ ಸೃಷ್ಟಿಸುತ್ತದೆ. ಚಾಣಕ್ಯನ ಪ್ರಕಾರ ನಾಯಕನು ಭಾವನೆಗಳಲ್ಲಿ ಅಲ್ಲ, ತತ್ವಗಳಲ್ಲಿ ಮಾತನಾಡಬೇಕು. ಆಗ ನಿಯಂತ್ರಣ ಹೇರಿಕೆಯಂತೆ ಅಲ್ಲ, ನ್ಯಾಯದಂತೆ ಕಾಣುತ್ತದೆ.

7. ಭಯ ತಾತ್ಕಾಲಿಕ; ಖಚಿತತೆ ಶಾಶ್ವತ

ಚಾಣಕ್ಯ ದೀರ್ಘಕಾಲಕ್ಕೆ ಭಯವನ್ನು ಸಾಧನವಾಗಿ ಒಪ್ಪಲಿಲ್ಲ. ಭಯದಿಂದ ಬರುವುದೇ ವಿಧೇಯತೆ ಹೊರತು ಶಿಸ್ತು ಅಲ್ಲ. ಅವನು ನಂಬಿದ್ದದ್ದು ಖಚಿತತೆ. ಪ್ರತಿಯೊಂದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಬರುತ್ತೆ ಅನ್ನೋ ನಂಬಿಕೆ. ಜನ ನಾಯಕನಿಗೆ ಭಯಪಡುವ ಅಗತ್ಯವಿಲ್ಲ. ಪರಿಣಾಮಗಳು predictable ಆಗಿದ್ರೆ, ನಿಯಂತ್ರಣ ಸ್ವಾಭಾವಿಕವಾಗುತ್ತದೆ.

 

PREV
Read more Articles on
click me!

Recommended Stories

Numerology: ಈ ದಿನಾಂಕದಲ್ಲಿ ಜನಿಸಿದವರು ಹೆಚ್ಚಾಗಿ ಒಂಟಿಯಾಗಿಯೇ ಉಳಿದುಬಿಡುತ್ತಾರೆ!
New year 2026: ಹೊಸ ವರ್ಷದ ಮೊದಲ ದಿನ ಇದನ್ನ ಮಾಡಿದ್ರೆ… ವರ್ಷಪೂರ್ತಿ ಹಾಳಾಗೋದು ಗ್ಯಾರಂಟಿ